- ಕುವೆಂಪು
ಕರ್ತೃ ಕೃತಿ ಪರಿಚಯ:
ಕೃತಿಗಳು:
ಖಂಡಕಾವ್ಯ: 'ಚಿತ್ರಾಂಗದಾ'.
ತಿರುಳು
“ಓ ಬನ್ನಿ ಸೋದರರೆ, ಬೇಗ ಬನ್ನಿ!” ಕುವೆಂಪು ಅವರ ಅಪ್ಪಟ ವೈಚಾರಿಕ ಪ್ರಜ್ಞೆಯ ಕವನಗಳಲ್ಲಿ ಒಂದು. ಬಡತನ, ಮತ, ಅಜ್ಞಾನ, ಮೌಡ್ಯತೆಗಳೆಂಬ ಕೀಳರಿಮೆಗಳನ್ನು ಕಿತ್ತೆಸೆದು, ಹೊಸ ಸಮಾನತೆಯ ಬದುಕನ್ನು ಕಟ್ಟಬಯಸುವ ಕವಿಯ ಹಪಹಪಿ, ಕಳಕಳಿ, ಮಾನವತೆಗಳು ಇಲ್ಲಿ ವೈಚಾರಿಕ ನೆಲೆಯ ಹಿನ್ನೆಲೆಯಲ್ಲಿ ಅಭಿವ್ಯಕ್ತಿ ಪಡೆದದ್ದು ಈ ಕವನದ ಮೂಲ ತಿರುಳು ಮತ್ತು ಆಶಯವಾಗಿದೆ. ಕ್ರಾಂತಿಯಾಗದ ಹೊರತು ಸಮಾನತೆಯ ಸಾಮ್ರಾಜ್ಯ ಸಾಧ್ಯವಿಲ್ಲ ಎಂಬುದನ್ನು ಈ ಕವನ ಅತ್ಯಂತ ಪರಿಣಾಮಕಾರಿಯಾಗಿ ಪ್ರತಿಪಾದಿಸಿದೆ.
ನಾವೆಲ್ಲ ಸಮಾನತೆಯ ಸಾಮ್ರಾಜ್ಯವನ್ನು ಸ್ಥಾಪಿಸಬೇಕಾದರೆ ಅಥವಾ ಸಾಧಿಸಬೇಕಾದರೆ ಮೊದಲು ನಮ್ಮ ಅಜ್ಞಾನವನ್ನು ಬುಡಮುಟ್ಟ ಕೀಳಬೇಕು; ಮೌಡ್ಯತೆಯ ಮಾರಿಯನ್ನು ಹೊರದೂಡಬೇಕು; ಮತವೆಂಬ ಮೋಹದ ಅಜ್ಞಾನಕ್ಕೆ ಸಿಲುಕದೆ ದೂರವಿರಬೇಕು; ವಿಜ್ಞಾನದ (ವೈಚಾರಿಕ ಜ್ಞಾನದ) ದೀವಿಗೆಯನ್ನು ಹಿಡಿಯಬೇಕು; ಕ್ರಾಂತಿಯಾಗಬೇಕು. ಎಂದರೆ, ನಮ್ಮ ನೆತ್ತರೆಣ್ಣೆಯ ತಿಳಿವಿನ ಉರಿಯಲ್ಲಿ ನಮ್ಮೆಲ್ಲ ಹಳೆಯ ಕೊಳಕು, ಕೀಳನದ ತೃಣವನ್ನು (ಕಸವನ್ನು) ಕಿಚ್ಚಿಟ್ಟು ಸುಡಬೇಕು. ಈಗಾಗಲೇ ರಷ್ಯಾ, ಜಪಾನ್, ತುರ್ಕಿ ದೇಶಗಳೆಲ್ಲ ತಮ್ಮ ಹಳೆಯ ಬಡತನ, ಮೌಡ್ಯ, ಜಾತಿ-ಮತಗಳೆಂಬ ಕೀಳನದ ಪರೆಗಳನ್ನು ಕಳಚಿ ಹೊಸ ಪಯಣಕ್ಕೆ ಹೊರಟಿದ್ದು ನಮಗೆಲ್ಲ ಮಾದರಿಯಾಗಬೇಕು, ಮಾರ್ಗದರ್ಶನವಾಗಬೇಕು ಎಂಬ ಅಪ್ಪಟ ವೈಚಾರಿಕ ಪ್ರಜ್ಞೆಯನ್ನು ಕುವೆಂಪು ಅವರು ಈ ಕವನದಲ್ಲಿ ಬಿಂಬಿಸಿದ್ದಾರೆ.
ಸರಳಾನುವಾದ
1. ಓ ಬನ್ನಿ ಸೋದರರೆ! ಬೇಗ ಬನ್ನಿ, ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬನ್ನಿ, ಬಡತನವನ್ನು ಬುಡಮುಟ್ಟ ಕೀಳಬನ್ನಿ, ಮೌಡ್ಯತೆಯ ಮಾರಿಯನ್ನು ಹೊರದೂಡ ಬನ್ನಿ, ವಿಜ್ಞಾನ ದೀವಿಗೆಯನ್ನು ಹಿಡಿಯಬನ್ನಿ.
2. ಅದೋ ನೋಡಿ! ರಷ್ಯಾ, ಜಪಾನ್, ತುರ್ಕಿ ದೇಶಗಳೆಲ್ಲ ಪರೆಗಳನ್ನು ಕಳಚಿ ಹೊಸ ಪಯಣಕ್ಕೆ ಹೊರಟಿವೆ. ನೆತ್ತರೆಣ್ಣೆಯ ತಿಳಿವಿನ ಉರಿಯಲ್ಲಿ ಹಳೆಯ ಕೊಳಕು, ಕೀಳನದ ಕಸಗಳಿಗೆ ಕಿಚ್ಚನ್ನಿಟ್ಟು ಬೆಳಗಿದ್ದಾರೆ. ಓ ಬನ್ನಿ ಸೋದರರೆ, ರಾಷ್ಟ್ರ ರಣಕ್ಕೆ.
3. ಓ ಬನ್ನಿ ಸೋದರರೆ! ಮತವೆಂಬ ಮೋಹದ ಅಜ್ಞಾನಕ್ಕೆ ಸಿಲುಕದಿರಿ. ಲೋಕ ಹಿತಕ್ಕಾಗಿ ಮತಿಯಿಂದ (ಜ್ಞಾನದಿಂದ) ದುಡಿಯಿರಿ. ಆ ಮತದ, ಈ ಮತದ, ಹಳೆಯ ಮತದ ಸಹವಾಸ ಇನ್ನು ಸಾಕು; ಮನುಜ ಮತಕ್ಕೆ ಸೇರಿರಿನ್ನು, ವಿಶ್ವಪಥಕ್ಕೆ ಬನ್ನಿರಿನ್ನು!
ಪ್ರಬಂಧ ರೂಪದ ಪ್ರಶೋತ್ತರಗಳು
ಪ್ರ. 1. “ಓ ಬನ್ನಿ ಸೋದರರೆ, ಬೇಗ ಬನ್ನಿ' ಕವನದ ಸ್ವಾರಸ್ಯವನ್ನು ನಿರೂಪಿಸಿರಿ.
(ಅಥವಾ)
ಪ್ರ. 2. ಹಳೆಯ ಕೊಳೆ ಕಳೆಯದ ಹೊರತು ಸಮಾನತೆಯ ಹೊಸತು ಬರಲಾರದು ಎಂಬುದನ್ನು ಕುವೆಂಪು ಅವರು ಪ್ರತಿಪಾದಿಸುವುದು ಹೇಗೆ? ವಿವೇಚಿಸಿರಿ.
(ಅಥವಾ)
ಪ್ರ. 3. ಬಡತನ, ಅಜ್ಞಾನ, ಮತ, ಮೌಡ್ಯ - ಈ ಹಳೆಯ ಕೊಳೆ, ಕೀಳನಗಳನ್ನು ಕಳಚಿ ಎಸೆಯಬೇಕಾದ ಅಗತ್ಯವನ್ನು ಕವನ ಒತ್ತಿ ಹೇಳುವುದು ಹೇಗೆ, ಏಕೆ? ವಿಶ್ಲೇಷಿಸಿರಿ.
(ಅಥವಾ)
ಪ್ರ. 4. ಸಮಾನತೆಯ ಸಾಮ್ರಾಜ್ಯ ಮೂಡಿ ಬರಬೇಕಾದರೆ ಕ್ರಾಂತಿ ಅಗತ್ಯವೆನ್ನುವುದನ್ನು ಕವಿ ಪ್ರತಿಪಾದಿಸುವುದು ಹೇಗೆ? ವಿವರಿಸಿರಿ.
(ಅಥವಾ)
ಪ್ರ. 5. ಸಮಾನತೆಯ ಸ್ಥಾಪನೆಗೆ ಕವಿ ಹೇಳುವ ಅಗತ್ಯ ಕ್ರಾಂತಿ ಯಾವುದು? ವಿವೇಚಿಸಿ.
ಉತ್ತರ: 'ಓ ಬನ್ನಿ ಸೋದರರೆ, ಬೇಗ ಬನ್ನಿ' ಕುವೆಂಪು ಅವರ ಮಹತ್ವದ ವೈಚಾರಿಕ ಕವನಗಳಲ್ಲಿ ಒಂದು; ಸಮಾನತೆಯ ಮನೋಭಾವದ ಹಾಗೂ ಕುವೆಂಪು ಅವರ ಮಾನವತೆಗೆ ನಿದರ್ಶನವಾದ ಕವನಗಳಲ್ಲಿ ಇದು ಪ್ರಮುಖವಾದದ್ದು. 'ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು' ಎನ್ನುವ ಸಮಾನತೆಯ ತತ್ವ ಕುವೆಂಪು ಅವರದು. ಇಂಥ ಸಮಾನತೆ ಸ್ಥಾಪಿತವಾಗಬೇಕಾದರೆ, ಮೊದಲು ನಮ್ಮಲ್ಲಿ ಮಾನಸಿಕ ಪರಿವರ್ತನೆಯ ಕ್ರಾಂತಿಯಾಗಬೇಕು; ಅದಾಗದ ಹೊರತು ಯಾವ ರಕ್ತಕ್ರಾಂತಿಯಿಂದಲೂ ಯಾವ ಪ್ರಯೋಜನವೂ ಇಲ್ಲ! ಮಾನಸಿಕ ಕ್ರಾಂತಿಯೆಂದರೆ, ನಾವು ಬಡತನ, ಮೌಡ್ಯ, ಅಜ್ಞಾನ, ಮತಾಂಧತೆಗಳಂತಹ ಹಳೆಯ ಕೊಳೆಗಳನ್ನು ಕಳಚಿ ಜ್ಞಾನದ ಹಂತಕ್ಕೆ ಬಂದು ಮುಟ್ಟುವುದು! ಬಡತನ, ಮೌಡ್ಯ, ಅಜ್ಞಾನ, ಮತಾಂಧತೆ - ಇಂಥ ಕೊಳೆಗಳೇ, ಕೀಳನದ ಕಸಗಳೇ ನಮ್ಮ ಬದುಕನ್ನು ದುರಂತಕ್ಕೆ ತಳ್ಳಿವೆ. ಕೇವಲ ಮತ, ದೇವರು, ಧರ್ಮ ಎಂದು ವ್ಯರ್ಥ ಅಜ್ಞಾನದ ಪರಿಧಿಯಲ್ಲಿ ಪಠಿಸುತ್ತ ಕುಳಿತುಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ.
ಸಮಾನತೆಯ ಸಾಮ್ರಾಜ್ಯ ಸ್ಥಾಪಿತವಾಗಿ ಸರ್ವರೂ ಸುಖದಿಂದಿರಬೇಕಾದರೆ ಮೊದಲು ಗುಡಿ, ಚರ್ಚ್, ಮಸೀದಿಗಳನ್ನು ಬಿಟ್ಟು ಹೊರಬರಬೇಕು. ಬಡತನವನ್ನು ಬುಡಮುಟ್ಟು ಕೀಳಬೇಕು; ಮೌಡ್ಯತೆಯ ಮಾರಿಯನ್ನು ಹೊರದೂಡಬೇಕು; ವಿಜ್ಞಾನ ದೀವಿಗೆಯನ್ನು ಹಿಡಿಯಬೇಕು; ಮತವೆಂಬ ಮೋಹದ ಅಜ್ಞಾನದಿಂದ ದೂರವಿರಬೇಕು. ಈಗಾಗಲೇ ರಷ್ಯಾ, ಜಪಾನ್, ತುರ್ಕಿ ದೇಶಗಳೆಲ್ಲ ಈ ಬಡತನ, ಅಜ್ಞಾನ, ಮೌಡ್ಯ, ಜಾತಿ, ಮತ, ಪಂಥಗಳೆಂಬ ಹಳೆಯ ಪರೆಗಳನ್ನು ಕಳಚಿ ಹೊಸ ಪಯಣಕ್ಕೆ ಹೊರಟಿವೆ. ಇದು ನಮಗೂ ಮಾರ್ಗದರ್ಶನವಾಗಬೇಕು. ಎಂದರೆ, ನಾವು ಸಹಿತ ಹಳೆಯ ಪರೆಗಳನ್ನು ಕಳಚಿ ಸಮಾನತೆಯ ಹೊಸ ಪಯಣಕ್ಕೆ ಸಜ್ಜಾಗಬೇಕು. ಇದು ಈಗಾಗಲೇ ಹೇಳಿದಂತೆ ಮಾನಸಿಕ ಪರಿವರ್ತನೆಯ ಕ್ರಾಂತಿಯಿಂದ ಮಾತ್ರವೇ ಸಾಧ್ಯ.
ನಮ್ಮ ನೆತ್ತರೆಣ್ಣೆಯ ತಿಳಿವಿನ ಉರಿಯಲ್ಲಿ ಹಳೆಯ ಕೊಳಕು ಹಾಗೂ ಕೀಳನದ ಕಸವನ್ನು ಕಿಚ್ಚಿಟ್ಟು ಬೆಳಗಬೇಕು ಅಥವಾ ಸುಟ್ಟು ಬೂದಿ ಮಾಡಬೇಕು. ಈ ಮಾನಸಿಕ ಪರಿವರ್ತನೆಯ ಕ್ರಾಂತಿಯೇ ನಿಜವಾದ ಕ್ರಾಂತಿ. ಇದನ್ನು ಬಿಟ್ಟು ರಕ್ತಕ್ರಾಂತಿ ಮಾಡಿದರೂ ಯಾವ ಪ್ರಯೋಜನವೂ ಇಲ್ಲ. ಏಕೆಂದರೆ, ಮೊದಲು ನಮ್ಮ ಮನಸ್ಸು ಪರಿವರ್ತನೆಗೊಳಗಾಗಿ ಹಳೆಯ ಕೊಳೆಗಳನ್ನು, ಕೀಳನದ ಕಸವನ್ನು ಕಿತ್ತು ಬಿಸಾಕಿ, ಹೊಸತನದ ರಂಗಕ್ಕೆ ಬರಬೇಕು. ನಮ್ಮ ಮನಸ್ಸು ಹೀಗೆ ಪರಿವರ್ತನೆಯಾಗದ ಹೊರತು, ಯಾವ ಕ್ರಾಂತಿಯಿಂದಲೂ ಸಮಾನತೆ ಸಾಧ್ಯವಿಲ್ಲ ಎಂಬ ಅಪ್ಪಟ ವೈಚಾರಿಕ ಪ್ರಜ್ಞೆಯನ್ನು ಕವಿ ಕುವೆಂಪು ಅವರು ಇಲ್ಲಿ ಅನಾವರಣಗೊಳಿಸುವುದು ತುಂಬಾ ಔಚಿತ್ಯಪೂರ್ಣ ಸಂಗತಿ ಮಾತ್ರವಲ್ಲ, ಅದು ಯಾವ ಕಾಲಕ್ಕೂ ಪ್ರಸ್ತುತವಾದ ವೈಚಾರಿಕತೆ ಎಂಬುದನ್ನು ಯಾರೂ ಮರೆಯುವಂತಿಲ್ಲ!
ಸಮಾನತೆಯ ಸಾಮ್ರಾಜ್ಯವನ್ನು ಸ್ಥಾಪಿಸಬೇಕಾದರೆ, ನಾವೆಲ್ಲ ಮತಿಯಿಂದ ಅಥವಾ ಜ್ಞಾನದಿಂದ ದುಡಿಯಬೇಕಾದ ಅಗತ್ಯವಿದೆ. ಈ ಜ್ಞಾನವೆಂದರೆ, ಮತ್ತದೇ ಹಳೆಯ ಕೊಳೆ, ಕೀಳನದ ಕಸಗಳಿಂದ ಹೊರಬರುವುದು; ಅಥವಾ ಹಳೆಯ ಪರೆಗಳ ಅಜ್ಞಾನವನ್ನು ಕಳಚುವುದು! ಅಂದಾಗ ಮಾತ್ರ ನಾವು ಸಮಾನತೆಯ ರಂಗಕ್ಕೆ ಬಂದು ಲೋಕಹಿತಕ್ಕಾಗಿ ದುಡಿಯಲು ಸಾಧ್ಯವಾಗುವುದು. ಲೋಕ ಹಿತವು ಜ್ಞಾನದಿಂದ ಮಾತ್ರ ಸಾಧ್ಯವೇ ಹೊರತು, ಅಜ್ಞಾನದಿಂದ ಯಾವ ಕಾಲಕ್ಕೂ ಸಾಧ್ಯವಿಲ್ಲ ಎಂಬುದನ್ನು ಕವಿ ಕುವೆಂಪು ಅವರು ಇಲ್ಲಿ ತುಂಬಾ ಧ್ವನಿಪೂರ್ಣವಾಗಿ ಹಾಗೂ ಔಚಿತ್ಯಪೂರ್ಣವಾಗಿ ಪ್ರತಿಪಾದಿಸುತ್ತಾರೆ! ಒಟ್ಟಾರೆ, ಆ ಮತದ ಈ ಮತದ ಹಳೆ ಮತದ ಸಹವಾಸವನ್ನು ಕಳಚಿ 'ಮನುಜ ಮತ, ವಿಶ್ವಪಥ'ಕ್ಕೆ ಸೇರದ ಹೊರತು ಸಮಾನತೆಯಾಗಲಿ, ಸಮಾನತೆಯ ಸಾಮ್ರಾಜ್ಯವಾಗಲಿ ಸಾಧ್ಯವಿಲ್ಲವೆಂಬುದನ್ನು ಕವಿ ಇಲ್ಲಿ ತುಂಬಾ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾರೆ.
ಟಿಪ್ಪಣಿ
1. ಓ ಬನ್ನಿ, ಸೋದರರೆ, ಬೇಗ ಬನ್ನಿ! : “ಓ ಬನ್ನಿ ಸೋದರರೆ, ಬೇಗ ಬನ್ನಿ!' ಕುವೆಂಪು ಅವರ ಮಹತ್ವದ ವೈಚಾರಿಕ ಕವನಗಳಲ್ಲಿ ಒಂದು. 'ಮನುಜಮತ, ವಿಶ್ವಪಥ'ದಂತಹ ಸರ್ವ ಸಮಾನತೆಯ ವೈಚಾರಿಕ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸುವುದು ಈ ಕವನದ ಮೂಲ ಆಶಯ ಹಾಗೂ ತಿರುಳಾಗಿದೆ. ಮಾನವ ಧರ್ಮಕ್ಕೆ, ಮಾನವತೆ-ಮನುಷ್ಯತ್ವಕ್ಕೆ, ಕರುಣೆ, ಪ್ರೀತಿ-ವಿಶ್ವಾಸಗಳಿಗೆ ಹೆಚ್ಚಿನ ಒತ್ತು ಕೊಡುವ ಅಪ್ಪಟ ವೈಚಾರಿಕ ಪ್ರಜ್ಞೆ ಕುವೆಂಪು ಅವರದು. ಅವರ ಈ ಪ್ರಜ್ಞೆಯು ಇಲ್ಲಿ ಅಜ್ಞಾನ, ಮತಾಂಧತೆ, ಮೌಡ್ಯಗಳಂತಹ ಹಳೆಯ ಕೊಳಕುಗಳಿಂದ ಮುಚ್ಚಿಹೋಗಿರುವ ನಮ್ಮ ಕಣ್ಣುಗಳನ್ನು ಸರ್ವ ಸಮಾನತೆಯತ್ತ ತೆರೆಸಿ ನೋಡುವಂತೆ ಮಾಡುವ ಬಗೆ ತುಂಬಾ ಮನೋಜ್ಞವಾದುದು.
ಸ್ವಾರ್ಥಪರತೆಯಿಂದ ತುಂಬಿರುವ ಮಾನವ ನಿರ್ಮಿತ ಮತಧರ್ಮಗಳನ್ನು ಕಟುವಾಗಿ ವಿಡಂಬಿಸುವ ಕುವೆಂಪು ಅವರು, ಇವಕ್ಕೆಲ್ಲ ಮುಖ್ಯವಾಗಿ ಕರುಣೆ, ಪ್ರೀತಿ, ಪ್ರೇಮ, ವಿಶ್ವಾಸ ಹಾಗೂ ಈ ಮಾನವತೆಯ ಸಂಸರ್ಗ ಇರಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಅವರ ದೃಷ್ಟಿಯಲ್ಲಿ ಮನುಷ್ಯನ ಸ್ವಾರ್ಥ ಸಾಧನೆಗಾಗಿ ಹಲವಾರು ಕಟ್ಟಳೆಗಳಿಂದ ಕೂಡಿದ ಮತ ಧರ್ಮ ಶಾಸ್ತ್ರಾದಿಗಳು ಮುಖ್ಯವಲ್ಲ; ಮಾನವತೆಯಿಂದ ಕೂಡಿದ ಗುಣಗಳು ಮುಖ್ಯ. ಅಂತೆಯೇ ಅವರು:
“ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿಲ್ಲ. ನಮ್ಮೆದೆಯ ದನಿಯೇ ಋಷಿ! ಮನು ನಮಗೆ ನಾವೇ, ಎದೆಯ ಧ್ವನಿಯೇ ಧರ್ಮನಿಧಿ! ಕರ್ತವ್ಯವೇ ವಿಧಿ! ಅದನ್ನುಳಿದು ಬೇರೆ ಋಷಿಯಿಲ್ಲ! ಹಿಂದಿನ ಋಷಿಗಳೂ ನಮ್ಮಂತೆ ಮಾನವರೇ, ಅವರ ಶಾಸ್ತ್ರ ಅವರ ಕಾಲಕ್ಕೆ ಮಾತ್ರ. ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ ನಮ್ಮ हृदयವೇ (ಹೃದಯವೇ) ನಮಗೆ ಶ್ರೀ ಧರ್ಮಸೂತ್ರ!”ಎಂಬ ವೈಚಾರಿಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಾರೆ.
'ಮಾನವತೆ' ಎನ್ನುವುದು ಶಾಸ್ತ್ರಸ್ಥವಲ್ಲ, ಶಾಸ್ತ್ರದ ಮಾತಲ್ಲ; ಅದನ್ನು ನಾವು ಶಾಸ್ತ್ರದಿಂದ ಕಲಿಯಬೇಕಾದ ಅಗತ್ಯವೂ ಇಲ್ಲ. ಈ 'ಮಾನವತೆ' ಎನ್ನುವುದು ನಮ್ಮ ಹೃದಯದ ದನಿ; ಹೃದಯ ಸಂಪತ್ತು! ಕರುಣೆ, ಪ್ರೀತಿ, ಪ್ರೇಮ, ವಿಶ್ವಾಸ, ಭಾವೈಕ್ಯ, ಸರ್ವಸಮಾನತೆ ಇಂಥ ಒಳ್ಳೆಯ ಗುಣಗಳೆಲ್ಲ ಮಾನವತೆ ಎನ್ನಿಸಿಕೊಳ್ಳುತ್ತಿದ್ದು, ಇದನ್ನು ಶಾಸ್ತ್ರ, ಮತ, ಧರ್ಮಗಳಿಂದ ಕಲಿಯಬೇಕಾಗಿಲ್ಲ. ಏಕೆಂದರೆ, ಅವು ಸ್ವಾರ್ಥಪರ ಕಟ್ಟಳೆಗಳಿಂದ ಬಿಗಿಗೊಂಡಂತಹವುಗಳು! ನೀರಡಿಸಿದವನಿಗೆ ನೀರು ಕೊಡುವುದು, ಹಸಿದು ಬಂದವನಿಗೆ ಅನ್ನ ನೀಡುವುದು, ನೊಂದವರ ಕಂಬನಿಯನ್ನು ಒರೆಸಿ ಸಂತೈಸುವುದು, ಕೆರೆಯಲ್ಲಿ ಮುಳುಗಿ ಸಾಯುತ್ತಿರುವ ಪಂಚಮರ ಶಿಶುವನ್ನು ಎತ್ತಿ ಬದುಕಿಸುವುದು - ಇವೆಲ್ಲ 'ಮಾನವತೆ'! ಇಂಥ ಮಾನವತೆ ಇಲ್ಲದ ಶಾಸ್ತ್ರ ಶಾಸ್ತ್ರವಲ್ಲ, ಮತ ಧರ್ಮ ಮತಧರ್ಮವಲ್ಲ. ಋಷಿ-ಮುನಿಗಳು ಇಂಥವನ್ನೆಲ್ಲ ಅವರ ಶಾಸ್ತ್ರ, ಮತಧರ್ಮಗಳಲ್ಲಿ ಸುತ್ತಿ ಆಚೆಗೆ ಬಿಸಾಡಿಬಿಡಬೇಕು. ಇದರಿಂದ ಯಾವ ನರಕವೂ ಬರುವುದಿಲ್ಲ ಎಂಬ ಕುವೆಂಪು ಅವರ ಅಪ್ಪಟ ಮಾನವತೆಯ ವೈಚಾರಿಕ ಪ್ರಜ್ಞೆ ಇಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಂಡಿದೆ.
ಸಂದರ್ಭದೊಡನೆ ಸ್ಪಷ್ಟೀಕರಣ
1. “ಬಡತನವ ಬುಡ ಮುಟ್ಟಿ ಕೀಳಬನ್ನಿ”
ಸಂದರ್ಭ : ಪ್ರಸ್ತುತ ವಾಕ್ಯವನ್ನು 'ಸಾಹಿತ್ಯ ಸಂಗಮ-5' ಪಠ್ಯದ ಕುವೆಂಪು ಅವರ 'ಓ ಬನ್ನಿ ಸೋದರರೆ, ಬೇಗ ಬನ್ನಿ' ಕವನದಿಂದ ಆಯ್ದುಕೊಳ್ಳಲಾಗಿದೆ. ಕವಿ ಸಮಾನತೆಯನ್ನು ಸಾರುವ ಸಂದರ್ಭದಲ್ಲಿ ಈ ಮಾತನ್ನು ಹೇಳುತ್ತಾರೆ.
ಸ್ಪಷ್ಟೀಕರಣ : 'ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು' ಎನ್ನುವುದು ಕವಿಯವರ ಸಮಾನತೆಯ ದಿವ್ಯ ಸಂದೇಶ. ಧಾರ್ಮಿಕ ಅಂಧಶ್ರದ್ಧೆ, ಬಡತನ, ಅಜ್ಞಾನ ಅಥವಾ ಮೌಡ್ಯ - ಇವು ನಿರ್ಮೂಲನವಾಗದ ಹೊರತು ಸಮಾನತೆ ಸಾಧ್ಯವಿಲ್ಲವೆನ್ನುವುದು ಕುವೆಂಪು ಅವರ ಅಪ್ಪಟ ವೈಚಾರಿಕ ಪ್ರಜ್ಞೆ. ಅಂತೆಯೇ ಅವರು ಅಂಧಶ್ರದ್ಧೆಯ ದೇವರು, ಧರ್ಮ, ಗುಡಿ, ಚರ್ಚ್, ಮಸೀದಿಗಳನ್ನು ಕಟುವಾಗಿ ವಿಡಂಬಿಸುತ್ತಾರೆ; ಧಿಕ್ಕರಿಸುತ್ತಾರೆ. ಸಮಾನತೆಯ ಮಾನವತೆಯಿಲ್ಲದ ಧರ್ಮ, ದೇವರು, ದೇವಾಲಯಗಳಿಂದ ಯಾವ ಪ್ರಯೋಜನವೂ ಇಲ್ಲವೆನ್ನುವ ಅಪ್ಪಟ ಮಾನವ ಪ್ರೀತಿ ಅವರದು. ಮೌಡ್ಯತೆಯ ಮಾರಿಯನ್ನು ಹೊರದೂಡಿ ವಿಜ್ಞಾನದ (ಜ್ಞಾನದ) ದೀವಿಗೆಯನ್ನು ಹಿಡಿಯಬಲ್ಲ ಪ್ರಜ್ಞಾವಂತರಾದಾಗ ಮಾತ್ರ ಸಮಾನತೆ ಸಾಧ್ಯವೆನ್ನುವುದು ಈ ಕವಿಯ ದಿಟ್ಟ ನಿಲುವು. ಇದನ್ನು ವಿವರಿಸುತ್ತಾ ಕವಿ ಕುವೆಂಪು ಈ ಮೇಲಿನಂತೆ ಹೇಳುತ್ತಾರೆ.
2. “ಆ ಮತದ ಈ ಮತದ ಹಳಮತದ ಸಹವಾಸ ಸಾಕಿನ್ನು ಸೇರಿರೈ ಮನುಜ ಮತಕೆ”
ಸಂದರ್ಭ : ಪ್ರಸ್ತುತ ವಾಕ್ಯವನ್ನು 'ಸಾಹಿತ್ಯ ಸಂಗಮ-5' ಪಠ್ಯದ ಕುವೆಂಪು ಅವರ “ಓ ಬನ್ನಿ ಸೋದರರೆ, ಬೇಗ ಬನ್ನಿ' ಕವನದಿಂದ ಆಯ್ದುಕೊಳ್ಳಲಾಗಿದೆ. ಜಾತಿ-ಮತಗಳ ಗಡಿಯನ್ನು ಮೀರಿದ ಮನುಜ ಮತದ ಬಗೆಗೆ ವಿವರಿಸುವ ಸಂದರ್ಭದಲ್ಲಿ ಕವಿ ಕುವೆಂಪುರವರು ಈ ಮಾತನ್ನು ಹೇಳುತ್ತಾರೆ.
ಸ್ಪಷ್ಟೀಕರಣ : ಕುವೆಂಪು ಅವರದು ಜಾತಿ-ಮತಗಳ ಗಡಿಯನ್ನು ಮೀರಿದ ಮನುಜ ಮತ. ಜಾತಿ ವ್ಯವಸ್ಥೆಯನ್ನು ಕಟುವಾಗಿ ವಿಡಂಬಿಸುವ ಅವರು, ಮಾನವರೆಲ್ಲರೂ ಒಂದೇ ಕುಲದವರು ಎಂಬುದನ್ನು ಒಪ್ಪಿ ಆಚರಿಸಿದವರು. ಜಾತಿ ವ್ಯವಸ್ಥೆಯು ಮೇಲು-ಕೀಳಿನ ವರ್ಗ ವ್ಯವಸ್ಥೆಗೆ ಕಾರಣವಾಗಿ ಶೋಷಣೆಯ ಪ್ರಬಲ ಅಸ್ತ್ರವಾಗುತ್ತದೆಯೇ ಹೊರತು ಅದರಿಂದ ಸಮಾನತೆ ಸಾಧ್ಯವಿಲ್ಲ. ಬಹುವಾಗಿ ಅದು ಮೇಲ್ಜಾತಿಯೆನ್ನುವವರು ಕೆಳಜಾತಿಯವರನ್ನು ತುಳಿದು ತಮ್ಮ ಸ್ವಾರ್ಥವನ್ನು ಸಾಧಿಸಿಕೊಳ್ಳಲು ಬಳಕೆಯಾಗುತ್ತದಷ್ಟೇ. ಇದು ಮಾನವತೆಯಲ್ಲ, ಮನುಜ ಮತವಲ್ಲ. ನಾವೆಲ್ಲರೂ ಒಂದೇ ಎನ್ನುವ ವಿಶ್ವ ವಿಶಾಲ ಮನೋಭಾವ ಸಿದ್ಧಿಸದ ಹೊರತು ಮನುಜ ಮತ ಸಾಧ್ಯವಿಲ್ಲ. ಆದ್ದರಿಂದ, ಮತವೆಂಬ ಮೋಹದ ಅಜ್ಞಾನಕ್ಕೆ ಸಿಲುಕದೆ, ಲೋಕಹಿತಕ್ಕಾಗಿ ಪ್ರಜ್ಞಾವಂತರಾಗಿ ದುಡಿಯಬೇಕು; ಆ ಮತದ, ಈ ಮತದ, ಹಳೆಮತದ ಸಹವಾಸಗಳನ್ನು ತ್ಯಜಿಸಿ ಮನುಜ ಮತಕ್ಕೆ ಸೇರಲು ಕರೆಕೊಡುತ್ತಾರೆ. ಆಗ ಕವಿ ಈ ಮೇಲಿನಂತೆ ಹೇಳುತ್ತಾರೆ.
ಒಂದೇ ವಾಕ್ಯದಲ್ಲಿ ಉತ್ತರಿಸಿರಿ
ಪ್ರ. 1. 'ಓ ಬನ್ನಿ ಸೋದರರೆ, ಬೇಗ ಬನ್ನಿ' ಕವನದ ಕರ್ತೃ ಯಾರು?
ಉತ್ತರ : ಕುವೆಂಪು.
ಪ್ರ. 2. “ಓ ಬನ್ನಿ ಸೋದರರೆ, ಬೇಗ ಬನ್ನಿ' ಕವನದ ತಿರುಳೇನು?
ಉತ್ತರ : ಶಾಸ್ತ್ರ-ಮತಧರ್ಮಗಳಿಗೆ ಮಾನವತೆ ಮೈಗೂಡಬೇಕು; ಸ್ವಾರ್ಥ ಕಟ್ಟಳೆಯ ಶಾಸ್ತ್ರ-ಮತಧರ್ಮಗಳನ್ನು ಆಚೆಗೆಸೆಯಬೇಕೆಂಬ ಕವಿಯ ಅಪ್ಪಟ ಮಾನವ ವೈಚಾರಿಕ ಪ್ರಜ್ಞೆಯನ್ನು ಪ್ರತಿಪಾದಿಸುವುದು.
ಪ್ರ. 3. ಬುಡಮುಟ್ಟ ಕೀಳಬೇಕಾದದ್ದೇನು?
ಉತ್ತರ : ಬಡತನವನ್ನು.
ಪ್ರ. 4. ನಿಜವಾದ ಶಾಸ್ತ್ರ ಯಾವುದು?
ಉತ್ತರ : ಎದೆಯ ದನಿ (ಮಾನವತೆ).
ಪ್ರ. 5.** ಋಷಿ ಯಾವುದು?
ಉತ್ತರ :** ಮಾನವತೆ (ಅಥವಾ ಎದೆಯ ದನಿ).
ಪ್ರ. 6. ಯಾವುದು ಶಾಸ್ತ್ರ ಸಮ್ಮತವಲ್ಲ?
ಉತ್ತರ : ಕೆರೆಯಲ್ಲಿ ಮುಳುಗುತ್ತಿರುವ ಪಂಚಮರ ಶಿಶುವನ್ನು ಮುಟ್ಟಿದರೆ ಬ್ರಹ್ಮತ್ವ ಕೆಡುತ್ತದೆನ್ನುವುದು.
ಪ್ರ. 7. ಮಾನವತೆಯಿಲ್ಲದ ಶಾಸ್ತ್ರ ಹೇಳಿದ ಋಷಿಯನ್ನು ಕವಿ ಏನು ಮಾಡಲು ಹೇಳುತ್ತಾರೆ?
ಉತ್ತರ : ಆತ ಹೇಳಿದ ಶಾಸ್ತ್ರದಲ್ಲೇ ಆತನನ್ನು ಸುತ್ತಿ ಎತ್ತಿ ಆಚೆಗೆ ಬಿಸಾಡಲು ಹೇಳುತ್ತಾರೆ.
ಪ್ರ. 8. ಯಾವುವು ಶಾಸ್ತ್ರಸಮ್ಮತವಲ್ಲ?
ಉತ್ತರ : ಸ್ವರ್ಗ – ನರಕಗಳು.
ಪ್ರ. 9. ನಮ್ಮಂತೆಯೇ ಮಾನವರು ಯಾರು?
ಉತ್ತರ : ಹಿಂದಿನ ಋಷಿಗಳು.
ಪ್ರ. 10. ಕವಿ ಯಾವುದಕ್ಕೆ ಸೇರಲು ಹೇಳುತ್ತಾನೆ?
ಉತ್ತರ : ಮನುಜ ಮತ ಮತ್ತು ವಿಶ್ವಪಥಕ್ಕೆ ಸೇರಲು ಹೇಳುತ್ತಾನೆ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ