ಯಾವ ಕಾಲದ ಶಾಸ್ತ್ರವೇನು ಹೇಳಿದರೇನು? - ಕುವೆಂಪು
ಕರ್ತೃ ಕೃತಿ ಪರಿಚಯ:
ಹೊಸಗನ್ನಡದ ಮೊದಲ ಮಹಾಕವಿ ಎಂದೇ ಖ್ಯಾತರಾಗಿದ್ದ ಕೆ.ವಿ. ಪುಟ್ಟಪ್ಪನವರು ಕನ್ನಡ ಸಾಹಿತ್ಯಕ್ಕೆ 'ಕುವೆಂಪು' ಕಾವ್ಯನಾಮದಿಂದಲೇ ಸುಪ್ರಸಿದ್ಧರಾದವರು. ಕನ್ನಡ ನವೋದಯದ ಹಳೆಯ ತಲೆಮಾರಿನ ಪ್ರಮುಖ ಕವಿಗಳಲ್ಲೂ ಭಾವಗೀತಕಾರರಲ್ಲೂ ಒಬ್ಬರಾಗಿದ್ದ ಕುವೆಂಪು ಅವರು ಕವಿ-ಮಹಾಕವಿಯಾಗಿ ಹೆಸರು ಮಾಡಿದಂತೆಯೇ, ಶ್ರೇಷ್ಠ ರಮ್ಯ ವಿಮರ್ಶಕರಾಗಿಯೂ, ಶ್ರೇಷ್ಠ ಸಾಮಾಜಿಕ ಕಾದಂಬರಿಕಾರರಾಗಿಯೂ, ನಾಟಕಕಾರರಾಗಿಯೂ, ಪ್ರಬಂಧಕಾರರಾಗಿಯೂ, ಸಣ್ಣಕತೆಗಾರರಾಗಿಯೂ, ಜೀವನಚರಿತ್ರೆ ಹಾಗೂ ಆತ್ಮಚರಿತ್ರೆಕಾರರಾಗಿಯೂ ಬಹುದೊಡ್ಡ ಸಾಧನೆ ಮಾಡಿದವರು. **'ಯುಗದ ಕವಿ ಜಗದ ಕವಿ'** ಎಂದು ಖ್ಯಾತರಾಗಿದ್ದ ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅತ್ಯುತ್ಕೃಷ್ಟವಾದದ್ದು!
ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪನ ಮಗ ಪುಟ್ಟಪ್ಪ 1904 ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದ ಕುವೆಂಪು ಅವರ ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಕುಪ್ಪಳ್ಳಿ, ತೀರ್ಥಹಳ್ಳಿ, ಶಿವಮೊಗ್ಗ, ಮೈಸೂರುಗಳಲ್ಲಿ ತಮ್ಮ ವಿದ್ಯಾಭ್ಯಾಸ ಪೂರೈಸಿದ ಕುವೆಂಪು ಅವರು ಮೈಸೂರು ಮಹಾರಾಜ ಕಾಲೇಜಿನಿಂದ ಬಿ.ಎ. (ಆನರ್ಸ್) ಪದವಿಯನ್ನೂ, ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿಯನ್ನೂ ಪಡೆದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ ಕುವೆಂಪು ಅವರು, ನಂತರ ಮೈಸೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ಕೊನೆಗೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಇಂದು 'ಮಾನಸಗಂಗೋತ್ರಿ' ಎಂದು ಸುಪ್ರಸಿದ್ಧವಾಗಿರುವ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದ ಹೆಗ್ಗಳಿಕೆ ಕುವೆಂಪು ಅವರಿಗೆ ಸಲ್ಲುತ್ತದೆ. 'ಮಾನಸಗಂಗೋತ್ರಿ' ಕುವೆಂಪು ಅವರ ಬಹುದೊಡ್ಡ ಕನಸು; ಅದರ ಸಾಕಾರ ರೂಪವೇ ಇಂದಿನ ಶೈಕ್ಷಣಿಕ ಆವರಣ. ಇದು ಅವರ ಕುಲಪತಿ ಅಧಿಕಾರಾವಧಿಯಲ್ಲಿನ ಬಹುದೊಡ್ಡ ಸಾಧನೆ!
ವಿದ್ಯಾರ್ಥಿ ದೆಸೆಯಿಂದಲೇ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯಗಳ ಆಳವಾದ ಅಧ್ಯಯನ ಮಾಡಿದವರು ಕುವೆಂಪು. ಈ ಅಧ್ಯಯನ ಅವರೊಬ್ಬ ಕನ್ನಡದ ಅದ್ವಿತೀಯ ಪ್ರತಿಭೆಯಾಗಿ, ಕವಿಯಾಗಿ, ಮಹಾಕವಿಯಾಗಿ ಬೆಳೆಯಲು ನಾಂದಿಯಾಯಿತು. ಮೊದಮೊದಲು ಇಂಗ್ಲಿಷ್ ಸಾಹಿತ್ಯದ ಬಗೆಗೆ ವಿಶೇಷ ಆಸಕ್ತಿ ಹೊಂದಿದ್ದು, 'ಕನ್ನಡದಲ್ಲೇನಿದೆ?' ಎಂದು ಕನ್ನಡವನ್ನು ತಿರಸ್ಕಾರದಿಂದ ಕಾಣುತ್ತಿದ್ದ ಕುವೆಂಪು ಅವರು 1922 ರಲ್ಲಿ 'ಬಿಗಿನರ್ಸ್ ಮ್ಯೂಸ್' (Beginner's Muse) ಇಂಗ್ಲಿಷ್ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರ ಪ್ರವೇಶಿಸಿದರು. ಆದರೆ ಕುವೆಂಪು ಅವರಿಗೆ ತಾಯ್ನುಡಿಯ ಮಹತ್ವವನ್ನು ವಿವರಿಸಿ, ಆ ತಾಯ್ನುಡಿಯಲ್ಲಿ ಸಮರ್ಥವಾಗಿ ಅಭಿವ್ಯಕ್ತಿಸುವಂತೆ, ಒತ್ತಾಯದಿಂದ ಕಲಿತ ಅನ್ಯಭಾಷೆಯಲ್ಲಿ ಭಾವನೆಗಳನ್ನು ಪೂರ್ಣವಾಗಿ ಅಭಿವ್ಯಕ್ತಿಸಲು ಸಾಧ್ಯವಿಲ್ಲವೆಂದು ಹೇಳಿ, ಕನ್ನಡದಲ್ಲಿ ಕಾವ್ಯ ರಚಿಸಲು ಪ್ರೇರೇಪಿಸಿ, ಕನ್ನಡ ಸಾಹಿತ್ಯಕ್ಕೆ ಕುವೆಂಪು ಅವರನ್ನು ತಂದುಕೊಟ್ಟ ಶ್ರೇಯಸ್ಸು ಐರಿಷ್ ಆಂಗ್ಲ ಕವಿ ಜೇಮ್ಸ್ ಕಸಿನ್ಸ್ಅ ವರಿಗೆ ಸಲ್ಲುತ್ತದೆ.
1925 ರಲ್ಲಿ 'ಅಮಲನ ಕಥೆ'ಯ ಮೂಲಕ ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ ಕುವೆಂಪು ಅವರ ಮೊತ್ತಮೊದಲ ಕವನ ಸಂಕಲನ 'ಕೊಳಲು'. ಅಲ್ಲಿಂದ ಅವರ ದೈತ್ಯ ಪ್ರತಿಭೆ ಮುಂದೆ ಓತಪ್ರೋತವಾಗಿ ಹರಿದು ಕುವೆಂಪು ಅವರನ್ನು 'ಮಹಾಕವಿ'ಯನ್ನಾಗಿಸುವ ಮಟ್ಟಕ್ಕೆ ಬಂದು ಮುಟ್ಟಿತು. ಕುವೆಂಪು ಅವರು ಕಾವ್ಯ-ಮಹಾಕಾವ್ಯಗಳಲ್ಲದೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲೂ ಅತ್ಯುತ್ತಮ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಬಹು ಸಮೃದ್ಧಗೊಳಿಸಿದ್ದಾರೆ.
ಕೃತಿಗಳು:
ಕವನ ಸಂಕಲನಗಳು: 'ಕೊಳಲು', 'ಕದರಡಿಕೆ', 'ಅಗ್ನಿಹಂಸ', 'ಕಲಾಸುಂದರಿ', 'ಜೇನಾಗುವಾ', 'ಷೋಡಶಿ', 'ಅನುತ್ತರ', 'ಚಂದ್ರಮಂಚಕೆ ಬಾ ಚಕೋರಿ', 'ಪ್ರೇಮ ಕಾಶ್ಮೀರ', 'ಕೋಗಿಲೆ ಮತ್ತು ಸೋವಿಯಟ್ ರಷ್ಯಾ', 'ಪಾಂಚಜನ್ಯ' ಮುಂತಾದವು.
ನಾಟಕಗಳು: 'ಜಲಗಾರ', 'ಚಂದ್ರಹಾಸ', 'ಮಹಾರಾತ್ರಿ', 'ಸ್ಮಶಾನ ಕುರುಕ್ಷೇತ್ರಂ', 'ಶೂದ್ರ ತಪಸ್ವಿ'.
ರೂಪಾಂತರ ನಾಟಕಗಳು: 'ರಕ್ತಾಕ್ಷಿ' (ಷೇಕ್ಸ್ಪಿಯರ್ನ 'ಹ್ಯಾಮ್ಲೆಟ್' ನಾಟಕದ ರೂಪಾಂತರ) ಮತ್ತು 'ಬಿರುಗಾಳಿ' (ಷೇಕ್ಸ್ಪಿಯರ್ನ 'ಟೆಂಪೆಸ್ಟ್' ನಾಟಕದ ರೂಪಾಂತರ).
ಸಾಮಾಜಿಕ ಮಹಾಕಾದಂಬರಿಗಳು: 'ಕಾನೂರು ಹೆಗ್ಗಡತಿ' (ಕಾನೂರು ಸುಬ್ಬಮ್ಮ ಹೆಗ್ಗಡತಿ) ಮತ್ತು 'ಮಲೆಗಳಲ್ಲಿ ಮದುಮಗಳು'.
ಖಂಡಕಾವ್ಯ: 'ಚಿತ್ರಾಂಗದಾ'.
ಮಹಾಕಾವ್ಯ: 'ಶ್ರೀರಾಮಾಯಣ ದರ್ಶನಂ' ಇವರ ಜಗತ್ಪ್ರಸಿದ್ಧ ಮೇರುಕಾವ್ಯ ಅಥವಾ ಹೊಸಗನ್ನಡದ ಮೊದಲ ಮಹಾಕಾವ್ಯ.
ಜೀವನ ಚರಿತ್ರೆಗಳು: 'ಶ್ರೀರಾಮಕೃಷ್ಣ ಪರಮಹಂಸರು' ಮತ್ತು 'ಸ್ವಾಮಿ ವಿವೇಕಾನಂದ'.
ವಿಮರ್ಶಾ ಕೃತಿಗಳು: 'ಕಾವ್ಯ ವಿಹಾರ', 'ಸರೋವರದ ಸಿರಿಗನ್ನಡಿ', 'ದ್ರೌಪದಿಯ ಶ್ರೀಮುಡಿ'.
ಕಾವ್ಯಮೀಮಾಂಸೆ: 'ರಸೋವೈ ಸಃ'.
ವೈಚಾರಿಕ ಕೃತಿಗಳು: 'ನಿರಂಕುಶಮತಿಗಳಾಗಿ', 'ತಪೋನಂದನ' ಮುಂತಾದವು.
ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 70 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಕುವೆಂಪು ಅವರ ದೈತ್ಯ ಸಾಹಿತ್ಯ ಸಾಧನೆಗೆ ಪ್ರಶಸ್ತಿಗಳ ಸರಮಾಲೆಯೇ ಸಂದಿದೆ. ಅವರ 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯಕ್ಕೆ ಕನ್ನಡದಲ್ಲಿ ಪ್ರಪ್ರಥಮವಾಗಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ರಾಷ್ಟ್ರಕವಿ, ಕರ್ನಾಟಕ ರತ್ನ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳು ಕುವೆಂಪು ಅವರಿಗೆ ಸಂದ ಕೆಲ ಪ್ರಮುಖ ಪ್ರಶಸ್ತಿಗಳಾಗಿವೆ.
ತಿರುಳು:
'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕುವೆಂಪು ಅವರ ಅಪ್ಪಟ ವೈಚಾರಿಕ ಪ್ರಜ್ಞೆಯ ಮಹತ್ವದ ಕವನಗಳಲ್ಲಿ ಒಂದು. ಅವರದು ಅನನ್ಯ ಮಾನವತೆಯಿಂದ ಕೂಡಿದ ವೈಚಾರಿಕ ಪ್ರಜ್ಞೆ. ಮಾನವತೆಯೇ ನಿಜವಾದ ಶಾಸ್ತ್ರ, ಧರ್ಮ, ಧರ್ಮನಿಧಿ, ಧರ್ಮಸೂತ್ರ ಎನ್ನುವ ಅಪ್ಪಟ ವೈಚಾರಿಕತೆ ಕುವೆಂಪು ಅವರದು. ಅಂತೆಯೇ, ಮಾನವತೆಯಿಲ್ಲದ ಶಾಸ್ತ್ರ, ಧರ್ಮ, ಧರ್ಮಸೂತ್ರಗಳನ್ನು ಅವರು ತುಂಬಾ ಕಟುವಾಗಿ ವಿಡಂಬಿಸುತ್ತಾರೆ. ಎಷ್ಟು ಕಟುವಾಗಿ ವಿಡಂಬಿಸುತ್ತಾರೆಂದರೆ, ಮಾನವತೆಯಿಲ್ಲದ ಶಾಸ್ತ್ರ, ಧರ್ಮ, ಧರ್ಮಸೂತ್ರ, ಧರ್ಮನಿಧಿಗಳನ್ನು ಹಾಗೂ ಅಂತಹ ಋಷಿ-ಮುನಿಗಳಿದ್ದರೆ ಅವರನ್ನೂ ಅದೇ ಶಾಸ್ತ್ರದ ಗ್ರಂಥಗಳಲ್ಲಿ ಸುತ್ತಿ, ಸ್ವರ್ಗ ಬರಲಿ, ನರಕವಾದರೂ ಬರಲಿ ಅದನ್ನು ವಿಚಾರಿಸದೆ ಎತ್ತಿ ಆಚೆಗೆ ಎಸೆದುಬಿಡುವಂತೆ ಹೇಳುತ್ತಾರೆ!
ಎದೆಯ ದನಿಗಿಂತ ಅಥವಾ ಮಾನವತೆಗಿಂತ ಮಿಗಿಲಾದ ಶಾಸ್ತ್ರವಿಲ್ಲ. ಮನು-ಮುನಿ ಎಂದೋ ಬರೆದಿಟ್ಟದ್ದು ನಮಗೆ ಕಟ್ಟಳೆಯಾಗಬೇಕಿಲ್ಲ. ಅವರ ಶಾಸ್ತ್ರ ಅವರ ಕಾಲಕ್ಕೆ ಮಾತ್ರ. ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ನಮ್ಮ ಹೃದಯವೇ ಅಥವಾ ಮಾನವತೆಯೇ ನಮಗೆ ಧರ್ಮಸೂತ್ರ ಎನ್ನುವ ಕುವೆಂಪು ಅವರ ಮಾನವೀಯ ವೈಚಾರಿಕ ಪ್ರಜ್ಞೆಯೇ ಈ ಕವನದ ಆಶಯವಾಗಿದೆ.
ಸರಳಾನುವಾದ:
1. ಯಾವ ಕಾಲದ ಶಾಸ್ತ್ರವಾದರೇನು? ಅದು ಏನು ಹೇಳಿದರೇನು? ಎದೆಯ ಧ್ವನಿಗೆ ಮಿಗಿಲಾದ ಶಾಸ್ತ್ರವಿದೆಯೇನು? ಎಂದೋ ಮನು ಮುನಿ ಬರೆದಿಟ್ಟದ್ದು ಇಂದು ನಮಗೆ ಕಟ್ಟೇನು? ನಿನ್ನ ಎದೆಯ ಧ್ವನಿಯೇ ಋಷಿ, ನಿನಗೇ ನೀನೇ ಮನು!
2. ನೀರಡಿಸಿ ಬಂದ ಸೋದರನಿಗೆ ನೀರನ್ನು ಕೊಡಲು ಮನುಧರ್ಮಶಾಸ್ತ್ರವನ್ನು ನೋಡಬೇಕೇನು? ನೊಂದವರ ಕಂಬನಿಯನ್ನು ಒರೆಸಿ ಸಂತೈಸಲು ಅದಕ್ಕೆ ಶಾಸ್ತ್ರ ಪ್ರಮಾಣ ಬೇಕೇನು? ಪಂಚಮರ (ಅಸ್ಪೃಶ್ಯರ) ಶಿಶುವೊಂದು ಕೆರೆಯಲ್ಲಿ ಮುಳುಗುತ್ತಿದ್ದರೆ, ದಡದಲ್ಲಿ ಮೀಯುತ್ತ (ಸ್ನಾನ ಮಾಡುತ್ತ) ನಿಂತ ನಾನು, ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು ಸುಮ್ಮನಿದ್ದರೆ ಅದು ಶಾಸ್ತ್ರ ಸಮ್ಮತವೇನು?
3. ಅಂತೂ ಮನು (ಮನುಮುನಿ) ಇದನ್ನು ಹೇಳಿರಲಾರ. ಒಂದು ವೇಳೆ ಹೇಳಿದ್ದರೂ ಅವನನ್ನೂ ಶಾಸ್ತ್ರದಲ್ಲಿ ಸುತ್ತಿ, ಸ್ವರ್ಗ ಹೋದರೆ ಹೋಗಲಿ, ಮತ್ತೆ ನರಕ ಬಂದರೂ ಬರಲಿ, ಎದೆಯ ಧೈರ್ಯವನ್ನು ಮಾಡಿ ಎತ್ತಿ ಆಚೆಗೆ ಬಿಸಾಡಿ!
4. ಸ್ವರ್ಗ ಹೋಗುವುದಿಲ್ಲ; ನರಕ ಬರುವುದಿಲ್ಲ. ಸ್ವರ್ಗ-ನರಕಗಳೇನು ಶಾಸ್ತ್ರಸ್ಥವಲ್ಲ (ಶಾಸ್ತ್ರದಲ್ಲಿ ನೆಲೆಸಿಲ್ಲ). ಎದೆಯ ಧ್ವನಿಯೇ ಧರ್ಮನಿಧಿ! ಕರ್ತವ್ಯವೇ ವಿಧಿ! ಅದನ್ನು ನಂಬು. ಅದನ್ನು ಬಿಟ್ಟು ಬೇರೆ ಋಷಿಯಿಲ್ಲ!
5. ಹಿಂದಿನ ಋಷಿಗಳೂ ನಮ್ಮಂತೆ ಮಾನವರೇ. ಅವರ ಶಾಸ್ತ್ರ ಅವರ ಕಾಲಕ್ಕೆ ಮಾತ್ರ. ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ!
ಪ್ರಬಂಧ ರೂಪದ ಪ್ರಶೋತ್ತರಗಳು:
ಪ್ರ.1. 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕವನದ ಸ್ವಾರಸ್ಯವನ್ನು ನಿರೂಪಿಸಿರಿ.
(ಅಥವಾ)
ಪ್ರ. 2. ' ಮಾನವತೆಯೇ ನಿಜವಾದ ಶಾಸ್ತ್ರ, ಧರ್ಮನಿಧಿ; ಧರ್ಮಸೂತ್ರ' - ಕವಿಯ ಈ ವೈಚಾರಿಕ ಪ್ರಜ್ಞೆ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕವನದಲ್ಲಿ ವ್ಯಕ್ತವಾದ ಬಗೆಯನ್ನು ಕುರಿತು ವಿವೇಚಿಸಿರಿ.
(ಅಥವಾ)
ಪ್ರ. 3. ಮನುಷ್ಯತ್ವವಿಲ್ಲದ ಶಾಸ್ತ್ರ, ಧರ್ಮ, ಧರ್ಮಸೂತ್ರಗಳಿಂದ ಯಾವ ಪ್ರಯೋಜನವೂ ಇಲ್ಲ ಎಂಬುದನ್ನು ಕುವೆಂಪು ಅವರು ಪ್ರತಿಪಾದಿಸುವುದು ಹೇಗೆ? ವಿಶ್ಲೇಷಿಸಿರಿ.
(ಅಥವಾ)
ಪ್ರ. 4. ಮನುಷ್ಯತ್ವವಿಲ್ಲದ ಶಾಸ್ತ್ರ, ಧರ್ಮ, ಧರ್ಮಸೂತ್ರಗಳ ತೀಕ್ಷ್ಣ ವಿಡಂಬನೆ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕವನದಲ್ಲಿ ಹೇಗೆ ವ್ಯಕ್ತವಾಗಿದೆ? ವಿವರಿಸಿರಿ. *(ಅಥವಾ)*
ಪ್ರ. 5. ಮಾನವತೆಯಿಲ್ಲದ ಶಾಸ್ತ್ರ, ಧರ್ಮ ಹಾಗೂ ಧರ್ಮಸೂತ್ರಗಳನ್ನು ಕವಿ ವಿಡಂಬಿಸುವುದು ಹೇಗೆ? ವಿವರಿಸಿರಿ.
ಉತ್ತರ: 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕುವೆಂಪು ಅವರ ಅಪ್ಪಟ ವೈಚಾರಿಕ ಪ್ರಜ್ಞೆಯ ಮಹತ್ವದ ಕವನಗಳಲ್ಲಿ ಒಂದು. ಕುವೆಂಪು ಅವರ 'ಮನುಜಮತ, ವಿಶ್ವಪಥ' ಎಂಬ ಮಾನವತೆಯ ತಳಹದಿಯ ಮೇಲೆ ರಚಿತವಾಗಿರುವುದು ಈ ಕವನದ ವಿಶೇಷತೆ. ಕುವೆಂಪು ಅವರ ಅಪ್ಪಟ ವೈಚಾರಿಕ ಪ್ರಜ್ಞೆ ಈ ಕವನದಲ್ಲಿ ತುಂಬಾ ಧ್ವನಿಪೂರ್ಣವಾಗಿ ಅಭಿವ್ಯಕ್ತಿಗೊಂಡಿದೆ. 'ಮಾನವತೆ' ಅವರ ಒಟ್ಟು ಬರವಣಿಗೆಯ ಮೂಲ ತವನಿಧಿ. ನಮ್ಮ ಶಾಸ್ತ್ರ, ಧರ್ಮ, ಧರ್ಮಸೂತ್ರಗಳು ಮಾನವತೆಯಿಂದ ಕೂಡಿರಬೇಕೇ ಹೊರತು, ಅಮಾನವತೆಯ ಅಸ್ತ್ರಗಳಾಗಬಾರದು; ಮನುಷ್ಯನನ್ನು ನಿಕೃಷ್ಟವಾಗಿ ಕಾಣುವ ಕಟ್ಟಳೆ, ವಿಧಿ-ವಿಧಾನಗಳಾಗಿರಬಾರದು. ನಮ್ಮ ಎದೆಯ ದನಿಯೇ ಅಥವಾ ಮನುಷ್ಯತ್ವವೇ ಶಾಸ್ತ್ರ, ಧರ್ಮ, ಧರ್ಮಸೂತ್ರಗಳ ಮೂಲ ತಿರುಳಾಗಬೇಕು; ತವನಿಧಿಯಾಗಬೇಕು. ಅದನ್ನು ಹೊರತುಪಡಿಸಿದ ಅಮಾನವೀಯ ಶಾಸ್ತ್ರ, ಧರ್ಮ, ಧರ್ಮಸೂತ್ರಗಳಿದ್ದರೆ, ಅಂಥಹ ಋಷಿ-ಮುನಿಗಳಿದ್ದರೆ ಅವರನ್ನೆಲ್ಲ ಅದೇ ಶಾಸ್ತ್ರದ ಗ್ರಂಥಗಳಲ್ಲಿ ಸುತ್ತಿ ಆಚೆಗೆ ಎಸೆದುಬಿಡಬೇಕು. ಇದರಿಂದ ಯಾವ ನರಕವೂ ಬಾರದು ಎಂಬ ತೀಕ್ಷ್ಣ ವೈಚಾರಿಕ ಪ್ರಜ್ಞೆ ಕುವೆಂಪು ಅವರದು! ಈ ತಮ್ಮ ವೈಚಾರಿಕ ನಿಲುವನ್ನು ಕುವೆಂಪು ಅವರು ಈ ಕವನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ.
ಯಾವ ಕಾಲದ ಶಾಸ್ತ್ರವಾದರೂ ಅದು ಮಾನವತೆಯನ್ನೇ ಹೇಳಬೇಕು; ಮನುಷ್ಯತ್ವವನ್ನೇ ಸಾರಬೇಕು. ಅದನ್ನು ಬಿಟ್ಟು ಮನುಷ್ಯತ್ವವಿಲ್ಲದ ಕಟ್ಟಳೆ, ವಿಧಿ-ವಿಧಾನಗಳನ್ನು ಪ್ರತಿಪಾದಿಸಿದರೆ, ಆ ಶಾಸ್ತ್ರದಿಂದ ಯಾವ ಪ್ರಯೋಜನವೂ ಇಲ್ಲ. ನಿಜವಾದ ಶಾಸ್ತ್ರವೆಂದರೆ, ಮಿಗಿಲಾದ ಶಾಸ್ತ್ರವೆಂದರೆ ನಮ್ಮ ಎದೆಯ ದನಿ ಅಥವಾ ಮಾನವತೆ! ಈ ಎದೆಯ ದನಿ ಅಥವಾ ಮಾನವತೆಗೆ ಮಿಗಿಲಾದ ಶಾಸ್ತ್ರವಿಲ್ಲ. ಮಾನವತೆಯಿಲ್ಲದ ಶಾಸ್ತ್ರ ನಮಗೆ ಕಟ್ಟಳೆಗಳನ್ನು ವಿಧಿಸುತ್ತದೆಯೇ ಹೊರತು ಬೇರಾವ ಪ್ರಯೋಜನಕ್ಕೂ ಬಾರದು. ಎಂದೋ ಮನು ಮುನಿ ಬರೆದಿಟ್ಟದ್ದು ಇಂದು ನಮಗೆ ಕಟ್ಟಾಗಬೇಕಿಲ್ಲ, ನಮ್ಮೆದೆಯ ದನಿಯೇ ನಮಗೆ ಋಷಿ, ನಮಗೆ ನಾವೇ ಮನು! ಎಲ್ಲಿ ಮಾನವತೆಯಿರುತ್ತದೆಯೋ ಅಲ್ಲಿ ಋಷಿ ಇರಬೇಕು, ಇರುತ್ತಾನೆ. ನಮಗೆ ನಾವೇ ಮನುವಾಗಬೇಕಾದರೆ ನಮ್ಮ ಎದೆ ಮಾನವತೆಯ ಆಗರವಾಗಬೇಕು.
ಶಾಸ್ತ್ರಕ್ಕೆ ಮನುಷ್ಯತ್ವ ಬೇಕು, ಆ ಮನುಷ್ಯತ್ವವೇ ಅದಕ್ಕೆ ಬಹುಮುಖ್ಯ ಎಂಬುದನ್ನು ಕುವೆಂಪು ಅವರು ಇಲ್ಲಿ ಬಹು ಧ್ವನಿಪೂರ್ಣವಾಗಿ ಪ್ರತಿಪಾದಿಸುತ್ತಾರೆ. ಅದಕ್ಕೆ ಅವರು ಕೊಡುವ ದೃಷ್ಟಾಂತಗಳು ತುಂಬಾ ಔಚಿತ್ಯಪೂರ್ಣವಾಗಿವೆ. ನೀರಡಿಸಿ ಬಂದ ಸೋದರನಿಗೆ ಅಥವಾ ನೀರಡಿಸಿ ಬಂದವನಿಗೆ ನೀರು ಕೊಡುವುದೇ ಮಾನವತೆ. ಅದೇ ಧರ್ಮ; ಅದೇ ಧರ್ಮನಿಧಿ; ಅದೇ ಧರ್ಮಸೂತ್ರ! ಇದನ್ನು ಬಿಟ್ಟು ನೀರಡಿಸಿ ಬಂದವನಿಗೆ ನೀರು ಕೊಡಬೇಕೋ, ಬೇಡವೋ ಎಂಬುದನ್ನು ಮನುಧರ್ಮಶಾಸ್ತ್ರ ಹೇಳಬೇಕಾಗಿಲ್ಲ. ನೀರಡಿಸಿ ಬಂದವನಿಗೆ ನೀರು ಕೊಡುವುದು ಶಾಸ್ತ್ರದ ಸಂಗತಿಯಲ್ಲ, ಅದು ಎದೆಯ ದನಿಯ ಸಂಗತಿ ಅಥವಾ ಹೃದಯಕ್ಕೆ ಸಂಬಂಧಿಸಿದ ಮಾನವತೆಯ ಸಂಗತಿ!
ಹಾಗೆಯೇ, ನೊಂದವರ ಕಂಬನಿಯನ್ನು ಒರೆಸಿ ಸಂತೈಸಲು ಅದಕ್ಕೆ ಶಾಸ್ತ್ರ ಪ್ರಮಾಣವೇನೂ ಬೇಕಿಲ್ಲ. ನೊಂದವರ ಕಂಬನಿಯನ್ನು ಒರೆಸಿ ಸಂತೈಸುವುದು ಮಾನವೀಯತೆಯೇ ಹೊರತು ಶಾಸ್ತ್ರದ ವಿಷಯವಲ್ಲ. ಪಂಚಮರ ಅಥವಾ ಅಸ್ಪೃಶ್ಯರ ಶಿಶುವೊಂದು ಕೆರೆಯಲ್ಲಿ ಮುಳುಗುತ್ತಿದ್ದರೆ ಎತ್ತಿ ಕಾಪಾಡುವುದು ಮನುಷ್ಯತ್ವಕ್ಕೆ ಅಥವಾ ಮಾನವತೆಗೆ ಸಂಬಂಧಿಸಿದ ಮಾತು. ಅದನ್ನು ಬಿಟ್ಟು, ಕೆರೆಯಲ್ಲಿ ಮುಳುಗುತ್ತಿರುವ ಪಂಚಮರ ಶಿಶುವನ್ನು ದಡದಲ್ಲಿ ಮೀಯುತ್ತ ನಿಂತ ನಾವು, ಮುಟ್ಟಿದರೆ ಬ್ರಹ್ಮತ್ವ ಕೆಟ್ಟುಹೋಗುವುದೆಂದು ಸುಮ್ಮನಿದ್ದರೆ ಅದು ಶಾಸ್ತ್ರ ಸಮ್ಮತವಲ್ಲ. ಕೆರೆಯಲ್ಲಿ ಮುಳುಗುತ್ತಿರುವ ಪಂಚಮರ ಶಿಶುವನ್ನು ಮುಟ್ಟಿದರೆ ಬ್ರಹ್ಮತ್ವ ಕೆಡುವುದಿಲ್ಲ; ಮುಳುಗುತ್ತಿದ್ದ ಮಗುವನ್ನು ಎತ್ತಿ ತೆಗೆದು ಜೀವ ಉಳಿಸದಿದ್ದರೆ ಬ್ರಹ್ಮತ್ವ ಕೆಡುತ್ತದೆ. ಮುಳುಗುತ್ತಿರುವ ಶಿಶುವನ್ನು ಬದುಕಿಸುವ ಮಾನವತೆಯೇ ನಿಜವಾದ ಬ್ರಹ್ಮತ್ವ ಎನ್ನುವುದು ಕುವೆಂಪು ಅವರ ವೈಚಾರಿಕ ನಿಲುವು! ಇಂಥ ನಿಲುವು ಮಾತ್ರವೇ ಶಾಸ್ತ್ರ ಸಮ್ಮತವಾದುದೆಂಬುದು ಅವರ ವಿಚಾರ.
ಅಂತೂ ಮಾನವತೆಯಿಲ್ಲದ ಶಾಸ್ತ್ರವನ್ನು ಮನು ಮುನಿ ಹೇಳಿರಲಾರ; ಒಂದು ವೇಳೆ ಆತ ಹೇಳಿದ್ದರೆ, ಅವನನ್ನೂ ಸಹಿತ ಆ ಶಾಸ್ತ್ರದಲ್ಲಿ ಸುತ್ತಿ, ಸ್ವರ್ಗ-ನರಕಗಳ ಬಗ್ಗೆ ವಿಚಾರಿಸದೆ ಎತ್ತಿ ಆಚೆಗೆ ಎಸೆದುಬಿಡುವಂತೆ ಹೇಳುತ್ತಾರೆ ಕುವೆಂಪು. ಮಾನವತೆಯಿಲ್ಲದ ಶಾಸ್ತ್ರ-ಮುನಿಗೆ ಕುವೆಂಪು ಕೊಡುವ ಗೌರವ ಇದೇ—ಬೀಸಿ ಆಚೆ ಎಸೆಯುವುದು!
ಹಾಗೆಯೇ ಮನುಷ್ಯತ್ವ ಅಥವಾ ಮಾನವತೆಯಿಲ್ಲದ ಸ್ವರ್ಗ-ನರಕಗಳ ಪರಿಕಲ್ಪನೆಗಳನ್ನು ಸಹಿತ ಕುವೆಂಪು ಅವರ ವೈಚಾರಿಕ ಪ್ರಜ್ಞೆ ಒಪ್ಪುವುದಿಲ್ಲ; ಬದಲಿಗೆ ತುಂಬಾ ಕಟುವಾಗಿ ವಿಡಂಬಿಸುತ್ತದೆ. ಅವರ ದೃಷ್ಟಿಯಲ್ಲಿ ಸ್ವರ್ಗ ಹೋಗುವಂತಹದ್ದೂ ಅಲ್ಲ; ನರಕ ಬರುವಂತಹದ್ದೂ ಅಲ್ಲ. ಏಕೆಂದರೆ, ಈ ಸ್ವರ್ಗ-ನರಕಗಳೇನು ಶಾಸ್ತ್ರಸ್ಥವಲ್ಲ ಎನ್ನುವುದು ಕುವೆಂಪು ಅವರ ನಿಲುವು. ಅವರ ಪ್ರಕಾರ ಮಾನವತೆಯೇ ಸ್ವರ್ಗ; ಅಮಾನವೀಯತೆಯೇ ನರಕ! ಅವರ ದೃಷ್ಟಿಯಲ್ಲಿ ಧರ್ಮದ ನಿಧಿ ಎದೆಯ ದನಿಯೇ ಆಗಿದೆ. ಕರ್ತವ್ಯವೇ ಶಾಸ್ತ್ರವಾಗಿದೆ ಅಥವಾ ವಿಧಿಯಾಗಿದೆ. ಇದನ್ನು ಬಿಟ್ಟು ಬೇರೆ ಋಷಿಯಿಲ್ಲ ಎನ್ನುತ್ತಾರೆ ಕುವೆಂಪು.
ಋಷಿಗಳೆಂದ ಮಾತ್ರಕ್ಕೆ ಅವರನ್ನು ಕುವೆಂಪು ಅವರು ಅಟ್ಟಕ್ಕೇರಿಸಿ ಗೌರವಿಸುವುದಿಲ್ಲ. ಅವರೂ ನಮ್ಮಂತೆ ಮಾನವರೇ ಎನ್ನುವುದು ಅವರ ನಿಲುವು. ಹಿಂದಿನ ಋಷಿಗಳ ಶಾಸ್ತ್ರ ಅವರ ಕಾಲಕ್ಕೆ ಮಾತ್ರ. ಏಕೆಂದರೆ, ಕಾಲಕ್ಕೆ ಪರಿವರ್ತನಾಶೀಲ ಗುಣವಿರುವುದರಿಂದ ಅದು ಪರಿವರ್ತನೆಗೊಳ್ಳುತ್ತಲೇ ಇರುತ್ತದೆ. ಆಗ ಹಿಂದಿನ ಋಷಿ-ಮುನಿಗಳ ಶಾಸ್ತ್ರ ಒಗ್ಗದೇ ಹೋಗಬಹುದು. ಆದರೆ, ಅದು ಹಿಂದಿನಿಂದ ಬಂದದ್ದು, ಹಿಂದಿನ ಋಷಿಗಳದ್ದು ಎಂದು ಅದಕ್ಕೆ ಜೋತುಬಿದ್ದು ಇಂದಿಗೆ ಒಗ್ಗಿಸಲು ಹೋಗುವುದು ಸರಿಯಲ್ಲ. ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ನಮ್ಮ ಹೃದಯದ ಸೂತ್ರಗಳು ಬದಲಾಗಬೇಕಾಗುತ್ತದೆ, ಸೃಷ್ಟಿಯಾಗಬೇಕಾಗುತ್ತದೆ. ಅಂತೆಯೇ ಕುವೆಂಪು ಅವರು **"ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ನಮ್ಮ ಹೃದಯವೇ ನಮಗೆ ಧರ್ಮಸೂತ್ರ!"** ಎಂದು ಅರ್ಥವತ್ತಾಗಿ ಹೇಳುವುದು!
ಟಿಪ್ಪಣಿ
1. ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?:
'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕುವೆಂಪು ಅವರ ಮಹತ್ವದ ವೈಚಾರಿಕ ಕವನಗಳಲ್ಲಿ ಒಂದು. ಮಾನವತೆಯಿಂದ ತುಂಬಿ ಕಳಕಳಿಸುವ ಅವರ ಅಪ್ಪಟ ವೈಚಾರಿಕ ಪ್ರಜ್ಞೆ ಈ ಕವನದಲ್ಲಿ ತುಂಬಾ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಮಾನವತೆಯಿಲ್ಲದ ಶಾಸ್ತ್ರ, ಧರ್ಮ, ಧರ್ಮನಿಧಿ, ಧರ್ಮಸೂತ್ರಗಳನ್ನು ಒಪ್ಪದ ಅವರ ವೈಚಾರಿಕ ಪ್ರಜ್ಞೆ ಅವುಗಳನ್ನು ತುಂಬಾ ಕಟುವಾಗಿ ವಿಡಂಬಿಸುತ್ತದೆ. ಅವರ ಪ್ರಕಾರ ಶಾಸ್ತ್ರವಾಗಲಿ, ಧರ್ಮವಾಗಲಿ, ಧರ್ಮನಿಧಿಯಾಗಲಿ, ಧರ್ಮಸೂತ್ರವಾಗಲಿ, ಮನುಧರ್ಮಶಾಸ್ತ್ರವಾಗಲಿ ಮಾನವತೆಯಿಂದ ಕೂಡಿದುದಾಗಿರಬೇಕು. ಈ ಮಾನವತೆಯಿಂದ ಹೊರತಾದ ಶಾಸ್ತ್ರ, ಧರ್ಮ, ಧರ್ಮನಿಧಿ, ಧರ್ಮಸೂತ್ರ, ಮನುಧರ್ಮಶಾಸ್ತ್ರಗಳೆಲ್ಲ ನಿಸ್ಪ್ರಯೋಜನವೆನ್ನುವ ವೈಚಾರಿಕ ನಿಲುವು ಕುವೆಂಪು ಅವರದು.
ಕುವೆಂಪು ಅವರ ಪ್ರಕಾರ, ಎದೆಯ ದನಿಯೇ ನಿಜವಾದ ಶಾಸ್ತ್ರ. ಎದೆಯ ದನಿಗಿಂತ ಅಥವಾ ಮಾನವತೆಗಿಂತ ಮಿಗಿಲಾದ ಶಾಸ್ತ್ರ ಇನ್ನೊಂದಿಲ್ಲ. ಎಂದೋ ಮನು ಬರೆದಿಟ್ಟ ಧರ್ಮಶಾಸ್ತ್ರ ನಮಗೆ ಕಟ್ಟಾಗಬೇಕಿಲ್ಲ. ನೀರಡಿಸಿ ಬಂದವನಿಗೆ ನೀರು ಕೊಡುವುದೇ ಮಾನವತೆ, ಅದೇ ಮನುಷ್ಯತ್ವ. ನೊಂದವರ ಕಂಬನಿ ಒರೆಸಿ ಸಂತೈಸುವುದೇ ಮಾನವತೆ, ಅದೇ ಶಾಸ್ತ್ರ. ಕೆರೆಯಲ್ಲಿ ಮುಳುಗುತ್ತಿರುವ ಪಂಚಮರ ಶಿಶುವನ್ನು ಮುಟ್ಟಿದರೆ ಬ್ರಹ್ಮತ್ವ ಕೆಡುತ್ತದೆ ಎಂಬ ಅಮಾನವೀಯತೆಯನ್ನು ಧಿಕ್ಕರಿಸಿ, ಆ ಶಿಶುವನ್ನು ಬದುಕಿಸುವ ಮಾನವತೆಯೇ ನಿಜವಾದ ಶಾಸ್ತ್ರ. ಈ ಮಾನವತೆಯಿಲ್ಲದ ಶಾಸ್ತ್ರಗಳನ್ನು, ಋಷಿಗಳನ್ನು ಶಾಸ್ತ್ರದಲ್ಲಿ ಸುತ್ತಿ ಎತ್ತಿ ಆಚೆಗೆಸೆಯಲು ಕುವೆಂಪು ಅವರು ಹೇಳುವುದು ಅವರ ದಿಟ್ಟ ವೈಚಾರಿಕತೆಗೊಂದು ಜೀವಂತ ನಿದರ್ಶನವಾಗಿದೆ.
ಒಟ್ಟಾರೆ, ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ಶಾಸ್ತ್ರಗಳಿರಬೇಕು; ಅವು ಮಾನವತೆಯಿಂದ ಕೂಡಿದವಾಗಿರಬೇಕು ಎಂಬ ಆಶಯ ಈ ಕವನದಲ್ಲಿ ತುಂಬಾ ಧ್ವನಿಪೂರ್ಣವಾಗಿ ಮೂಡಿಬಂದಿದೆ.
ಸಂದರ್ಭದೊಡನೆ ಸ್ಪಷ್ಟೀಕರಣ:
1. “ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?”
(ಅಥವಾ)
“ನಿನ್ನೆದೆಯ ದನಿಯೇ ಋಷಿ ಮನು ನಿನಗೆ ನೀನು!”
ಸಂದರ್ಭ: ಪ್ರಸ್ತುತ ವಾಕ್ಯವನ್ನು 'ಸಾಹಿತ್ಯ ಸಂಗಮ-5' ಪಠ್ಯದ ಕುವೆಂಪು ಅವರ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕವನದಿಂದ ಆಯ್ದುಕೊಳ್ಳಲಾಗಿದೆ. ಮಾನವತೆಯೇ ನಿಜವಾದ ಶಾಸ್ತ್ರವೆಂದು ವಿವರಿಸುವ ಸಂದರ್ಭದಲ್ಲಿ ಕವಿ ಕುವೆಂಪು ಅವರು ಈ ಮಾತನ್ನು ಹೇಳುತ್ತಾರೆ.
ಸ್ಪಷ್ಟೀಕರಣ: ಕುವೆಂಪು ಅವರದು ಅಪ್ಪಟ ಮಾನವೀಯ ಅನುಕಂಪದ ವೈಚಾರಿಕ ಮನೋಭಾವ. ಅಂತೆಯೇ, ಅವರು ಮಾನವತೆಯಿಲ್ಲದ ಶಾಸ್ತ್ರ, ಧರ್ಮ, ಧರ್ಮನಿಧಿ, ಧರ್ಮಸೂತ್ರ, ಮನುಧರ್ಮಶಾಸ್ತ್ರಗಳನ್ನು ನಂಬುವುದಿಲ್ಲ; ಬದಲಿಗೆ ತುಂಬಾ ಕಟುವಾಗಿ ವಿಡಂಬಿಸುತ್ತಾರೆ. ಶಾಸ್ತ್ರ ಯಾವ ಕಾಲದ್ದಾದರೇನು? ಅದು ಮಾನವತೆಯಿಂದ ಕೂಡಿದುದಾಗಿರಬೇಕು; ಅಥವಾ ಎದೆಯ ದನಿಯೇ ಅದರ ಮೂಲ ತವನಿಧಿಯಾಗಿರಬೇಕು. ಏಕೆಂದರೆ, ಮಾನವತೆಗಿಂತ ಮಿಗಿಲಾದ ಶಾಸ್ತ್ರವಿಲ್ಲ; ಮಾನವತೆಯೇ ನಿಜವಾದ ಶಾಸ್ತ್ರ ಎಂಬುದು ಕುವೆಂಪು ಅವರ ಅಪ್ಪಟ ವೈಚಾರಿಕ ಪ್ರಜ್ಞೆ. ಇದನ್ನು ವಿವರಿಸುತ್ತಾ ಅವರು ಈ ಮೇಲಿನಂತೆ ಹೇಳುತ್ತಾರೆ.
2. “ಹಿಂದಿನಾ ಋಷಿಗಳೂ ಮಾನವರೇ ನಮ್ಮಂತೆ ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ.”
(ಅಥವಾ)
“ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ, ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ!”
ಸಂದರ್ಭ: ಪ್ರಸ್ತುತ ವಾಕ್ಯವನ್ನು 'ಸಾಹಿತ್ಯ ಸಂಗಮ-5' ಪಠ್ಯದ ಕುವೆಂಪು ಅವರ 'ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?' ಕವನದಿಂದ ಆಯ್ದುಕೊಳ್ಳಲಾಗಿದೆ. ಕಾಲದೇಶಕ್ಕೆ ತಕ್ಕಂತೆ ನಮ್ಮೆದೆಯ ಶ್ರೀಧರ್ಮಸೂತ್ರವೇ (ಮಾನವತೆಯೇ) ನಿಜವಾದ ಶಾಸ್ತ್ರವಾಗಬೇಕು ಎಂದು ವಿವರಿಸುವ ಸಂದರ್ಭದಲ್ಲಿ ಕವಿ ಕುವೆಂಪು ಅವರು ಈ ಮಾತನ್ನು ಹೇಳುತ್ತಾರೆ.
ಸ್ಪಷ್ಟೀಕರಣ: ಯಾವುದೇ ಶಾಸ್ತ್ರವಿರಲಿ, ಯಾವ ಕಾಲದ ಶಾಸ್ತ್ರವೇ ಇರಲಿ, ಅದು ಮಾನವತೆಯಿಂದ ಕೂಡಿದ ಶಾಸ್ತ್ರವಾಗಿರಬೇಕು. ಅಂಥ ಶಾಸ್ತ್ರ ಯಾವ ಕಾಲಕ್ಕಾದರೂ ಒಗ್ಗುತ್ತದೆ; ಯಾವ ದೇಶಕ್ಕಾದರೂ ಒಗ್ಗುತ್ತದೆ. ಇದನ್ನು ಹೊರತುಪಡಿಸಿದ ಶಾಸ್ತ್ರವಿದ್ದರೆ, ಅದನ್ನು ಕಾಲ-ದೇಶಗಳಿಗೆ ತಕ್ಕಂತೆ ಪರಿವರ್ತಿಸಬೇಕಾಗುತ್ತದೆ; ಅಥವಾ ಪರಿವರ್ತಿಸಲು ಸಾಧ್ಯವಾಗದಂತಿದ್ದರೆ ಕಿತ್ತು ಬಿಸಾಕಬೇಕಾಗುತ್ತದೆ. ಕಾಲಕ್ಕೆ ಪರಿವರ್ತನಾಶೀಲ ಗುಣವಿದ್ದು ಅದು ಪರಿವರ್ತನೆಗೊಳ್ಳುತ್ತಲೇ ಇರುತ್ತದೆ; ಇದಕ್ಕೆ ತಕ್ಕಂತೆ ದೇಶವೂ ಬದಲಾಗುತ್ತಿರುತ್ತದೆ. ಹೀಗಾಗಿ ಈ ಕಾಲ-ದೇಶಗಳಿಗೆ ತಕ್ಕಂತೆ ಶಾಸ್ತ್ರಗಳು ಪರಿವರ್ತನೆಗೊಳ್ಳಬೇಕಾದದ್ದು ಅವಶ್ಯಕ. ಆ ಪರಿವರ್ತನೆ ಮಾನವತೆಯಿಂದ ಕೂಡಿರಬೇಕಷ್ಟೇ ಎಂದು ಕವಿ ಕುವೆಂಪು ಅವರು ಇದನ್ನು ವಿವರಿಸುತ್ತಾ ಈ ಮೇಲಿನಂತೆ ಹೇಳುತ್ತಾರೆ.
ಎರಡು ಅಂಕಗಳ ಪ್ರಶ್ನೋತ್ತರಗಳು:
ಪ್ರ 1. ಕುವೆಂಪು ಅವರ ಪ್ರಕಾರ ಎಲ್ಲಕ್ಕಿಂತ ದೊಡ್ಡ ಶಾಸ್ತ್ರ ಯಾವುದು?
ಉತ್ತರ: ಕುವೆಂಪು ಅವರ ಪ್ರಕಾರ ಹಿಂದಿನ ಕಾಲದ ಶಾಸ್ತ್ರಗಳು ಏನೇ ಹೇಳಿರಲಿ, ನಮ್ಮ ಒಳಮನಸ್ಸು ಅಥವಾ ಮನಸ್ಸಾಕ್ಷಿಗಿಂತ ದೊಡ್ಡ ಶಾಸ್ತ್ರ ಮತ್ತೊಂದಿಲ್ಲ. ಎದೆಯ ಧ್ವನಿಯೇ ಎಲ್ಲಕ್ಕಿಂತ ಮಿಗಿಲಾದದ್ದು.
ಪ್ರ 2. "ಮನು ಎಂಬುವವನು ಬರೆದಿಟ್ಟ ನಿಯಮಗಳು ಇಂದು ನಮಗೆ ಅನ್ವಯಿಸಬೇಕಿಲ್ಲ" ಏಕೆ?
ಉತ್ತರ: ಮನು ಎಂಬುವವನು ಎಂದೋ ಒಂದು ಕಾಲದ ಸಂದರ್ಭಕ್ಕೆ ತಕ್ಕಂತೆ ನಿಯಮಗಳನ್ನು ಬರೆದಿಟ್ಟಿದ್ದನು. ಬದಲಾಗುತ್ತಿರುವ ಇಂದಿನ ಆಧುನಿಕ ಕಾಲಕ್ಕೆ ಮತ್ತು ದೇಶಕ್ಕೆ ಆ ಹಳೆಯ ನಿಯಮಗಳು ಸೂಕ್ತವಾಗುವುದಿಲ್ಲ ಮತ್ತು ಅನ್ವಯಿಸುವುದಿಲ್ಲ.
ಪ್ರ 3. ಕವಿತೆಯ ಪ್ರಕಾರ ನಮಗೆ ನಿಜವಾದ ಋಷಿ ಯಾರು?
ಉತ್ತರ: ನಮ್ಮ ಎದೆಯ ಒಳಗಿನ ಧ್ವನಿ ಅಥವಾ ನಮ್ಮ ವಿವೇಕವೇ ನಮಗೆ ನಿಜವಾದ ಋಷಿ. ನಮಗೆ ನಾವೇ ನಿಯಮಗಳನ್ನು ರೂಪಿಸಿಕೊಳ್ಳುವ 'ಮನು' ಆಗಬೇಕು.
ಪ್ರ 4. ಬಾಯಾರಿಕೆಯಿಂದ ಬಂದ ಸಹೋದರನಿಗೆ ನೀರು ಕೊಡಲು ಶಾಸ್ತ್ರದ ಅನುಮತಿ ಬೇಕೆ?
ಉತ್ತರ: ಖಂಡಿತ ಇಲ್ಲ. ಬಾಯಾರಿದವನಿಗೆ ನೀರು ಕೊಡುವುದು ಮತ್ತು ಕಷ್ಟದಲ್ಲಿರುವವರ ಕಣ್ಣೀರು ಒರೆಸುವುದು ಮನುಷ್ಯನ ಸಹಜ ಧರ್ಮವಾಗಿದೆ. ಇದಕ್ಕೆ ಯಾವುದೇ ಮನುಧರ್ಮಶಾಸ್ತ್ರದ ಅಪ್ಪಣೆ ಬೇಕಾಗಿಲ್ಲ.
ಪ್ರ 5. ಮಾನವೀಯತೆಗೆ ಹಳೆಯ ಗ್ರಂಥಗಳ ಪುರಾವೆ ಅಗತ್ಯವಿಲ್ಲ ಏಕೆ?
ಉತ್ತರ: ಮಾನವೀಯತೆ ಅಥವಾ ಮನುಷ್ಯತ್ವ ಎನ್ನುವುದು ಕರುಣೆಯಿಂದ ಸಹಜವಾಗಿ ಬರಬೇಕಾದದ್ದು. ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಅಥವಾ ಅವರನ್ನು ಸಮಾಧಾನಪಡಿಸಲು ಯಾವುದೇ ಹಳೆಯ ಗ್ರಂಥಗಳ ಸಾಕ್ಷಿ ಅಥವಾ ಪುರಾವೆಯ ಅಗತ್ಯವಿಲ್ಲ.
ಪ್ರ 6. ಕೆರೆಯಲ್ಲಿ ಮಗು ಮುಳುಗುತ್ತಿರುವಾಗ ಸುಮ್ಮನೆ ನಿಲ್ಲುವುದು ಶಾಸ್ತ್ರ ಸಮ್ಮತವೇ? ಕವಿಯ ಅಭಿಪ್ರಾಯವೇನು?
ಉತ್ತರ: ದಲಿತ ಮಗು ಕೆರೆಯಲ್ಲಿ ಮುಳುಗುತ್ತಿರುವಾಗ ತನ್ನ ಪವಿತ್ರತೆ ಕೆಡುತ್ತದೆ ಎಂದು ಸುಮ್ಮನೆ ನಿಲ್ಲುವುದು ಎಂದಿಗೂ ಶಾಸ್ತ್ರ ಸಮ್ಮತವಲ್ಲ. ಮನುಷ್ಯತ್ವವನ್ನೇ ಕೊಲ್ಲುವ ಅಂತಹ ಶಾಸ್ತ್ರಕ್ಕೆ ಯಾವುದೇ ಬೆಲೆಯಿಲ್ಲ ಎಂದು ಕವಿ ಹೇಳುತ್ತಾರೆ.
ಪ್ರ 7. ಮನುಷ್ಯತ್ವಕ್ಕೆ ವಿರುದ್ಧವಾದ ಶಾಸ್ತ್ರವನ್ನು ಕವಿ ಯಾವುದಕ್ಕೆ ಹೋಲಿಸಿದ್ದಾರೆ?
ಉತ್ತರ: ಮನುಷ್ಯರ ನಡುವೆ ತಾರತಮ್ಯ ಮಾಡುವ ಮತ್ತು ಮಾನವೀಯತೆಗೆ ವಿರುದ್ಧವಾಗಿ ನಡೆದುಕೊಳ್ಳಲು ಹೇಳುವ ಶಾಸ್ತ್ರವನ್ನು ಕವಿ ಕಸಕ್ಕೆ ಹೋಲಿಸಿದ್ದಾರೆ ಹಾಗೂ ಅದನ್ನು ಕಸದಂತೆ ಬಿಸಾಡಬೇಕು ಎಂದಿದ್ದಾರೆ.
ಪ್ರ 8. ಹಳೆಯ ಶಾಸ್ತ್ರಗಳನ್ನು ವಿರೋಧಿಸಲು ನಮಗೆ ಇರಬೇಕಾದ ಮುಖ್ಯ ಗುಣ ಯಾವುದು?
ಉತ್ತರ: ಹಳೆಯ ಅನ್ಯಾಯದ ಶಾಸ್ತ್ರಗಳನ್ನು ವಿರೋಧಿಸಲು ನಮಗೆ ಎದೆಯ ಧೈರ್ಯ ಇರಬೇಕು. ಅದರಿಂದ ಸ್ವರ್ಗವೇ ಹೋಗಲಿ ಅಥವಾ ನರಕವೇ ಬರಲಿ, ಧೈರ್ಯವಾಗಿ ಅದನ್ನು ದಿಕ್ಕರಿಸಬೇಕು.
ಪ್ರ 9. ಶಾಸ್ತ್ರಗಳನ್ನು ಮೀರಿದರೆ ಸ್ವರ್ಗ-ನರಕಗಳು ಸಿಗುತ್ತವೆ ಎಂಬ ನಂಬಿಕೆ ಬಗ್ಗೆ ಕವಿಯ ನಿಲುವೇನು?
ಉತ್ತರ: ಹಳೆಯ ಶಾಸ್ತ್ರಗಳನ್ನು ಮೀರಿದರೆ ಸ್ವರ್ಗ ಹೋಗುವುದಿಲ್ಲ ಅಥವಾ ನರಕ ಬರುವುದಿಲ್ಲ. ಸ್ವರ್ಗ-ನರಕಗಳು ಶಾಸ್ತ್ರಗಳಲ್ಲಿ ಬರೆದಂತೆ ಇರುವುದಿಲ್ಲ, ಅವು ನಮ್ಮ ನಡವಳಿಕೆಯಲ್ಲಿರುತ್ತವೆ ಎಂಬುದು ಕವಿಯ ನಿಲುವು.
ಪ್ರ 10. ಧರ್ಮದ ನಿಜವಾದ ನಿಧಿ ಮತ್ತು ವಿಧಿ ಯಾವುದು?
ಉತ್ತರ: ಮನುಷ್ಯನ ಎದೆಯ ಧ್ವನಿಯೇ ಧರ್ಮದ ನಿಜವಾದ ನಿಧಿಯಾಗಿದೆ ಮತ್ತು ಅವನ ಕರ್ತವ್ಯ ಪ್ರಜ್ಞೆಯೇ ಅವನಿಗೆ ನಿಜವಾದ ವಿಧಿಯಾಗಿದೆ.
ಪ್ರ 11. ಹಿಂದಿನ ಕಾಲದ ಋಷಿಗಳ ಬಗ್ಗೆ ಕವಿ ಏನು ಹೇಳುತ್ತಾರೆ?
ಉತ್ತರ: ಹಿಂದಿನ ಕಾಲದ ಋಷಿಗಳೂ ಕೂಡ ನಮ್ಮಂತೆಯೇ ರಕ್ತಮಾಂಸಗಳಿರುವ ಮನುಷ್ಯರಾಗಿದ್ದರು. ಅವರು ಬರೆದ ಶಾಸ್ತ್ರಗಳು ಕೇವಲ ಆ ಕಾಲದ ಪರಿಸ್ಥಿತಿ ಮತ್ತು ಸಂದರ್ಭಕ್ಕೆ ಮಾತ್ರ ಸೀಮಿತವಾಗಿದ್ದವು.
ಪ್ರ 12. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಮಗೆ ನಿಜವಾದ 'ಧರ್ಮಸೂತ್ರ' ಯಾವುದು?
ಉತ್ತರ: ಬದಲಾಗುತ್ತಿರುವ ಕಾಲ ಮತ್ತು ದೇಶಕ್ಕೆ ತಕ್ಕಂತೆ ನಮ್ಮ ಹೃದಯದ ಕರುಣೆ, ಒಳದನಿ ಮತ್ತು ವಿವೇಕವೇ ನಮಗೆ ನಿಜವಾದ 'ಧರ್ಮಸೂತ್ರ'ವಾಗಬೇಕು.
ಪ್ರ 13. 'ವಿವೇಕ' ಎಂದರೆ ಏನು? ಕವಿತೆಯ ಹಿನ್ನೆಲೆಯಲ್ಲಿ ವಿವರಿಸಿ.
ಉತ್ತರ: ವಿವೇಕ ಎಂದರೆ ಕೇವಲ ಕುರುಡು ನಂಬಿಕೆಗಳನ್ನು ಒಪ್ಪಿಕೊಳ್ಳದೆ, ಸ್ವಂತ ಬುದ್ಧಿಶಕ್ತಿ, ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವಕ್ಕೆ ಆದ್ಯತೆ ನೀಡುವುದಾಗಿದೆ.
ಪ್ರ 14. ಕವಿತೆಯ ಪ್ರಕಾರ ನಿಜವಾದ 'ಧರ್ಮ' ಎಲ್ಲಿದೆ?
ಉತ್ತರ: ನಿಜವಾದ ಧರ್ಮ ಎನ್ನುವುದು ಕೇವಲ ಪುಸ್ತಕಗಳಲ್ಲಿ ಅಥವಾ ಮಡಿವಂತಿಕೆಯಲ್ಲಿ ಇರುವುದಿಲ್ಲ. ಅದು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮಾನವೀಯತೆಯಲ್ಲಿ ಅಡಗಿದೆ.
ಪ್ರ 15. ಹಳೆಯ ಸಂಪ್ರದಾಯಗಳನ್ನು ನಾವು ಯಾವಾಗ ದಿಕ್ಕರಿಸಬೇಕು?
ಉತ್ತರ: ಹಳೆಯ ಇತಿಹಾಸ ಮತ್ತು ಸಂಪ್ರದಾಯಗಳನ್ನು ಗೌರವಿಸುವುದು ಒಳ್ಳೆಯದೇ. ಆದರೆ, ಅವು ಮನುಷ್ಯತ್ವಕ್ಕೆ, ಸಮಾನತೆಗೆ ಮತ್ತು ಮಾನವ ಹಕ್ಕುಗಳಿಗೆ ವಿರುದ್ಧವಾಗಿದ್ದಾಗ ಅವುಗಳನ್ನು ಧೈರ್ಯವಾಗಿ ದಿಕ್ಕರಿಸಬೇಕು.
ಪ್ರ 16. "ನಿನಗೆ ನೀನೇ ಮನು" ಈ ಮಾತಿನ ತಾತ್ಪರ್ಯವೇನು?
ಉತ್ತರ: ಇದರ ತಾತ್ಪರ್ಯವೆಂದರೆ, ಇಂದಿನ ಕಾಲಕ್ಕೆ ತಕ್ಕಂತೆ ನೈತಿಕ ಮತ್ತು ನ್ಯಾಯಯುತವಾದ ನಿಯಮಗಳನ್ನು ನಾವೇ ನಮ್ಮ ವಿವೇಕದ ಮೂಲಕ ರೂಪಿಸಿಕೊಳ್ಳಬೇಕು; ಯಾರೋ ಬರೆದ ಹಳೆಯ ನಿಯಮಗಳಿಗೆ ಗುಲಾಮರಾಗಬಾರದು.
ಪ್ರ 17. ವೈಚಾರಿಕತೆ (Progressiveness) ಎಂದರೆ ಏನು?
ಉತ್ತರ: ಕೇವಲ ಹಳೆಯದು ಎಂಬ ಕಾರಣಕ್ಕೆ ಎಲ್ಲವನ್ನೂ ಒಪ್ಪಿಕೊಳ್ಳದೆ, ಯಾವುದು ಸರಿ, ಯಾವುದು ತಪ್ಪು ಎಂದು ಬುದ್ಧಿಯಿಂದ ವಿಶ್ಲೇಷಿಸಿ, ಮನುಷ್ಯತ್ವವನ್ನು ಎತ್ತಿಹಿಡಿಯುವ ಪ್ರಗತಿಪರ ಆಲೋಚನೆಯೇ ವೈಚಾರಿಕತೆ.
ಪ್ರ 18. ಕುವೆಂಪು ಅವರು ಈ ಕವಿತೆಯ ಮೂಲಕ ಸಮಾಜಕ್ಕೆ ನೀಡುವ ಮುಖ್ಯ ಸಂದೇಶವೇನು?
ಉತ್ತರ: ಬಾಹ್ಯ ಶಾಸ್ತ್ರಗ್ರಂಥಗಳಿಗಿಂತ ಮನುಷ್ಯನ ಅಂತಃಕರಣ ಮತ್ತು ಮನುಷ್ಯತ್ವವೇ ಶ್ರೇಷ್ಠ. ಮೂಢನಂಬಿಕೆಗಳನ್ನು ಬಿಟ್ಟು ವೈಚಾರಿಕತೆಯಿಂದ ಬದುಕಬೇಕು ಎಂಬುದು ಕವಿತೆಯ ಮುಖ್ಯ ಸಂದೇಶವಾಗಿದೆ.
ಪ್ರ 19. "ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?" ಎಂಬ ಸಾಲಿನ ಅರ್ಥವೇನು?
ಉತ್ತರ: ಮನುಷ್ಯನ ಕರುಣೆ ಮತ್ತು ಒಳಮನಸ್ಸಿನ ಸಾಕ್ಷಿಗಿಂತ ದೊಡ್ಡದಾದ ಧರ್ಮಗ್ರಂಥ ಅಥವಾ ನಿಯಮ ಈ ಪ್ರಪಂಚದಲ್ಲಿ ಬೇರೊಂದಿಲ್ಲ ಎಂಬುದು ಈ ಸಾಲಿನ ಅರ್ಥವಾಗಿದೆ.
ಪ್ರ 20. ಬದಲಾಗುತ್ತಿರುವ ದೇಶ ಮತ್ತು ಕಾಲಕ್ಕೆ ನಾವು ಹೇಗೆ ಸಿದ್ಧರಾಗಬೇಕು?
ಉತ್ತರ ಹಳೆಯ ಕಾಲದ ಸೀಮಿತ ನಿಯಮಗಳನ್ನು ಬಿಟ್ಟು, ಇಂದಿನ ಕಾಲಕ್ಕೆ ತಕ್ಕಂತೆ ಪ್ರೀತಿ, ಕರುಣೆ ಹಾಗೂ ಸಮಾನತೆಯ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸಿದ್ಧರಾಗಬೇಕು.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ