ತರಗತಿಗಳು

ಕುವೆಂಪು ಅವರ 'ಕಾನೂರು ಸುಬ್ಬಮ್ಮ ಹೆಗ್ಗಡತಿ': ಕಾದಂಬರಿಯ ಸಂಕ್ಷಿಪ್ತ ಸಾರಾಂಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುವೆಂಪು ಅವರ 'ಕಾನೂರು ಸುಬ್ಬಮ್ಮ ಹೆಗ್ಗಡತಿ': ಕಾದಂಬರಿಯ ಸಂಕ್ಷಿಪ್ತ ಸಾರಾಂಶ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಶುಕ್ರವಾರ, ಏಪ್ರಿಲ್ 24, 2026

ಕುವೆಂಪು ಅವರ 'ಕಾನೂರು ಸುಬ್ಬಮ್ಮ ಹೆಗ್ಗಡತಿ : ಕಾದಂಬರಿಯ ಸಂಕ್ಷಿಪ್ತ ಸಾರಾಂಶ

 

   

ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯ ಸಂಕ್ಷಿಪ್ತ ಸಾರಾಂಶ: 

1. ರಾಮತೀರ್ಥದೆಡೆ ಕಲ್ಲು ಸಾರದ ಮೇಲೆ 

ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯ ಪ್ರಮುಖ ಪಾತ್ರಧಾರಿಗಳಾದ ಹೂವಯ್ಯ ಮತ್ತು ರಾಮಯ್ಯ ಎಂಬ ತರುಣ ಅಣ್ಣತಮ್ಮಂದಿರು ಮೈಸೂರಿನಲ್ಲಿ ತಮ್ಮ ವಿದ್ಯಾಭ್ಯಾಸ ಮುಗಿಸಿ ತಮ್ಮ ಹುಟ್ಟೂರಾದ ಕಾನೂರಿಗೆ ಹಿಂದಿರುಗುತ್ತಿದ್ದರು.

ಹೂವಯ್ಯನದು ತುಂಬಾ ವಿಶಿಷ್ಟವಾದ ವ್ಯಕ್ತಿತ್ವ. ಗಂಭೀರ ಸ್ವಭಾವದವನಾದ ಅವನು ಆಲೋಚನಾಪರ ಮತ್ತು ಸೌಂದರ್ಯೋಪಾಸಕನಾಗಿದ್ದನು. ಆತನ ನೋಟದಲ್ಲಿ ಎದ್ದು ಕಾಣುತ್ತಿದ್ದ ಆಧ್ಯಾತ್ಮಿಕತೆ ಹಾಗೂ ದೃಢತೆಗಳು ಆತನ ವ್ಯಕ್ತಿತ್ವಕ್ಕೊಂದು ಮೆರುಗನ್ನು ತಂದು ಕೊಡುವಂತಿದ್ದವು. ಆದರೆ, ಅಷ್ಟೇನೂ ವಿಶೇಷ ವ್ಯಕ್ತಿತ್ವವಿಲ್ಲದ ರಾಮಯ್ಯ ಮುಗ್ಧ ಸ್ವಭಾವದವನಾಗಿದ್ದು ಸುಖಾಪೇಕ್ಷಿಯಾಗಿದ್ದನು. 

ಸಹೋದರರಿಬ್ಬರು ತೀರ್ಥಹಳ್ಳಿಯ ಕಲ್ಲುಸಾರದ ಮಾರ್ಗವಾಗಿ ಸಾಗಿ ತುಂಗಾ ನದಿಯನ್ನು ದಾಟುತ್ತಿರಬೇಕಾದರೆ, ಹೂವಯ್ಯನಿಗೆ ತನ್ನ ಬಾಲ್ಯದ ದಿನಗಳು ಮತ್ತು ತುಂಗಾ ನದಿಯಲ್ಲಿ ಈಜಾಡಿದ ನೆನಪುಗಳು ಮರುಕಳಿಸುತ್ತವೆ. ಪ್ರಕೃತಿ ಯಾವ ವ್ಯತ್ಯಾಸವನ್ನು ಹೊಂದದೆ ಅಂದಿನಂತೆಯೇ ಇದ್ದುದನ್ನು ಕಂಡ ಹೂವಯ್ಯ, ತಾನು ಬೆಳೆದು ಬದಲಾಗಿರುವುದನ್ನು ಗಮನಿಸುತ್ತಾನೆ.

ಹೂವಯ್ಯ- ರಾಮಯ್ಯರ ಸಾಮಾನುಗಳನ್ನು ಹೊತ್ತು ಆಳು ನಿಂಗ ಮತ್ತು ಪುಟ್ಟಣ್ಣರು, ನದಿಯ ಆಚೆ ದಡದಲ್ಲಿ ಸಿದ್ಧವಾಗಿದ್ದ ನಿಂತಿದ್ದ ಎತ್ತಿನ ಗಾಡಿಯ ಬಳಿಗೆ ಹೂವಯ್ಯ- ರಾಮಯ್ಯರನ್ನು ಕರೆ ತಂದರು. ಎತ್ತಿನ ಗಾಡಿಯಲ್ಲಿ ಹತ್ತಿದ ತಕ್ಷಣ ಹೂವಯ್ಯ- ರಾಮಯ್ಯರಿಗೆ ನಗರದ ಬದುಕು ಮರೆತು ಹೋಗಿ, ಮಲೆನಾಡಿನ ಕಾಡು, ಮನೆ ಮತ್ತು ಹಸಿರಿನ ನೆನಪುಗಳು ಆವರಿಸುತ್ತವೆ. ನಿಂಗ ಗಾಡಿ ಓಡಿಸುತ್ತಿದ್ದಂತೆಯೇ, ಕಾನೂರು ಹೆಗ್ಗಡಿತಿಯ ಕಥೆ ಚಲನಶೀಲವಾಗುತ್ತದೆ.

2. ರಸ್ತೆಯಲ್ಲಿ ಶನಿ 

ತೀರ್ಥಹಳ್ಳಿಗೆ ಹೋಗಿದ್ದ ಸಿಂಗಪ್ಪಗೌಡರು ಮರಳಿ ಕಾನೂರಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಇದನ್ನು ಕಂಡ ಹೂವಯ್ಯ ಸಿಂಗಪ್ಪಗೌಡರಿಗೆ ಗಾಡಿಯನ್ನು ಹತ್ತುವಂತೆ ಕೂಗಿ ಹೇಳಿದನು. ಆದರೆ, ಹೂವಯ್ಯನ ಚಿಕ್ಕಪ್ಪನಾದ ಕಾನೂರು ಚಂದ್ರಯ್ಯಗೌಡರ ಜೊತೆಗಿನ ಹಳೆಯ ಮುನಿಸಿನಿಂದಾಗಿ ಸಿಂಗಪ್ಪಗೌಡರು ಗಾಡಿಯನ್ನು ಹತ್ತಲು ಮೊದಲು ನಿರಾಕರಿಸಿದರಾದರೂ, ಮೈಸೂರಿನಿಂದ ಬಂದಿದ್ದ ಹೂವಯ್ಯ ಮತ್ತು ರಾಮಯ್ಯರ ಪ್ರೀತಿಯ ಕರೆಯನ್ನು ತಳ್ಳಿಹಾಕಲಾಗದೆ, ಉರಿಬಿಸಿಲಿನಲ್ಲಿ ನಡೆಯುವ ಬದಲು ಕೊನೆಗೆ ಗಾಡಿ ಹತ್ತಿ ಕುಳಿತುಕೊಳ್ಳಬೇಕಾಯಿತು. 

ಆದರೆ ಎತ್ತಿನ ಗಾಡಿ ಸಾಗುತ್ತಿರಬೇಕಾದರೆ, ರಸ್ತೆಯಲ್ಲಿ ಶನಿ ಆತು ಕುಳಿತಿದ್ದಿತು. ಪ್ರಯಾಣದ ಮಧ್ಯೆ, ಬಾಯಾರಿದ್ದ ಎತ್ತುಗಳು ಪಕ್ಕದಲ್ಲಿದ್ದ ಕೆರೆಯ ನೀರು ಕಾಣುವುದೊಂದೇ ತಡ, ನಿಯಂತ್ರಣ ತಪ್ಪಿ ಕೆರೆಯ ಕಡೆಗೆ ನುಗ್ಗಿದ್ದರಿಂದ ಗಾಡಿ ಉರುಳಿ ಅಪಘಾತಕ್ಕೀಡಾಯಿತು. ಪುಟ್ಟಣ್ಣನ ಸಮಯಪ್ರಜ್ಞೆಯಿಂದ ಎತ್ತುಗಳು ಪ್ರಾಣಾಪಾಯದಿಂದ ಪಾರಾಗುತ್ತವೆ. ಆದರೆ, ಗಾಡಿಯಲ್ಲಿದ್ದ ಟ್ರಂಕು ಹೂವಯ್ಯನ ಬೆನ್ನುಮೂಳೆಗೆ ಬಡಿದು ತೀವ್ರ ಪೆಟ್ಟಾಗಿ ಹೂವಯ್ಯ ಏಳಲಾರದಂತಾದನು. ಹಸಿದು ಬಳಲಿದ್ದ ಅವರೆಲ್ಲಾ ಗಾಡಿಯನ್ನು ಎತ್ತಲು ಪ್ರಯತ್ನಿಸುತ್ತಿರಬೇಕಾದರೆ, ದೂರದಲ್ಲಿ ಯಾರೋ ಬರುತ್ತಿರುವುದು ಕಣ್ಣಿಗೆ ಬೀಳುತ್ತದೆ. 

3. ಚಿನ್ನಯ್ಯನ ಮೀನು ಶಿಕಾರಿ

ತರುಣ ಚಿನ್ನಯ್ಯ ಮುತ್ತಳ್ಳಿಯ ಸಾಹುಕಾರ ಶ್ಯಾಮಯ್ಯಗೌಡರ ಮಗ. ಓದಿನಲ್ಲಿ ಆಸಕ್ತಿ ಇಲ್ಲದ ಈತನಿಗೆ ಬೇಟೆಯಾಡುವುದರಲ್ಲಿ ಅಪಾರ ಗೀಳು; ವಿಶೇಷ ಆನಂದ. ಹೂವಯ್ಯ ಮತ್ತು ರಾಮಯ್ಯರ ಆತ್ಮೀಯ ಗೆಳೆಯನಾದ ಚಿನ್ನಯ್ಯ, ಮೈಸೂರಿನಿಂದ ಬರುತ್ತಿರುವ ಹೂವಯ್ಯ ಮತ್ತು ರಾಮಯ್ಯರಿಗಾಗಿ ಮೀನಿನ ಅದ್ದೂರಿ ಔತಣದ ಸಿದ್ಧತೆ ನಡೆಸಿದ್ದನು. ಈ ಕಾರಣಕ್ಕಾಗಿಯೇ ಚಿನ್ನಯ್ಯ, ನಂಜರಿಬ್ಬರು ಬೈಲುಕೆರೆಗೆ ಮೀನು ಷಿಕಾರಿಗೆ ಹೋಗಿದ್ದರು.

ನಂಜ ಮುತ್ತಳ್ಳಿಯ ಸಾಹುಕಾರ ಶ್ಯಾಮಯ್ಯಗೌಡರ ಒಕ್ಕಲು. ಜಾತಿಯಲ್ಲಿ ಕುಂಬಾರನಾಗಿದ್ದ ನಂಜ, ಮದ್ಯವ್ಯಸನಿಯಾಗಿದ್ದರೂ ಬೇಟೆಯಲ್ಲಿ ನಿಷ್ಣಾತನಾಗಿದ್ದವನು. ಈತ ಎಷ್ಟು ಮುಗ್ಧಸ್ವಭಾವದವನೆಂದರೆ, ಒಮ್ಮೆ ಕುಡಿದ ಮತ್ತಿನಲ್ಲಿ ಏಡಿಯನ್ನು ಕಂಡು ಭಯಂಕರ ಶತ್ರುವೆಂದು ಭಾವಿಸಿ ಅದಕ್ಕೆ ಗುಂಡು ಹೊಡೆದು ಬಿಟ್ಟಿದ್ದನು. 

ಮೀನಿಗಾಗಿ ಕೆರೆಯ ಬಳಿಯ ಮರವೇರಿ ಕಾಯುತ್ತ ಕುಳಿತಿದ್ದ ಚಿನ್ನಯ್ಯ ಮತ್ತು ನಂಜರ ಬಲೆಗೆ ಎಷ್ಟೊತ್ತಾದರೂ ಮೀನು ಬೀಳುವುದೇ ಇಲ್ಲ. ಕೊನೆಗೂ ಚಿನ್ನಯ್ಯ ಸಾಹಸ ಮಾಡಿಯೇ ಬಿಟ್ಟ. ಒಂದು ದೊಡ್ಡ 'ಅವಲು' ಮೀನಿಗೆ ಗುರಿ ಇಟ್ಟು ಹೊಡೆದ. ತಲೆ ಹಾರಿ ಹೋಗಿ ಕೆಸರಲ್ಲಿ ಬಿದ್ದ ಆ ಮೀನನ್ನು ನಂಜ ಸಾಹಸಪಟ್ಟು ಕೆಸರು ನೀರಿನಲ್ಲಿ ಮುಳುಗಿ ದಡಕ್ಕೆ ತಂದ.

ಆದರೆ ಅಷ್ಟೊತ್ತಿಗಾಗಲೇ ಅನಿರೀಕ್ಷಿತ ಅಪಘಾತವೊಂದು ಕಾದು ಕೂತಿದ್ದಿತು. ಮೀನು ಸಿಕ್ಕಿದ ಖುಷಿಯಲ್ಲಿದ್ದ ಚಿನ್ನಯ್ಯನಿಗೆ ರಸ್ತೆಯಲ್ಲಿ ಹೂವಯ್ಯನ ಗಾಡಿ ಉರುಳಿದ ಬಿದ್ದ ದೃಶ್ಯ ಕಾಣಿಸುತ್ತದೆ. ಚಿನ್ನಯ್ಯ ಮತ್ತು ನಂಜರ ಮೀನು ಹಿಡಿಯುವ ಉತ್ಸಾಹ ಮರೆಯಾಗಿ, ಅವರು ಅಪಘಾತಕ್ಕೀಡಾದವರ ನೆರವಿಗಾಗಿ ಗಾಡಿ ಉರುಳಿ ಬಿದ್ದಿದ್ದ ಕೆರೆಯಲ್ಲಿಗೆ ಓಡೋಡಿ ಬಂದರು. ಗಾಯಗೊಂಡಿದ್ದ ಹೂವಯ್ಯನನ್ನು ಉಪಚರಿಸಿ ಗಾಡಿಯಲ್ಲಿ ಎತ್ತಿ ಕೂರಿಸಿದರು. 

ಇತ್ತ, ಗೆಳೆಯರಿಗಾಗಿ ಆಸೆಯಿಂದ ಹಿಡಿದ ಮೀನು ಕೆರೆಯ ದಡದಲ್ಲಿಯೇ ಉಳಿದು ಕ್ರಿಮಿಕೀಟಗಳ ಪಾಲಾಗುತ್ತದೆ. 

4. ಸೀತೆ 

ಚಿನ್ನಯ್ಯ ಮನೆಯ ಹೆಬ್ಬಾಗಿಲನ್ನು ಪ್ರವೇಶಿಸುತ್ತಿದ್ದಂತೆಯೇ ಆತನ ತಾಯಿ ಗೌರಮ್ಮ ಆತನನ್ನು ಕೂಗಿ ಕರೆದಳು. ಚಿನ್ನಯ್ಯ ತಿರುಗಿ ನೋಡಿದರೆ, ದನದ ಕೊಟ್ಟಿಗೆಯಿಂದ ಹಾಲಿನ ಹಿತ್ತಾಳೆ ತಂಬಿಗೆ ಹಿಡಿದು ಬರುತ್ತಿದ್ದ ತಾಯಿ ಗೌರಮ್ಮನವರು ಚಿನ್ನಯ್ಯನ ಕಣ್ಣಿಗೆ ಸಾಕ್ಷಾತ್ ಪಾವನಮೂರ್ತಿಯಾಗಿ ಕಂಡರು. ಪಾದಗಳಿಗೆ ಕೊಟ್ಟಿಗೆಯ ಸೆಗಣಿ ಮೆತ್ತಿದ್ದರೂ, ಅವರ ಕೈಬಳೆಗಳ ಝಣತ್ಕಾರ ಮತ್ತು ಅವರ ಗೃಹಿಣಿಯ ಗಾಂಭೀರ್ಯ- ಇವು ಚಿನ್ನಯ್ಯನಿಗೆ ಮಾತೃವಾತ್ಸಲ್ಯದ ದಿವ್ಯ ಅನುಭೂತಿಯನ್ನು ನೀಡುತ್ತವೆ. ಆ ತಾಯಿಯ ಬಳಿ ಬಂದು ನಿಲ್ಲುತ್ತಿದ್ದಂತೆಯೇ ಚಿನ್ನಯ್ಯನಿಗೊಂದು ಅನಿರ್ವಚನೀಯವಾದ ಆನಂದವಾಗುತ್ತದೆ. 

ಅಷ್ಟರಲ್ಲಿ ತೋಟದ ಗುಲಾಬಿ ಪೊದೆಯ ಮರೆಯಿಂದ ತಂಗಿ ಸೀತೆ ಹೂ ಕುಯ್ದುಕೊಡುವಂತೆ ಅಣ್ಣ ಚಿನ್ನಯ್ಯನನ್ನು ಕರೆದಳು. ತೋಟಕ್ಕೆ ಬಂದ ಚಿನ್ನಯ್ಯ ತಂಗಿ ಸೀತೆಯೊಂದಿಗೆ ಹೂವಯ್ಯ ಮತ್ತು ರಾಮಯ್ಯರು ಮೈಸೂರಿನಿಂದ ಬರುತ್ತಿರುವ ವಿಚಾರ ಪ್ರಸ್ತಾಪಿಸಿ, ವಿಶೇಷವಾಗಿ ಹೂವಯ್ಯನನ್ನು ಕುರಿತು ಅವಳನ್ನು ಕೀಟಲೆ ಮಾಡುತ್ತಾ ಹೂ ಕುಯ್ದುಕೊಟ್ಟು ಸೀತೆಯೊಂದಿಗೆ ಮನೆಯೊಳಗೆ ಬಂದನು.  

ಹೂವಯ್ಯನ ಹೆಸರನ್ನು ಕೇಳುತ್ತಿದ್ದಂತೆಯೇ ಸೀತೆಯ ಮನದಲ್ಲಿ ಬಾಲ್ಯದ ಸುಂದರ ನೆನಪುಗಳು ಮರುಕಳಿಸುತ್ತವೆ; ಚಿಕ್ಕಂದಿನಲ್ಲಿ ಹೂವಯ್ಯನೊಂದಿಗೆ ಆಡಿದ ಮದುವೆ ಆಟ, ಹೂವಯ್ಯನ ಮೇಲಿದ್ದ ತನ್ನ ಮುಗ್ಧ ಪ್ರೇಮ ಮತ್ತು ಒಡನಾಟದ ಚಿತ್ರಗಳು ಅವಳ ಕಣ್ಣಮುಂದೆ ಸುಳಿಯುತ್ತವೆ. ಅವಳು ಅಣ್ಣನ ವ್ಯಂಗ್ಯದ ಮಾತುಗಳಿಗೆ ನಾಚಿ ಕಂಬನಿಗರೆದರೂ, ಅವಳ ಅಂತರಾಳದಲ್ಲಿ ಮಾತ್ರ ಹೂವಯ್ಯನ ಆಗಮನದ ಸಂತಸ ಮಲೆನಾಡಿನ ಪ್ರಕೃತಿಯ ಸೊಬಗಿನಂತೆ ಮೈದಳೆದು ರಂಜಿಸುತ್ತದೆ. ಕೊನೆಗೆ ತಾಯಿಯ ಕೆಲಸದಲ್ಲಿ ನೆರವಾಗಲು ಅಡುಗೆಮನೆಗೆ ಹೋದ ಸೀತೆಯ ಮುಖದಲ್ಲಿ ಭಾವಿಜೀವನದ ನಾಚಿಕೆಯ ನಸುನಗೆ ಹಾಗೂ ಮಧುರ ಕನಸುಗಳು ಮೈದಳೆದು ತೋರುತ್ತವೆ.

5. ಕಾನೂರು ಚಂದ್ರಯ್ಯಗೌಡರ ಮೂರನೆಯ ಹೆಂಡತಿ

ಮಲೆನಾಡಿನ ದಟ್ಟ ಕಾಡಿನ ತಪ್ಪಲಿನಲ್ಲಿ ಏಕಾಂತವಾಗಿ ನೆಲೆಸಿದ್ದ ಕಾನೂರು ಚಂದ್ರಯ್ಯಗೌಡರ ಬೃಹತ್ ಮನೆ ಹಳೆಯ ಕಾಲದ ಭೀಮಗಾತ್ರದ ರಚನೆಯಾಗಿದ್ದು, ಈ ಮನೆ ಪ್ರಾಚೀನತೆ ಮತ್ತು ಹೊಸತನದ ಸಂಘರ್ಷಕ್ಕೆ ಸಾಕ್ಷಿಯಂತಿತ್ತು; ಒಂದು ಕಡೆ ಹಾವಸೆ ಹಿಡಿದ ಹೆಂಚುಗಳು ಮತ್ತು ಹೊಗೆ ಹಿಡಿದ ಮರಮುಟ್ಟುಗಳು; ಮತ್ತೊಂದು ಕಡೆ ರಾಷ್ಟ್ರೀಯ ಮಹಾಸಭೆಯ ಪ್ರಭಾವವನ್ನು ಸಾರುವ ಚಿತ್ರಪಟಗಳು. ಒಂದು ಕಾಲಕ್ಕೆ ನಲವತ್ತಕ್ಕೂ ಹೆಚ್ಚು ಜನರಿಂದ ತುಂಬಿ ತುಳುಕುತ್ತಿದ್ದ ಈ ದೊಡ್ಡ ಕುಟುಂಬದ ಜನ ಸಿಡುಬು ರೋಗದ ದಾಳಿಗೆ ತುತ್ತಾಗಿ ಕೇವಲ ಏಳು ಜನ ಮಾತ್ರ ಬದುಕುಳಿದರು. ಗೌಡರ ಅಣ್ಣ ಸುಬ್ಬಯ್ಯಗೌಡರ ಮರಣದ ನಂತರ ಮನೆಯ ಯಜಮಾನಿಕೆ ಚಂದ್ರಯ್ಯಗೌಡರ ಪಾಲಾಯಿತು. ನಡುವಯಸ್ಸಿನ ಚಂದ್ರಯ್ಯಗೌಡರು ಎರಡು ವಿವಾಹಗಳ ನಂತರವೂ (ಈಗಾಗಲೇ ಚಂದ್ರಯ್ಯಗೌಡರ ಇಬ್ಬರು ಹೆಂಡಿರು ಗತಿಸಿಹೋಗಿದ್ದರು) ನೆಲ್ಲುಹಳ್ಳಿಯ ಬಡ ಹುಡುಗಿ ಸುಬ್ಬಮ್ಮನಿಗೆ ಆಕರ್ಷಿತರಾಗಿ, ಸುಬ್ಬಮ್ಮನನ್ನು ಮದುವೆಯಾಗುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದರು.

ಬಡತನದಲ್ಲಿ ಬೆಳೆದು ಸಂಸ್ಕಾರದ ಕೊರತೆಯಲ್ಲೇ ತನ್ನ ಬಾಳು ಕಳೆದ ಸುಬ್ಬಮ್ಮ, ಕಾನೂರಿನ ಹೆಗ್ಗಡಿತಿಯಾದ ಕೂಡಲೇ ಅಹಂಕಾರ ಮತ್ತು ದರ್ಪದ ಪರಮಾವಧಿಯನ್ನು ಮೀರಿ ಬೆಳೆದಳು. ಈ ಹಿಂದೆ ಹೂವಯ್ಯನ ಮೇಲೆ ಆಸೆ ಇಟ್ಟುಕೊಂಡಿದ್ದ ಸುಬ್ಬಮ್ಮ, ಅನಿವಾರ್ಯವಾಗಿ ಚಂದ್ರಯ್ಯಗೌಡರ ಕೈಹಿಡಿದ ಮೇಲೆ ಮನೆಯ ಅಧಿಕಾರದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಳು. ಮನೆಯ ಇತರ ಸದಸ್ಯರಾದ ನಾಗಮ್ಮ ಮತ್ತು ಪುಟ್ಟಮ್ಮರ ಮೇಲೆ ಸಣ್ಣಪುಟ್ಟ ವಿಷಯಗಳಿಗೂ ಜಗಳವಾಡುತ್ತಾ, ಮನೆಯ ಶಾಂತಿಯನ್ನು ಕದಡತೊಡಗಿದಳು. 

ಇತ್ತ ಚಂದ್ರಯ್ಯಗೌಡರು ತಮ್ಮ ಯುವಪತ್ನಿ ಸುಬ್ಬಮ್ಮನನ್ನು ಕಳೆದುಕೊಳ್ಳುವ ಭಯದಿಂದ ಹಾಗೂ ಆಕೆ ಬೇರೆಯವರತ್ತ ಆಕರ್ಷಿತಳಾದಾಳೆಂಬ ಭೀತಿಯಿಂದ ಅವಳ ಚಾಡಿ ಮಾತುಗಳಿಗೆ ಮರುಳಾಗಿ, ತಮ್ಮ ಸ್ವಂತ ಮಕ್ಕಳು ಮತ್ತು ಅತ್ತಿಗೆ ನಾಗಮ್ಮನ (ಹೂವಯ್ಯನ ತಾಯಿ) ಮೇಲೆ ಕಠೋರರಾಗಿ ವರ್ತಿಸತೊಡಗಿದರು. ಹೀಗೆ, ಸುಬ್ಬಮ್ಮನ ಆಗಮನ ಕಾನೂರಿನ ದೊಡ್ಡಮನೆಯಲ್ಲಿ ವೈಷಮ್ಯ ಮತ್ತು ಕದನದ ಕಿಚ್ಚನ್ನು ಹಚ್ಚಿ ಉರಿಯತೊಡಗಿತು.

 ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿಯ ಸಂಕ್ಷಿಪ್ತ ಸಾರಾಂಶ: 

6. ಸೇರೆಗಾರರ ಕೇಪಿನ ಕೋವಿ 

ಮಲೆನಾಡಿನ ಕಾನೂರು ಬೆಟ್ಟದ ಮೇಲೆ ಅದೇ ತಾನೇ ಪಸರಿಸುತ್ತಲಿದ್ದ ಸೂರ್ಯೋದಯದ ರಮಣೀಯ ದೃಶ್ಯದೊಂದಿಗೆ ಕಥೆ ಆರಂಭವಾಗುತ್ತದೆ. ಬಹುದೂರದ ದಿಗಂತದ ಉಷ: ಕಾಂತಿಯಿಂದ ಸಹ್ಯಾದ್ರಿ ಶ್ರೇಣಿಗಳು ಸ್ಪಷ್ಟವಾಗಿ ಪ್ರಸ್ಪುಟವಾಗುತ್ತಿದ್ದರೂ, ಇನ್ನೂ ಮಲೆನಾಡಿನ ದಟ್ಟವಾದ ಕಾಡಿನೊಳಗೆ ಕತ್ತಲೆ ಆವರಿಸಿದ್ದಿತು. ಆದರೆ ಬೆಳಕಿನ ಆಗಮನ ಮತ್ತು ಕಾಡಿನ ಕತ್ತಲೆಯ ನಡುವೆ ಇಮ್ಮನಸ್ಸು ಮಾಡಿಕೊಂಡು ಮರದ ಕೊಂಬೆಯ ಮೇಲೆ ಕುಳಿತಿದ್ದ ಕಾಡುಕೋಳಿಯ ಹುಂಜವೊಂದು ಕೊನೆಗೆ ಕೆಳಗೆ ಹಾರಿ ತನ್ನ ಆಹಾರ ಹುಡುಕುವ ಕಾರ್ಯದಲ್ಲಿ ಮಗ್ನವಾಗುತ್ತದೆ. ಹೊಟ್ಟೆ ತುಂಬಿದ ಮೇಲೆ ಪ್ರಣಯಾಸಕ್ತಿಯಿಂದ ಹೇಂಟೆಗಳನ್ನು ಆ ಹುಂಜ ಕರೆಯಲಾರಂಭಿಸಿದ ವೇಳೆಗೆ ಸುತ್ತಲ ಕಾಡಿನಲ್ಲಿ ಕಾಜಾಣ, ಗಿಳಿ ಮತ್ತು ಮಂಗಟ್ಟೆ ಹಕ್ಕಿಗಳ ಕಲರವ ಪ್ರಕೃತಿಯ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. 

ಇದೇ ಸಮಯದಲ್ಲಿ ಬೇಟೆಯ ಆಸೆಯನ್ನು ಹೊತ್ತು ಕಾಡಿಗೆ ಬಂದಿದ್ದ ಕಾನೂರು ಸೇರೆಗಾರ ರಂಗಪ್ಪ ಸೆಟ್ಟರು, ಪ್ರಣಯಾಸಕ್ತಿಯಿಂದ ಹೇಂಟೆಗಳನ್ನು ಕೂಗಿ ಕರೆಯುತ್ತಿದ್ದ ಆ ಹುಂಜವನ್ನು ಹೇಂಟೆಯ ಧ್ವನಿಯನ್ನು ಅನುಕರಿಸುತ್ತಾ ಮರುಳುಗೊಳಿಸಿದರು. ತಮ್ಮ ಮೋಸದ ಕರೆಗೆ ಓಗೊಟ್ಟು ಹತ್ತಿರ ಬಂದ ಹುಂಜವನ್ನು ಸೆಟ್ಟರು ತಮ್ಮ ಕೇಪಿನ ಕೋವಿಯಿಂದ ಗುಂಡು ಹೊಡೆದರು. ಹುಂಜ ರಕ್ತಸಿಕ್ತವಾಗಿ ನೆಲಕ್ಕುರುಳಿ ಬಿದ್ದಿತು. ಹುಂಜ ಸತ್ತಿದೆ ಎಂದು ಭಾವಿಸಿದ ರಂಗಪ್ಪ ಸೆಟ್ಟರು ಅದರ ಸೌಂದರ್ಯವನ್ನು ಸವಿಯುತ್ತಾ, ಕೋವಿಗೆ ಮರು ಈಡು ತುಂಬಲು ಮುಂದಾದರು. ಆದರೆ ಅನಿರೀಕ್ಷಿತವಾಗಿ ಆ ಹುಂಜಕ್ಕೆ ಪ್ರಜ್ಞೆ ಬಂದು, ಅದು ಎದ್ದು ಓಡಿಹೋಗಿ ಪೊದೆಯೊಳಗೆ ಅಡಗಿಕೊಂಡಿತು. ಸೆಟ್ಟರು ಅದನ್ನು ಹಿಡಿಯಲು ಹರಸಾಹಸ ಪಟ್ಟರು. ಆದರೆ ಹಿಡಿಯಲು ಸಾಧ್ಯವಾಗದೆ ವಿಫಲರಾಗಿ, ಹತಾಶರಾಗಿ ಕಾಡಿನೊಳಗೆ ಮುಂದೆ ಸಾಗಿದರು.

 ಕಾಡಿನಲ್ಲಿ ಮುಂದೆ ಸಾಗಿದ ರಂಗಪ್ಪ ಸೆಟ್ಟರ ಕಣ್ಣಿಗೆ ಮುಂದೊಂದು ಕಡೆ ಸೀತೆಮನೆ ಸಿಂಗಪ್ಪಗೌಡರು ಅಕ್ರಮವಾಗಿ ಮಡಿಗಿಸಿಟ್ಟಿದ್ದ ನಾಟಾಗಳ ಸಂಗ್ರಹ ಕಾಣಿಸುತ್ತದೆ. ಅದನ್ನು ಕಂಡು ಹರ್ಷಿತರಾದ ಸೆಟ್ಟರು ಮುಂದೆ ಸಾಗುತ್ತಿರಬೇಕಾದರೆ, ಪೊದೆಯಲ್ಲಿ ಸಪ್ಪಳವಾಗುತ್ತದೆ. ರಂಗಪ್ಪ ಸೆಟ್ಟರು ಯಾವುದೋ ಪ್ರಾಣಿ ಇರಬೇಕೆಂದು ಭಾವಿಸಿ ಗುರಿಯಿಟ್ಟು ಗುಂಡು ಹಾರಿಸಿಯೇ ಬಿಟ್ಟರು. ಆದರೆ ಅಲ್ಲಿ ಅಡಗಿದ್ದದ್ದು ಯಾವುದೋ ಒಂದು ಪ್ರಾಣಿ ಅಲ್ಲ; ರಂಗಪ್ಪ ಸೆಟ್ಟರ ಜೀತದಾಳು ಬೈರ. ಅದೃಷ್ಟವಶಾತ್ ಬೈರನಿಗೆ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಹುಂಜ ಓಡಿಹೋದ ಗಡಿಬಿಡಿಯಲ್ಲಿ ಸೆಟ್ಟರು ಕೋವಿಗೆ ಗುಂಡು ಹಾಕಲು ಮರೆತಿದ್ದರಿಂದ ಬೈರ ಬದುಕುಳಿದಿದ್ದನು. ಕೊನೆಗೆ ಬೈರನು ಅಕ್ರಮವಾಗಿ ಇಳಿಸಿದ್ದ ಬಗನಿ ಕಳ್ಳನ್ನು ಇಬ್ಬರೂ ಹಂಚಿಕೊಂಡು ಕುಡಿದರು. ಕೊನೆಗೆ, ಸೀತೆಮನೆ ಸಿಂಗಪ್ಪಗೌಡರು ಅಕ್ರಮವಾಗಿ ಮಡಿಗಿಸಿಟ್ಟಿದ್ದ ನಾಟಾ ಸಂಗ್ರಹವನ್ನು ಕಬಳಿಸಬೇಕೆಂದು ಹೊಂಚು ಹಾಕಿದ ಅವರು ಒಬ್ಬರ ಗುಟ್ಟನ್ನು ಒಬ್ಬರು ಕಾಪಾಡಿಕೊಳ್ಳುವ ಒಪ್ಪಂದ ಮಾಡಿಕೊಂಡು ಕಾನೂರಿನ ಕಡೆಗೆ ಪ್ರಯಾಣ ಬೆಳೆಸಿದರು.

 7. ಕಡೆಗೋಲು ಕಂಬದ ಸಾಕ್ಷಿಯಲ್ಲಿ

ಕಾನೂರು ಮನೆಯ ಅಡುಗೆ ಮನೆಯಲ್ಲಿ ಇತ್ತ ಅಗ್ನಿ ಒಲೆಯ ಮೇಲಿಟ್ಟಿದ್ದ ಕಲ್ಲುಗಡಿಗೆಯನ್ನು ಕಾಯಿಸುವ ತನ್ನ ಕರ್ತವ್ಯದಲ್ಲಿ ನಿರತನಾಗಿದ್ದನು. ಅತ್ತ ಸುಬ್ಬಮ್ಮ ಸೌಟು ಹಿಡಿದು ಒಲೆಯ ಬುಡದಲ್ಲಿ ಅಗ್ನಿಗೆ ಅಂಕುಶವೆಂಬತೆ ನಿಂತಿದ್ದಳು. ಸುತ್ತಲಿನ ಜಗತ್ತೆಲ್ಲ ಬೆಳಗಾಗಿದ್ದರೂ ಅಡುಗೆ ಮನೆಯಯಲ್ಲಿ ಮಾತ್ರ ಮಬ್ಬು ತುಂಬಿದ್ದಿತು. ಆ ಮಬ್ಬು ಬೆಳಕಿನಲ್ಲಿ ಪಾಕಶಾಲೆಯ ಹಳೆಯ ಸಾಮಾನುಗಳ ನಡುವೆ ಕಡೆಗೋಲು ಕಂಬವೊಂದು ಶತಮಾನಗಳ ಇತಿಹಾಸಕ್ಕೆ ಮೂಕ ಸಾಕ್ಷಿಯೆಂಬಂತೆ ನಿಂತಿದ್ದಿತು. ಮನೆಯ ಅನೇಕ ತಲೆಮಾರುಗಳ ಹೆಣ್ಣುಮಕ್ಕಳ ಸುಖ-ದುಃಖ, ಪ್ರೇಮ-ದ್ವೇಷ ಹಾಗೂ ಗುಟ್ಟುಗಳನ್ನು ಅರಿತಿದ್ದ ಈ ಕಂಬ, ಮಾತಿಲ್ಲದೆ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಿತು. ಆ ಮನೆಯ ಅದೆಷ್ಟೋ ಸಂಭಾಷಣೆ, ಕ್ಷದ್ರ ಕಲಹಗಳನ್ನು ತಿಳಿದಿದ್ದ ಈ ಕಂಬಕ್ಕೆ ಬಾಲಕ ವಾಸುವಿನ ತಾಯಿ, ಚಂದ್ರಯ್ಯಗೌಡರ ತಾಯಿ, ಅವರ ಅಜ್ಜನ ತಾಯಿ,ಅವರ ಅಜ್ಜನ ಅಜ್ಜನ ಅಜ್ಜನ ತಾಯಿ ಎಲ್ಲರೂ ಚಿರಪರಿಚಿತರು! ಮನೆಯ ಎಲ್ಲ ವಿಷಯವೂ ಅದಕ್ಕೆ ತಿಳಿದಿತ್ತು. ನಿನ್ನೆ ತಾನೇ ವಾಸು ಬೆಣ್ಣೆ ಕದ್ದು ತಿಂದ ವಿಷಯವೂ ಅದಕ್ಕೆ ಗೊತ್ತು! ಹೀಗಿರುವಾಗ, ಉಪ್ಪಿಟ್ಟು ತಿನ್ನುವುದರಲ್ಲಿ ಮಗ್ನನಾಗಿದ್ದ ವಾಸುವಿಗೆ "ವಾಸೂ, ನಿನ್ನೆ ನೀನು ಬೆಣ್ಣೆ ಕದ್ದಿದ್ದು ಹೇಳಲೇನು?" ಎಂಬ ಕಂಬದ ಧ್ವನಿ ಗತಿಸಿ ಹೋದ ಅಜ್ಜಮ್ಮನ ಧ್ವನಿಯಂತೆ ಕೇಳಿಸುತ್ತದೆ. ವಾಸು ಹೆದರಿ ತಾನು ಬೆಣ್ಣೆ ಕದ್ದ ವಿಷಯ ಎಲ್ಲಿ ಬಯಲಾಗುತ್ತದೋ ಎಂದು ಕಂಗಲಾದನು. ನಾಗಮ್ಮನವರು ವಾಸುವಿನ ಈ ಅವ್ಯವಸ್ಥಿತ ರೂಪವನ್ನು ಕಂಡು ಕನಿಕರದಿಂದ ಮುಗುಳ್ನಕ್ಕರು. ಆದರೆ, ಸುಬ್ಬಮ್ಮ ಮಾತ್ರ ಹಸಿವಿನಿಂದ ಇನ್ನಷ್ಟು ಉಪ್ಪಿಟ್ಟು ಕೇಳಿದ ವಾಸುವನ್ನು ಸಿಡುಕಿನಿಂದ ಗದರಿಸಿದಳು. ಇದರಿಂದ ಬೇಸರಗೊಂಡ ವಾಸು ಸುಬ್ಬಮ್ಮನನ್ನು ಮನಸ್ಸಿನಲ್ಲೇ ಬೈಯುತ್ತಾ ರಭಸದಿಂದ ಹೊರನಡೆದನು.

 ಇದನ್ನೆಲ್ಲಾ ನೋಡುತ್ತಾ ಕೂತಿದ್ದ ನಾಗಮ್ಮನವರಿಗೆ ಕೋಪ ಭುಗಿಲೆನ್ನುತ್ತದೆ. ಪುಟ್ಟಮ್ಮನಿಗೆ ಸ್ವಲ್ಪ ಖಾರವಾಗಿಯೇ, ಗಟ್ಟಿಯಾಗಿಯೇ ಹೇಳಿದರು. ವಾಸು ಬೈದುದನ್ನು ಕೇಳಿಸಿಕೊಂಡ ಸುಬ್ಬಮ್ಮನೂ ಸಹಿತ ಅಗ್ನಿಪರ್ವತವಾಗಿದ್ದಳು. ಕೋಪಗೊಂಡ ಸುಬ್ಬಮ್ಮ ಮತ್ತು ನಾಗಮ್ಮನವರ ನಡುವೆ ಮಾತಿನ ಚಕಮಕಿ ತಾರಕಕ್ಕೇರುತ್ತದೆ. ಈ ಜಗಳದಲ್ಲಿ ಸುಬ್ಬಮ್ಮ ತನ್ನ ಆಕ್ರೋಶವನ್ನು ಕಲ್ಲುಗಡಿಗೆಯ ಮೇಲೆ ತೀರಿಸಿಕೊಂಡಾಗ, ಆ ಪುರಾತನ ಗಡಿಗೆ ಒಡೆದು ಪಲ್ಯವೆಲ್ಲ ನೆಲಪಾಲಾಗುತ್ತದೆ. ಈ ಮಧ್ಯೆ ನಾಗಮ್ಮನವರು ಅಕ್ಕಿ ಬೀಸಲು ಆಳು ಸೇಸಿಯನ್ನು ಮನೆಗೆ ಕರೆದಿದ್ದು, ಆ ಸೇಸಿಗೆ ನಾಗಮ್ಮನವರು ಕೊಡಬೇಕೆಂದುಕೊಂಡಿದ್ದ ಅನ್ನದ ವಿಚಾರದಲ್ಲಿ ಸುಬ್ಬಮ್ಮ ಮತ್ತು ಪುಟ್ಟಮ್ಮನ ನಡುವೆ ಮತ್ತೊಂದು ಸಂಘರ್ಷ ನಡೆಯುತ್ತದೆ. ಹಠಕ್ಕೆ ಬಿದ್ದ ಪುಟ್ಟಮ್ಮ ಅನ್ನದ ಬೋಗುಣಿಯನ್ನು ಹೊರಗೆ ಒಯ್ಯುವಾಗ ಅದು ಕೆಳಗೆ ಬಿದ್ದು ಅನ್ನವೆಲ್ಲ ಚೆಲ್ಲಾಪಿಲ್ಲಿಯಾಗುತ್ತದೆ. ಜಗಳದ ಕೂಳನ್ನು ತಿನ್ನಲು ಹೆದರಿ ಸೇಸಿ ಹೊರಟುಹೋದರೆ, ಅಂಗಳದಲ್ಲಿದ್ದ ನಾಯಿಮರಿಗಳು ಮತ್ತು ಕೋಳಿಗಳು ಆ ಅನ್ನಕ್ಕಾಗಿ ಪರಸ್ಪರ ಕಾದಾಡತೊಡಗುತ್ತವೆ. ಕೊನೆಯಲ್ಲಿ ಟೈಗರ್ ಎಂಬ ನಾಯಿ ನುಗ್ಗಿ ದೊಡ್ಡ ಗಲಭೆಯನ್ನೇ ಎಬ್ಬಿಸುತ್ತದೆ. ಈ ಹಿಂಸೆಯ ನಡುವೆ ಒಂದು ಸಣ್ಣ ನಾಯಿಮರಿ ಕೆಸರಿಗೆ ಬಿದ್ದು, ಹುಂಜನ ಕುಟುಕಿಗೆ ಒಳಗಾಗಿ ನೋವಿನಿಂದ ಅರಚತೊಡಗಿ, ಇಡೀ ಅಡುಗೆ ಮನೆಯ ಉದ್ವಿಗ್ನ ವಾತಾವರಣಕ್ಕೆ ದಾರುಣ ಅಂತ್ಯ ಹಾಡುತ್ತದೆ. 

 8. ಬೇಲರ ಬೈರನ ಮಗ ಗಂಗಹುಡುಗನೊಡನೆ

ತಾನು ಕೇಳಿದ ಉಪ್ಪಿಟ್ಟು ಕೊಡದೆ ತನ್ನನ್ನು ಗದರಿಸಿದ ಚಿಕ್ಕಮ್ಮನ ಮೇಲೆ ಕೋಪಕೊಂಡು ಮನೆಯಿಂದ ಹೊರಬಂದ ವಾಸು, ತನ್ನ ಗೆಳೆಯ ಗಂಗನೊಂದಿಗೆ ಪಿಕಳಾರ ಹಕ್ಕಿ ಶಿಕಾರಿಗೆ ಹೊರಡಲು ಮುಂದಾದನು. ತನ್ನ ಅಂಗಿಯ ಜೇಬಿನಲ್ಲಿ ಅಕ್ಷಯ ಪಾತ್ರೆಯಂತೆ ತುಂಬಿದ್ದ ಬಣ್ಣದ ಚಿತ್ರ, ಪೀಪಿ, ಬಳಪದ ಚೂರುಗಳ ನಡುವೆ ಕಾಣದಾದ ರಬ್ಬರ್ ಬಿಲ್ಲನ್ನು ಹುಡುಕಿ ತೆಗೆದ ವಾಸು, ನಂತರ ಗಂಗನನ್ನು ಕರೆತರಲು ಬೈರನ ಬಿಡಾರಕ್ಕೆ ಹೊರಟನು. ಗಂಗ ಅಸ್ಪೃಶ್ಯ ಜಾತಿಯ ಬೇಲರ ಭೈರನ ಮಗ. ಬೈರನ ಬಿಡಾರಕ್ಕೆ ಬಂದ ವಾಸು, ಗಂಗನನ್ನು ಕರೆದುಕೊಂಡು ಮುಂಚೆಯೇ ಹೊಂಚು ಹಾಕಿದ್ದ ಪಿಕಳಾರ ಹಕ್ಕಿಯ ಗೂಡಿನತ್ತ ತೆರಳಿದನು. ಅಲ್ಲಿ ಉರುಳಿಗೆ ಬಿದ್ದ ಹಕ್ಕಿಯನ್ನು ಹಿಡಿಯಲು ವಾಸು ಆತುರ ತೋರಿದಾಗ, ಆ ಹಕ್ಕಿ ಹಾರಿಹೋಗುತ್ತದೆ. ಇದರಿಂದ ಕೋಪಗೊಂಡ ವಾಸು ಅದನ್ನು ಹೊಡೆದು ಸಾಯಿಸಿದನು. ಇನ್ನು ಗೂಡಿನಲ್ಲಿರುವ ಮರಿಗಳನ್ನಾದರೂ ತೆಗೆದುಕೊಳ್ಳಬೇಕೆಂದರೆ, ಗೂಡಿನಲ್ಲಿದ್ದ ಮರಿಗಳೂ ಮಾಯವಾಗಿದ್ದವು. ಗಂಗನೇ ಅವುಗಳನ್ನು ಕದ್ದಿರಬಹುದೆಂದು ವಾಸುವಿನ ಶಂಕೆ. ಆದರೆ, ಗಂಗ ಅದನ್ನು ಒಪ್ಪುವುದಿಲ್ಲ. ಕೊನೆಗೆ ವಾಸು ಬೈರನ ಬಿಡಾರಕ್ಕೆ ಮರಳಿದಾಗ, ಗಂಗನ ತಾಯಿ ಸೇಸಿ ಹಕ್ಕಿ ಮತ್ತು ಮರಿಗಳನ್ನು ಹೊರಗೆ ಎಸೆದಾಗ ಗಂಗನ ಕಳ್ಳಾಟ ಬಯಲಾಗುತ್ತದೆ. ಗೆಳೆಯನ ಮೋಸದಿಂದ ಕೆರಳಿದ ವಾಸು, ಆತ ಅಸ್ಪೃಶ್ಯನೆಂಬ ಮೈಲಿಗೆಯನ್ನೂ ಮರೆತು ಗಂಗನಿಗೆ ನಾಲ್ಕು ಗುದ್ದು ಕೊಟ್ಟು ಅಳುತ್ತಾ ಮನೆಗೆ ಮರಳಿದನು. ದಾರಿಯಲ್ಲಿ ಅಸ್ಪೃಶ್ಯ ಗಂಗನನ್ನು ಮುಟ್ಟಿದ್ದಕ್ಕೆ ಪ್ರಾಯಶ್ಚಿತ್ತವಾಗಿ ಸೆಗಣಿಯನ್ನು ಮೆಟ್ಟಿ ಹಿತ್ತಲ ಬಾಗಿಲಿನಿಂದ ಮನೆ ಸೇರಿದನು. ಅಲ್ಲಿಯೂ ತಂದೆಯ ಕೋಪ ಮತ್ತು ಚಿಕ್ಕಮ್ಮನ ಆರ್ತನಾದದ ಗದ್ದಲವೇ ವಾಸುವನ್ನು ಸ್ವಾಗತಿಸುತ್ತದೆ.

9. ಚಂದ್ರಯ್ಯಗೌಡರ ದರ್ಬಾರು

ಆ ಕಾಲಕ್ಕೆ ಚಂದ್ರಯ್ಯಗೌಡರ ಮನೆಯ ಜಗಲಿ ವಿವಿಧ ಸಾಮಾಜಿಕ ಸ್ತರದ ವ್ಯಕ್ತಿಗಳ ಸಮಾಗಮಕ್ಕೆ ಸಾಕ್ಷಿಯಾಗಿತ್ತು. ಸಂಪ್ರದಾಯಸ್ಥ ಜೋಯಿಸರಾದ ವೆಂಕಪ್ಪಯ್ಯನವರು ಗೋಡೆಯ ಪಕ್ಕದ ಮಣೆಯ ಮೇಲೆ ತಮ್ಮ ಮಡಿ-ಮೈಲಿಗೆಯ ಕಟ್ಟುಪಾಡುಗಳೊಂದಿಗೆ ಕುಳಿತಿದ್ದರು. ಅವರ ಎದುರು ದಾರಿದ್ರ್ಯದಿಂದ ಕೃಶರಾಗಿದ್ದ ಹಿರಿಯ ಒಕ್ಕಲು ಅಣ್ಣಯ್ಯಗೌಡರು ಅಸಹಾಯಕರಾಗಿ ಕುಳಿತಿದ್ದರು. ಅವರು ತಮ್ಮ ಮಗನ ಮದುವೆಗಾಗಿ ಚಂದಯ್ಯಗೌಡರ ಹತ್ತಿರ ಸಾಲ ಕೇಳಲು ಬಂದಿದ್ದರು. ಮತ್ತೊಂದೆಡೆ, ಕಳ್ಳು ಇಳಿಸುವ ಕಸುಬಿನ ತಿಮ್ಮ ತನ್ನ ನಾಯಿಯ ಜೊತೆ ಕುಳಿತಿದ್ದನು. ಇವರೆಲ್ಲರ ನಡುವೆ ತಮ್ಮ ಲೆಕ್ಕಪತ್ರಗಳಲ್ಲಿ ಮಗ್ನರಾಗಿದ್ದ ಚಂದ್ರಯ್ಯಗೌಡರು, ಕಿವಿಗೆ ಹತ್ತಿ ಇಟ್ಟುಕೊಂಡು ಅಧಿಕಾರದ ಗಂಭೀರತೆಯಲ್ಲಿ ಮಾತುಗೊಡುತ್ತಿದ್ದರು. ಅಣ್ಣಯ್ಯಗೌಡರು ತಮ್ಮ ಮಗ ಓಬಯ್ಯನ ಮದುವೆಗೆ ಹಣವಿಲ್ಲದೆ ಪರಿತಪಿಸುತ್ತಾ ಚಂದ್ರಯ್ಯ ಗೌಡರಲ್ಲಿ ಬೇಡಿಕೊಂಡರು. ಆದರೆ, ಚಂದ್ರಯ್ಯಗೌಡರು ಹಳೆಯ ಸಾಲದ ಲೆಕ್ಕ ಮುಂದಿಟ್ಟು, ಅದು ತೀರುವತನಕ ಹಣ ಕೊಡಲು ಸಾಧ್ಯವಿಲ್ಲವೆಂದು ನಿರ್ಧಾಕ್ಷಿಣ್ಯವಾಗಿ ಹೇಳಿ ಬಿಟ್ಟರು. ಜೋಯಿಸರು ಸಹ ಸಾಲದ ಬಗ್ಗೆ ತತ್ವ ಬೋಧನೆ ಮಾಡುತ್ತಾ ಗೌಡರನ್ನೇ ಬೆಂಬಲಿಸಿದರು. ಮನೆಯೊಳಗಿನ ಕಲಹ, ಮಕ್ಕಳ ಆಧುನಿಕ ವಿಚಾರಧಾರೆಯ ಬಗೆಗಿನ ಚಂದ್ರಯ್ಯಗೌಡರ ಅಸಮಾಧಾನ ಹಾಗೂ ಬಡ ಒಕ್ಕಲಿನ ದೈನ್ಯಸ್ಥಿತಿ - ಈ ಎಲ್ಲವೂ ಆ ಹೊತ್ತಿನ ದರ್ಬಾರಿನಲ್ಲಿ ಅನಾವರಣಗೊಂಡವು. ಕೊನೆಗೆ, ಅಣ್ಣಯ್ಯಗೌಡರು ಯಾವುದೇ ಸಹಾಯ ಸಿಗದೆ ಹತಾಶರಾಗಿ, ಕುಬ್ಜರಾಗಿ ಸುಡುವ ಬಿಸಿಲಿನಲ್ಲಿ ಬೆಂಡಾದ ಮನಸ್ಸಿನಿಂದ ಹೊರಟುಹೋದರು. ಅಂಗಳದ ಕಲ್ಲುದೇವರು ಹಾಗೂ ಚಂದ್ರಯ್ಯಗೌಡರ ಮನಸ್ಸು ಎರಡೂ ಆ ಬಡ ಒಕ್ಕಲಿಗ ಅಣ್ಣಯ್ಯಗೌಡರ ಕಣ್ಣೀರಿಗೆ ಕರಗದೆ ಮೌನವಾಗಿದ್ದವು.

10. ಬಿಂಕದ ಸಿಂಗಾರಿ

ಮುತ್ತಳ್ಳಿ ಶ್ಯಾಮಯ್ಯಗೌಡರು ಸ್ನಾನ ಮುಗಿಸಿ ಜಗಲಿಗೆ ಬಂದರು. ಆಗ ಸಮಯ ಹತ್ತೂವರೆ ದಾಟಿತ್ತು. ಅವರು ನಾಮದ ಪೆಟ್ಟಿಗೆಯನ್ನು ಮುಂದಿಟ್ಟುಕೊಂಡು ಪದ್ಮಾಸನ ಹಾಕಿ ಪೂಜೆಗಾಗಿ ಭಕ್ತಿಯಿಂದ ಕುಳಿತರು. ಅವರ ಮಗಳು ಸೀತೆ ಅಂಗಳದ ತುಳಸಿ ಪೀಠವನ್ನು ಕೆಂಪು ಬಿಳಿ ನಾಮಗಳಿಂದಲೂ ಹಾಗೂ ಬಗೆ ಬಗೆಯ ಬಣ್ಣದ ಪುಷ್ಪಗಳಿಂದಲೂ ಸುಂದರವಾಗಿ ಅಲಂಕರಿಸಿದ್ದಳು. ಮಗಳ ಈ ಕುಶಲತೆಯನ್ನು ಕಂಡು ಶ್ಯಾಮಯ್ಯಗೌಡರ ಹೃದಯದಲ್ಲಿ ದೇವರ ಭಕ್ತಿಗಿಂತಲೂ ಮಗಳ ಮೇಲಿನ ವಾತ್ಸಲ್ಯ ಉಕ್ಕಿ ಹರಿಯುತ್ತದೆ. ಗೌಡರ ಶರೀರ ಬೊಜ್ಜಿನಿಂದ ಕೂಡಿದ್ದರೂ ಅವರ ಮುಖದಲ್ಲಿ ಧಾರ್ಮಿಕ ಓಜಸ್ಸು ನಲಿದಾಡುತ್ತಿತ್ತು. ಅವರ ಅರ್ಧನಗ್ನ ವಿಗ್ರಹ ಗಂಭೀರರಿಗೆ ಗೌರವಭಾವವನ್ನಂಟು ಮಾಡುತ್ತಿದ್ದರೆ , ಲಘು ಪ್ರಕೃತಿಯವರಿಗೆ ವಿನೋದವನ್ನು ನೀಡುತ್ತಿದ್ದಿತು. ಶ್ಯಾಮಯ್ಯಗೌಡರು ಮೈಮೇಲೆ ಧರಿಸುತ್ತಿದ್ದ ನಾಮಗಳು ಅವರ ಶರೀರ ಸುಖಜೀವನಕ್ಕೆ ಸಾಕ್ಷಿಯಾಗಿದ್ದುದನ್ನು ಸಾರುತ್ತಿದ್ದವು. 

ಶ್ಯಾಮಯ್ಯಗೌಡರು ಬೆತ್ತದಿಂದ ಮಾಡಿದ ಹಳೆಯ ನಾಮದ ಪೆಟ್ಟಿಗೆಯನ್ನು ತೆರೆದರು. ಆ ಪೆಟ್ಟಿಗೆ ಆಧುನಿಕರಿಗೆ 'ಮತಭ್ರಾಂತಿಯ ಮದ್ದಿನ ಮನೆ'ಯಂತೆ ಕಾಣಿಸುತ್ತಿದ್ದರೆ, ಸಂಪ್ರದಾಯಸ್ಥರಿಗೆ 'ಶಾಂತಿಯ ಎಲೆಮನೆ'ಯಂತೆ ಕಾಣಿಸುತ್ತಿದ್ದಿತು. ನಾಮದ ಪೆಟ್ಟಿಗೆಯಲ್ಲಿ ಕೆಂಪು-ಬಿಳಿ ನಾಮದ ಕಡ್ಡಿಗಳು, ತುಳಸಿ ಮಾಲೆ, ಸಣ್ಣ ಕನ್ನಡಿ, ಹಳೆಯ ನಾಣ್ಯ ಹಾಗೂ ಕೆಲವು ಸಣ್ಣ ಹುಳುಗಳು ವಾಸವಾಗಿದ್ದವು. ಭಕ್ತಿಯಿಂದ ಮೈಮೇಲೆ ನಾಮಗಳನ್ನು ಧರಿಸಿ ಪೂಜೆಗೆ ಕುಳಿತರಾದರೂ, ಆ ಪೂಜೆಯ ನಡುವೆಯೂ ಶ್ಯಾಮಯ್ಯಗೌಡರು ಚಿನ್ನಯ್ಯನ ಬಗ್ಗೆ ವಿಚಾರಿಸುತ್ತಿದ್ದರು. ಪೂಜೆ ಮುಗಿಸಿದ ಗೌಡರು, ಮಗಳು ಸೀತೆ ತಂದ ಹಾಲನ್ನು ಸ್ವೀಕರಿಸಿದರು. ಆ ದಿನ ಸೀತೆಯ ಮುಖದಲ್ಲಿ ಒಂದು ವಿಶೇಷ ಕಳೆ ತುಂಬಿ ತುಳುಕುತ್ತಿದ್ದಿತ್ತು. ಇದಕ್ಕೆ ಪ್ರಬಲ ಕಾರಣವೆಂದರೆ ಹೂವಯ್ಯನ ಆಗಮನ! 

ಇತ್ತ ತನ್ನಣ್ಣ ಚಿನ್ನಯ್ಯ ಹೂವಯ್ಯ ಮತ್ತು ರಾಮಯ್ಯರನ್ನು ಬರಮಾಡಿಕೊಳ್ಳಲು ಅಥವಾ ಕರೆದುತರಲು ಹೋಗಿರುವುದು ಸೀತೆಗೆ ತಿಳಿದಿತ್ತು. ತಂದೆಯ ಪೂಜೆ ಮುಗಿದ ನಂತರ ತನ್ನ ಕೋಣೆಗೆ ಬಂದು ಅಲಂಕಾರ ಮಾಡಿಕೊಳ್ಳಲು ಆರಂಭಿಸಿದ ಸೀತೆಯ ಹೃದಯ ಹೂವಯ್ಯನ ಆಗಮನದ ಸಡಗಡದಿಂದ ನಲಿದಾಡುತ್ತಿತ್ತು. ಹೂವಯ್ಯ ಬರುತ್ತಾನೆಂಬ ಸಡಗರದಲ್ಲಿ ಅವಳು ಹಸಿ ಕೂದಲಿಗೆ ಎಣ್ಣೆ ಹಚ್ಚಿ, ಕನ್ನಡಿಯಲ್ಲಿ ತನ್ನ ಸೌಂದರ್ಯವನ್ನು ನೋಡಿ ನೋಡಿ, ಆ ಸೌಂದರ್ಯವನ್ನು ತಾನೇ ಮೆಚ್ಚಿಕೊಳ್ಳುತ್ತಾ ಸಂಭ್ರಮದಿಂದ ಸಮಯ ಕಳೆದಳು. ಈ ನಡುವೆ ಅವಳ ಪುಟ್ಟ ತಂಗಿ ಲಕ್ಷ್ಮಿ ಬಾಗಿಲು ಬಡಿದು ಗಲಾಟೆ ಮಾಡಿದಾಗ, ಸೀತಗೆ ತಂಗಿ ಲಕ್ಷ್ಮಿಯ ಮೇಲೆ ಇನ್ನಿಲ್ಲದ ಸಿಟ್ಟು ಆವರಿಸುತ್ತದೆ. ಆದರೆ, ಮೊದಲು ಸಿಟ್ಟುಗೊಂಡರೂ ನಂತರ ಹೂವಯ್ಯ ಬಾವ ಬರುವ ಸಂಭ್ರಮದ ಸಂಗತಿಯನ್ನು ಅವಳಿಗೆ ತಿಳಿಸಿ ಅವಳನ್ನು ಸಮಾಧಾನಪಡಿಸಿದಳು ಸೀತೆ.

ಸೀತೆಯೇನೋ ಎಚ್ಚರಿಕೆಯಿಂದ ಕುಂಕುಮ ಇಟ್ಟುಕೊಂಡು ಒಡವೆಗಳನ್ನು ಧರಿಸುತ್ತಿದ್ದಳು. ಆದರೆ, ಲಕ್ಷ್ಮಿಯ ಚೇಷ್ಟೆಯಿಂದ ಎಣ್ಣೆಯ ಕುಡಿಕೆ ಉರುಳಿ ಚಾಪೆಯೆಲ್ಲ ಎಣ್ಣೆಮಯವಾಗುತ್ತದೆ. ಗಾಬರಿಗೊಂಡ ಸೀತೆ ಅದನ್ನು ಸರಿಪಡಿಸಲು ಹರಸಾಹಸ ಪಡಬೇಕಾಯಿತು. ಈ ಸಣ್ಣ ಪುಟ್ಟ ಅಡೆತಡೆಗಳ ನಡುವೆಯೂ ಅವಳ ಕಣ್ಣು ಮಾತ್ರ ಕಿಟಕಿಯತ್ತಲೇ, ಅಂದರೆ ಹೂವಯ್ಯ ಬರುವ ದಾರಿಯತ್ತಲೇ ಇದ್ದವು. ಅಷ್ಟರಲ್ಲಿ ಗಾಡಿಯ ಸದ್ದು ಕೇಳಿಸುತ್ತಿದ್ದಂತೆಯೇ, ಕಮಾನು ಗಾಡಿ ಬರುತ್ತಿರುವುದನ್ನು ಕಂಡು ಸೀತೆಯ ಉತ್ಕಂಠತೆ ಹೆಚ್ಚಾಗುತ್ತದೆ. 

ಗಾಡಿಯೇನೋ ಅಂಗಳಕ್ಕೆ ಬಂದು ನಿಲ್ಲುತ್ತದೆ. ಆದರೆ, ಅಲ್ಲಿನ ದೃಶ್ಯ ಸೀತೆಗೆ ಆಶ್ಚರ್ಯವನ್ನು ಮಾಡುತ್ತದೆ. ಗಾಡಿಯಿಂದ ಇಳಿದವರೆಲ್ಲರ ಮುಖದಲ್ಲಿ ಕಳವಳ ತುಂಬಿದ್ದಿತು. ಹೂವಯ್ಯ ಚಿನ್ನಯ್ಯನ ಆಸರೆ ಪಡೆದು ಮೆಲ್ಲನೆ ಕೆಳಗಿಳಿಯುವುದನ್ನು ಕಂಡು ಸೀತೆ ಗಾಬರಿಯಾದಳು. ಗಾಡಿ ಉರುಳಿ ಬಿದ್ದ ವಿಷಯ ಎಲ್ಲರಿಗೂ ಮನವರಿಕೆಯಾಗುತ್ತದೆ. ಆದರೆ, ಗಾಡಿ ಉರುಳಿ ಪೆಟ್ಟಾಗಿದ್ದರೂ, ಹೂವಯ್ಯ ಮಾತ್ರ ನಗುಮುಖದಿಂದಲೇ ತನಗೆ ಟ್ರಂಕು ತಗುಲಿ ಸಣ್ಣ ಪೆಟ್ಟಾಯಿತೆಂದು ಹೇಳಿ ಹಿರಿಯರನ್ನು ಸಮಾಧಾನಪಡಿಸಿದನು, ಅದರಲ್ಲೂ ವಿಶೇಷವಾಗಿ ಸೀತೆಯನ್ನು. 

ಹೂವಯ್ಯನಿಗೆ ವಿಶ್ರಾಂತಿ ಪಡೆಯಲು ಹಾಸಿಗೆ ಸಿದ್ಧವಾಗುತ್ತದೆ. ಸಿಂಗಪ್ಪಗೌಡರು ನಡೆದ ಅಪಘಾತದ ವಿಷಯವನ್ನು ಶ್ಯಾಮಯ್ಯಗೌಡರಿಗೆ ವಿವರಿಸಿದರು. ರಾಮಯ್ಯ ಮತ್ತು ಚಿನ್ನಯ್ಯ ಹೂವಯ್ಯನ ಉಪಚಾರದಲ್ಲಿ ತೊಡಗಿದರು.ಸೀತೆ ಮೌನವಾಗಿಯೇ ಅವರಿಗೆ ಬೇಕಾದ ವಸ್ತುಗಳನ್ನು ಒದಗಿಸುತ್ತಾ ಶುಶ್ರೂಷೆ ಮಾಡಿದಳು. ಅನಿರೀಕ್ಷಿತ ಘಟನೆಗಳಿಂದಾಗಿ ಅಂದು ನೆಮ್ಮದಿಯಿಂದ ಹಬ್ಬದೂಟ ಉಂಡವರು ಶ್ಯಾಮಯ್ಯಗೌಡರು ಮತ್ತು ಪುಟ್ಟ ಲಕ್ಷ್ಮಿ ಮಾತ್ರ.

11. ಅಣ್ಣಯ್ಯಗೌಡರ ಸಂಸಾರ ಶೂಲ

ಅಣ್ಣಯ್ಯಗೌಡರು ಕಾನೂರಿನ ಚಂದ್ರಯ್ಯಗೌಡರ ಬಳಿ ಸಾಲ ಕೇಳಲು ಹೋಗಿದ್ದರಷ್ಟೇ. ಆದರೆ ಚಂದ್ರಯ್ಯಗೌಡರು ಸಾಲವನ್ನು ಕೊಡಲು ನಿರಾಕರಿಸಿದ್ದರಿಂದ ಅಣ್ಣಯ್ಯಗೌಡರು ವಿಫಲರಾಗಿ ತಮ್ಮ ಮನೆಯತ್ತ ಹಿಂತಿರುಗುತ್ತಿದ್ದರು. ಸುಡುವ ಬಿಸಿಲಿನಲ್ಲಿ ನಡೆಯಲಾಗದೆ ಸಂಪೂರ್ಣ ದಣಿದು ಹೋಗಿದ್ದ ಅವರು ಅಷ್ಟೇ ಅಸಹಾಯಕ ಸ್ಥಿತಿಯಿಂದಲೂ ಸೋತು ಹೋಗಿದ್ದರು. ದಾರಿಯುದ್ದಕ್ಕೂ ಅವರಿಗೆ ಸಂಸಾರದ ಚಿಂತೆಗಳು ದುಸ್ವಪ್ನಗಳಂತೆ ಕಾಡುತ್ತಿದ್ದವು. ರೋಗಗ್ರಸ್ತ ಹೆಂಡತಿ, ದರ್ಪದ ಮಗ ಓಬಯ್ಯ ಮತ್ತು ಅನಾಥ ಪ್ರಜ್ಞೆಯಲ್ಲಿ ಬೆಳೆಯುತ್ತಿರುವ ಪುಟ್ಟ ಮಗಳು—ಇವರ ಮಧ್ಯೆ ತಮ್ಮ ಬದುಕು ಕೊನೆಯ ಹಂತಕ್ಕೆ ಬಂದಿತಲ್ಲ. ಈ ಮುದಿತನದಲ್ಲಿ ಇಂತಹ ಪರಿಸ್ಥಿತಿ ಬಂದೊದಗಿತ್ತಲ್ಲ ಎಂದು ಅವರು ಮಮ್ಮಲ ಮರುಗಿದರು. ಅನಾರೋಗ್ಯದಿಂದ ಬಳಲುತ್ತಿರುವ ಹೆಂಡತಿಯನ್ನು ಸರ್ಕಾರಿ ವೈದ್ಯರ ಬಳಿ ತೋರಿಸುವಂತೆ ಕೆಲವರು ಅಣ್ಣಯ್ಯಗೌಡರಿಗೆ ಹೇಳಿದರು. ಆದರೆ ದೇವರ ಆಸರೆಯನ್ನು ನೆಮ್ಮಿದ ಅವರು ಸರಕಾರಿ ಆಸ್ಪತ್ರೆಗೆ ಹೋಗುವುದನ್ನು ವಿರೋಧಿಸಿ ದೇವರನ್ನೇ ಬಲವಾಗಿ ನೆಮ್ಮಿ ಪ್ರಾರ್ಥಿಸಿಕೊಂಡರು.ದೇವರಿಗೆ ಹರಕೆ ಹೊರುವಲ್ಲಿ ಮತ್ತು ಮಂತ್ರ-ತಂತ್ರಗಳಲ್ಲಿ ಬಲವಾದ ನಂಬಿಕೆ ಇಟ್ಟರು.

ಅಣ್ಣಯ್ಯಗೌಡರು ಮನೆ ತಲುಪುವಷ್ಟರಲ್ಲಿ ಅಲ್ಲಿ ನೀರವ ಮೌನ ಮನೆ ಮಾಡಿಕೊಂಡಿತ್ತು. ಮಗಳು ಅಳುವ ಧ್ವನಿಯನ್ನು ಕೇಳಿದ ಮೇಲಂತೂ ಅವರ ಜಾಂಘಾಬಲವೇ ಉಡುಹೋಗಿತ್ತು. ಅವರ ಮಗಳು ತಾಯಿಯ ಸ್ಥಿತಿಯನ್ನು ಕಂಡು ಬೆಚ್ಚಿಬಿದ್ದಿದ್ದಳು. 

ಇತ್ತ ಓಬಯ್ಯ ತಂಗಿಯೊಂದಿಗೆ ಕರುಣೆಯಿಲ್ಲದವನಾಗಿ ನಡೆದುಕೊಳ್ಳುತ್ತಿದ್ದನು. ತಂಗಿಗೆ ಅಣ್ಣನೆಂದರೆ ಹುಲಿಯನ್ನು ಕಂಡಷ್ಟು ಭಯ. ಓಬಯ್ಯ ತಂದೆ ಮಲತಾಯಿಯರನ್ನು ನಿರ್ಧಾಕ್ಷಿಣ್ಯವಾಗಿ ಕಂಡಂತೆಯೇ, ಮಲತಂಗಿಯನ್ನೂ ಕಾಣುತ್ತಿದ್ದನು. ರೋಗಿತಾಯಿಯನ್ನು ನೋಡುವ ಬದಲು, ತಂಗಿಯನ್ನು ಗದರಿಸಿ, ಚಂದ್ರಮೌಳೇಶ್ವರನಿಗೆ ಮುಡಿಪು ಕಟ್ಟಲೆಂದು ಆಕೆಯ ಕೈಯಲ್ಲಿದ್ದ ಬೆಳ್ಳಿಯ ಕಡಗವನ್ನು ತೆಗೆದುಕೊಂಡು, ಅಗ್ರಹಾರಕ್ಕೆ ಹೋಗಿ ವೆಂಕಟಪ್ಪಯ್ಯನವರಿಂದ ಪೂಜೆ ಮಾಡಿಸುವುದಾಗಿ ಹೇಳಿ, ಜೇಬಿಗೆ ಹಾಕಿಕೊಂಡನು. ಮನೆಗೆ ಬಂದ ಮೇಲೆ ಇದನ್ನು ಮಗಳಿಂದ ಕೇಳಿ ತಿಳಿದುಕೊಂಡ ಅಣ್ಣಯ್ಯಗೌಡರು ವಿಹ್ವಲರಾಗಿ ತಲೆಗೆ ಕೈಹೊತ್ತು ಕೂತರು. ಆ ಮನೆಯಲ್ಲಿ ಓಬಯ್ಯನಿಗಿಂತ ‘ಕರಿಯ’ ಎಂಬ ನಾಯಿಯೇ ಅಣ್ಣಯ್ಯಗೌಡರ ಮಗಳಿಗೆ ಒಂದು ಬಹುದೊಡ್ಡ ಆಸರೆಯಾಗಿತ್ತು. 

ದಾರಿಯಲ್ಲಿ ಮತ್ತು ಮನೆಯ ಬಳಿ ಕಾಗೆ ‘ಕಾ ಕಾ’ ಎಂದು ಕೂಗುವುದು ಅಣ್ಣಯ್ಯಗೌಡರಿಗೆ ಅತೀವ ಭೀತಿಯಾಗುತ್ತದೆ. ಕಾಗೆ ಸುಡುಗಾಡಿನ ಕಡೆ ಮುಖ ಮಾಡಿ ಕೂಗುತ್ತಿರುವುದು ತಮ್ಮ ಹೆಂಡತಿಯ ಸಾವಿನ ಮುನ್ಸೂಚನೆ ಎಂದು ಭಾವಿಸಿದ ಅವರು ಸಂಪೂರ್ಣ ಇಳಿದು ಹೋದರು. ಮನೆಗೆ ಬಂದು ಮಗಳ ರೋದನ ಕೇಳಿದ ಮೇಲಂತೂ ಅವರ ಜಂಘಾಬಲ ಉಡುಗಿದಂತಾಗುತ್ತದೆ. ಆದರೆ ಹೆಂಡತಿಗೆ ಇನ್ನೂ ಜೀವ ಇರುವುದನ್ನು ಕಂಡು ಅವಳಿಗೆ ಉಪಚರಿಸಲು ಮುಂದಾದರು ಅಣ್ಣಯ್ಯಗೌಡರು. 

ಇತ್ತ ಕಾನೂರಿನ ಚಂದ್ರಯ್ಯಗೌಡರ ಮನೆಯಲ್ಲಿ ಶ್ರೀಮಂತಿಕೆಯಿದ್ದರೂ ಸುಖವಿರಲಿಲ್ಲ. ಸುಬ್ಬಮ್ಮನ ದಿಸೆಯಿಂದಾಗಿ ಮನೆ ಅಶಾಂತಿಯ ಅಗ್ನಿಕುಂಡವಾಗಿ ಹೋಗಿತ್ತು. ಶ್ರೀಮಂತ ಮನೆತನದಿಂದ ಇಬ್ಬರು ಹೆಂಡಂದಿರನ್ನು ತಂದ ನೆಮ್ಮದಿ ಅನುಭವವಿದ್ದ ಚಂದ್ರಯ್ಯಗೌಡರಿಗೆ ಈಗ ಸುಬ್ಬಮ್ಮನ ಸಣ್ಣತನದಿಂದಾಗಿ ನಲುಗಿ ಹೋಗಿದ್ದರು. ಇದರ ಜೊತೆಯಲ್ಲಿ ಅಣ್ಣಯ್ಯಗೌಡರಿಗೆ ಸಾಲ ಕೊಡದಿದ್ದಕ್ಕೆ ಅವರ ಒಳಮನಸ್ಸು ಬೇರೆ ಕೊರೆಯುತ್ತಿದ್ದಿತು. ಮನೆಯ ಕಲಹಗಳಿಂದ ಸ್ಫೋಟಿಸುವ ಕೋಪದ ಅಗ್ನಿಕುಂಡವಾಗಿ ಹೋಗಿದ್ದ ಚಂದ್ರಯಗೌಡರು. ಮೇಲೋಗರ ಸೀದುಹೋಗಿದ್ದ ಸಣ್ಣದೊಂದು ಕಾರಣವನ್ನೇ ನೆಪವಾಗಿಟ್ಟುಕೊಂಡು, ಸುಬ್ಬಮ್ಮನನ್ನು ಅಮಾನುಷವಾಗಿ ಹೊಡೆಯತೊಡಗಿದರು. ಕೈಯಲ್ಲಿದ್ದ ನೆಕ್ಕಿಯ ಕೋಳಿನಿಂದ ಚೆನ್ನಾಗಿ ಥಳಿಸಿದರು. ಅವರ ಕ್ರೌರ್ಯ ಎಷ್ಟಿತ್ತೆಂದರೆ, ಕೈಯಲ್ಲಿದ್ದ ನೆಕ್ಕಿಯ ಕೋಲು ಕೂಡ ಮುರಿದು ಹೋಗುತ್ತದೆ. ಸುಬ್ಬಮ್ಮನ ಕೈ ಬಳೆ ಹೊಡೆದು ಹೋಗುತ್ತವೆ. ಸುಬ್ಬಮ್ಮನ ಈ ಸ್ಥಿತಿಯನ್ನು ಕಂಡು ಪುಟ್ಟಮ್ಮ ನಾಗಮ್ಮರಿಗೆ ಬಿಡಿಸಿಕೊಳ್ಳಬೇಕೆಂಬ ಮನಸ್ಸಾದರೂ ಚಂದ್ರಯ್ಯಗೌಡರ ಕೋಪವನ್ನು ಕಂಡು ದಿಗಿಲುಗೊಂಡು ನಿಂತು ಬಿಟ್ಟರು. ಆದರೆ ವಾಸು ಚಂದ್ರಯ್ಯ ಗೌಡರ ಬಳಿ ಬಂದು ಬೇಡ ಅಪ್ಪಯ್ಯ ಎಂದು ಗೊಗರೆದು ಕೇಳಿಕೊಂಡ. ಅದೇ ಸಮಯಕ್ಕೆ ಮನೆಗೆ ಬಂದ ಸೇರೆಗಾರ ರಂಗಪ್ಪಸೆಟ್ಟರು ಒಳ ನುಗ್ಗಿ ಬಂದು ಸುಬ್ಬಮ್ಮನನ್ನು ಹೊಡೆಯದಂತೆ ಬೇಡಿಕೊಂಡರು. ಪರಕೀಯರಾದ ರಂಗಪ್ಪಸೆಟ್ಟರು ಬಂದುದರಿಂದಲೂ, ಪ್ರೀತಿಯ ಮಗ ವಾಸುವಿನ ಆರ್ತನಾದದಿಂದಲೂ ಚಂದ್ರಯ್ಯಗೌಡರು ಹೊಡೆಯುವುದನ್ನು ನಿಲ್ಲಿಸಿದರು. 

12. ಕಳ್ಳಂಗಡಿ 

ಓಬಯ್ಯ ಅಣ್ಣಯ್ಯಗೌಡರ ಸುಖೀ ಸಂಸಾರದಲ್ಲಿ ಜನಿಸಿದ ಅವರ ತರುಣ ಮಗ. ಪ್ರಾರಂಭದಲ್ಲಿ ಶ್ರಮಜೀವಿ ಮತ್ತು ತಂದೆಗೆ ಅಚ್ಚುಮೆಚ್ಚಿನ ಮಗನಾಗಿದ್ದ ಓಬಯ್ಯ, ಮನೆಯ ಆಸ್ತಿಪಾಸ್ತಿ ಮತ್ತು ಕೃಷಿಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದನು. ಆದರೆ,  ಅವನ ಜೀವನದಲ್ಲಿ ಬದಲಾವಣೆಗೆ ಕಾರಣವಾದವು ಅವನ ತಂದೆ ಅಣ್ಣಯ್ಯಗೌಡರ ಹಠಾತ್ ಮದುವೆಗಳು.  ಅಣ್ಣಯ್ಯಗೌಡರು ಓಬಯ್ಯಗಿಂತಲೂ ಹೆಚ್ಚು ವಯಸ್ಸಾದವರಾಗಿದ್ದರೂ, ಅಪಾರ ಹಣವನ್ನು 'ತೆರ'ವಾಗಿ ಕೊಟ್ಟು (ವಧುದಕ್ಷಿಣೆ ನೀಡಿ) ಮೂರನೆಯ ಮತ್ತು ನಾಲ್ಕನೆಯ ಮದುವೆಯಾದುದು ಓಬಯ್ಯನ ಮನಸ್ಸನ್ನು ತೀವ್ರವಾಗಿ ಕಲಕಿ ಒಡೆದು ಹಾಕುತ್ತದೆ. ತನ್ನ ಕಷ್ಟದ ದುಡಿಮೆ ಹೀಗೆ ದುಂದುವೆಚ್ಚವಾಗುತ್ತಿರುವುದನ್ನು ಕಂಡು  ಹತಾಶನಾದ  ಓಬಯ್ಯ ಸಂಸಾರದ ಬಗ್ಗೆ ಉದಾಸೀನಭಾವ ತಳೆದು ದುಶ್ಚಟಗಳ ದಾಸನಾದನು. ಮನೆಯಿಂದ ಪದಾರ್ಥಗಳನ್ನು ಕದ್ದು ಮಾರಾಟ ಮಾಡಿ ಕಳ್ಳು-ಸಾರಾಯಿ ಕುಡಿಯಲು ಆರಂಭಿಸಿದನು.

 ಇಂತಹ ಸಂದರ್ಭದಲ್ಲೇ ಓಬಯ್ಯನಿಗೆ ಗಂಗೆಯ ಭೇಟಿಯಾದದ್ದು ಒಂದು ವಿಶೇಷ. ಓಬಯ್ಯನ ಜೀವನದಲ್ಲಿ ಗಂಗೆಯ  ಈ ಭೇಟಿ ಒಂದು ಪ್ರಮುಖ ತಿರುವಾಗಿ ಪರಿಣಮಿಸುತ್ತದೆ. ಒಂದು ದಿನ ಮಳೆಯಲ್ಲಿ ಸಿಕ್ಕಿಬಿದ್ದ ಓಬಯ್ಯ ಆಶ್ರಯಕ್ಕಾಗಿ ರಂಗಪ್ಪಸೆಟ್ಟರ ಪ್ರೇಯಸಿ ಗಂಗೆಯ ಬಿಡಾರಕ್ಕೆ ಹೋದವನು, ಅಲ್ಲಿ ಅವಳ ಮಾಯೆಯ ಬಲೆಗೆ ಬಿದ್ದು  ಕಳ್ಳು-ಸಾರಾಯಿಯ ದಾಸನಾದಂತೆಯೇ, ಗಂಗೆಯ ದಾಸನೂ ಆಗಿ ಬಿಟ್ಟನು. .ಗಂಗೆಯ ಚತುರ ಮಾತುಗಳು ಮತ್ತು ಅವಳು ನೀಡಿದ 'ನೊರೆಗಳ್ಳು' ಅವನನ್ನು ಸಂಪೂರ್ಣವಾಗಿ ಮರುಳು ಮಾಡಿ ಗಂಗೆಯ ವಶವಾಗಿಸಿ ಬಿಡುತ್ತವೆ. ಮರುದಿನ ಬೆಳಿಗ್ಗೆ ಆ ಬಿಡಾರದಿಂದ ಹೊರಬಂದ ಓಬಯ್ಯ ಹಳೆಯ ಮುಗ್ಧ ಹುಡುಗನಾಗಿ ಉಳಿಯುವುದಿಲ್ಲ; ಲೌಕಿಕ ಸುಖದ ಹೊಸ ಅನುಭವ ಅವನನ್ನು ಮತ್ತಷ್ಟು ವಿಲಾಸಿಯನ್ನಾಗಿ ಮಾಡಿ ಬಿಡುತ್ತದೆ. ಇದರಿಂದಾಗಿ ತಂದೆಯ ಮದುವೆಗಳ ಹಿಂದಿನ ಕಾರಣ ಅವನಿಗೆ ಬಹುಸ್ಪಷ್ಟವಾಗಿ ಅರ್ಥವಾಗುತ್ತದೆಯಾದರೂ, ಅವನ ಆರ್ಥಿಕ ಮತ್ತು ನೈತಿಕ ಅಧೋಗತಿ ಮಾತ್ರ ವೇಗವಾಗಿ ಸಾಗುತ್ತದೆ. 

ಒಮ್ಮೆ ಓಬಯ್ಯ ಹಸಿವಿನಿಂದ ಮತ್ತು ಕುಡಿತದ ಹಂಬಲದಿಂದ ದೇವಸ್ಥಾನದ 'ದೇವರ ಮೀನನ್ನು' ಹೊಗೆಸೊಪ್ಪಿನ ಗುಳಿಗೆ ಹಾಕಿ ಕದ್ದು ತಂದನು. ಇದು ಅವನ ನೈತಿಕ ಪತನದ ತುತ್ತತುದಿ. ಅಲ್ಲಿಂದ ಸೀದಾ ಕಳ್ಳಂಗಡಿಗೆ ಹೋದ ಅವನಿಗೆ ಅಲ್ಲಿನ ಅಸಹ್ಯಕರ ವಾತಾವರಣ, ಸಾಲದ ತೊಂದರೆ ಮತ್ತು ಜನರ ಮೃಗೀಯ ವರ್ತನೆ ಎದುರಾಗುತ್ತವೆ.  ಕುಡಿತದ ಅಮಲಿನಲ್ಲಿ ಓಬಯ್ಯ ದೇವರ ಕಾಣಿಕೆಯಾಗಿದ್ದ ಬೆಳ್ಳಿಯ ಕಡಗವನ್ನೂ ಅಡವಿಟ್ಟು,  ತನ್ನ ಮಲತಾಯಿಯ ಮರಣದ ವಾರ್ತೆ ಕೇಳಿದರೂ ಅದನ್ನು ಸರಿಯಾಗಿ ಗ್ರಹಿಸಲಾರದಷ್ಟು ಪ್ರಜ್ಞೆ ಕಳೆದುಕೊಂಡನು. ಕೊನೆಗೆ ಕತ್ತಲಲ್ಲಿ ತೂರಾಡುತ್ತಾ, ಸಾಗಿದ ಓಬಯ್ಯ ಹಂತ ಹಂತವಾಗಿ  ಪತನದ ಹಾದಿ ಹಿಡಿದನು. 

13. ಕಾನುಬೈಲಿನ ಕಳ್ಳುಗೊತ್ತು

 ಜಗತ್ತು ರಾತ್ರಿಯ ನೀರವ ನಿದ್ದೆಗೆ ಜಾರುತ್ತಿತ್ತು. ಸೂರ್ಯ ಆಗಲೇ ಮುಳುಗಿ, ಪಶ್ಚಿಮ ದಿಕ್ಕಿನಲ್ಲಿ ಆಕಾಶವು ಕೆನ್ನೀಲಿ ಬಣ್ಣದಿಂದ ಕೂಡಿದ್ದಿತು. ಸಹ್ಯಾದ್ರಿ ಪರ್ವತ ಶ್ರೇಣಿಗಳ ಮೇಲೆ ಕತ್ತಲೆ ಆವರಿಸುತ್ತದ್ದಂತೆಯೇ, ಹಕ್ಕಿಗಳ ಹಾಡು ಮತ್ತು ದನಗಳ ಕೂಗು ನಿಂತು, ಕಾಡಿನ ತುಂಬೆಲ್ಲಾ ದುಂಬಿಗಳ ಝೇಂಕಾರ ತುಂಬಿಕೊಂಡಿತು.

ಕಾನುಬೈಲು ಹೂವಯ್ಯ ಮತ್ತು ರಾಮಯ್ಯರಿಗೆ ಪ್ರಿಯವಾದ ಸೌಂದರ್ಯ ತಾಣ. ಇಲ್ಲಿ ನಿಂತರೆ ಆಗುಂಬೆ ಘಾಟಿ, ಕುಂದದ ಗುಡ್ಡ, ಕುದುರೆಮುಖ ಮುಂತಾದ ಶಿಖರಗಳು ಗೋಚರಿಸುತ್ತವೆ.

ಇತ್ತ, ಕಾನುಬೈಲಿನ ಬಂಡೆಯ ಮೇಲೆ ಉರಿಯುತ್ತಿದ್ದ ಬೆಂಕಿಯೊಂದರಲ್ಲಿ ಹಳೆಯಪೈಕದ ತಿಮ್ಮನು ಚಂದ್ರಯ್ಯಗೌಡರಿಗಾಗಿ 'ಬಗನಿ' ಮರದ ಕಳ್ಳನ್ನು ಕಾಯಿಸುತ್ತಿದ್ದನು. ಬಗನಿ ಮರದಿಂದ ಕಳ್ಳು ಇಳಿಸುವಲ್ಲಿ ತಿಮ್ಮನ ಕೌಶಲ್ಯ ಮೆಚ್ಚುವಂತಹದ್ದು. ತಿಮ್ಮನ ಜಾತಿಗೆ ಸೀಮಿತವಾದ ಮತ್ತು ಅವರಿಗೆ ಮಾತ್ರ ತಿಳಿದಿರುವ ಕಲೆಯದು. ಇತರ ಜಾತಿಯವರು ಇದನ್ನು ಮಾಡಿದರೆ ಜಾತಿಭ್ರಷ್ಟರಾಗುವ ಭಯವಿತ್ತು.
ಚಂದ್ರಯ್ಯಗೌಡರೊಂದಿಗೆ ತಿಮ್ಮನ ಸಂಬಂಧ ತುಂಬಾ ವಿಶೇಷವಾದುದು. ತಿಮ್ಮನು ಚಂದ್ರಯ್ಯಗೌಡರ ನಂಬಿಕಸ್ತ ಆಳು. ಆತನ ಈ ವಿಶೇಷ ಕೌಶಲ್ಯದಿಂದಾಗಿಯೇ ಚಂದ್ರಯ್ಯಗೌಡರು ಅವನಿಗೆ ಸಾಲ, ಎತ್ತು, ಗದ್ದೆ ನೀಡುವಲ್ಲಿ ವಿಶೇಷ ರಿಯಾಯಿತಿ ತೋರಿಸುತ್ತಿದ್ದರು.

ಕಳೆದ ಕೆಲವು ದಿನಗಳಿಂದ ಯಾರೋ ತಿಮ್ಮನಿಗೆ ತಿಳಿಯದಂತೆ ಕಾಡಿನಲ್ಲಿ ಬಗನಿ ಮರಕ್ಕೆ ಮಡಕೆ ಕಟ್ಟಿ ಕಳ್ಳು ಕದಿಯುತ್ತಿದ್ದರು. ಇದು ಒಂದು ಸಲ ತಿಮ್ಮನ ಗಮನಕ್ಕೆ ಬರುತ್ತದೆ. ಆದರೆ ತಿಮ್ಮ ಮಾತ್ರ ಇದರ ಜಾಡು ಬಲ್ಲ. ತನ್ನ ಜಾತಿಯವರನ್ನು ಬಿಟ್ಟು ಮತ್ಯಾರಿಗೂ ಈ ವಿದ್ಯೆ ತಿಳಿಯಲು ಸಾಧ್ಯವಿಲ್ಲ ಎಂಬುದು ಅವನ ಅಚಲ ನಂಬಿಕೆ. ಇದು ಬೇಲರ ಬೈರನದೇ ಸಾಹಸ ಎಂಬುದು ಅವನ ಮನವರಿಕೆ. 

ವಾಸ್ತವವಾಗಿ ಬೇಲರ ಬೈರನು ಲೈಸನ್ಸ್ ಇಲ್ಲದೆ ಕಳ್ಳಬಗನಿ ಕಟ್ಟುತ್ತಿದ್ದನು. ಈ ಮೊದಲು ಭೈರನ ಕಳ್ಳಿನ ಕಳ್ಳತನವನ್ನು ತಿಳಿಯದ ತಿಮ್ಮನು ಕಳ್ಳನನ್ನು ಹಿಡಿಯಲು ಅದೇ ಬೈರನ ಸಹಾಯವನ್ನೇ ಪಡೆದುಕೊಂಡಿದ್ದನು!

ಸೇರೆಗಾರ ರಂಗಪ್ಪಸೆಟ್ಟರಿಗೆ ಮಾತ್ರ ಬೈರನೇ ಕಳ್ಳನೆಂದು ತಿಳಿದಿತ್ತು. ಒಮ್ಮೆ ಕಳ್ಳು.ಕದಿಯುವಾಗ ರಂಗಪ್ಪಸೆಟ್ಟರ ಕೈಗೆ ಸಿಕ್ಕಿಬಿದ್ದಿದ್ದ ಬೈರನು ಅವರಿಗೆ ಕಳ್ಳು ಕೊಟ್ಟು ಕಾಲಿಗೆ ಬಿದ್ದು ಉಪಚರಿಸಿದ್ದನು. ಹೀಗಾಗಿ ರಂಗಪ್ಪಸೆಟ್ಟರು ಈ ವಿಷಯವಾಗಿ ಮೌನವನ್ನೇ ಧರಿಸಿದ್ದರು. ಅವರು ಆ ರಹಸ್ಯವನ್ನು ಯಾರಿಗೂ ಬಿಟ್ಟು ಕೊಟ್ಟಿರಲಿಲ್ಲ. 

 ಹೀಗಿರುವಲ್ಲಿ ಒಂದು ಸಲ, ಕತ್ತಲೆ ಆವರಿಸಿದಾಗ ದೂರದ ಸ್ಮಶಾನದಲ್ಲಿ ಉರಿಯುತ್ತಿದ್ದ ಹೆಣದ ಬೆಂಕಿಯನ್ನು ಕಂಡು ತಿಮ್ಮನು ಹೆದರಿ ಬಿಟ್ಟನು.ಮಲೆನಾಡಿನ ಜನರಲ್ಲಿರುವ ದೆವ್ವಗಳ ಕಲ್ಪನೆ ತಿಮ್ಮನನ್ನೂ ಕಾಡುತ್ತದೆ. ಬೆಂಕಿಯ ಜ್ವಾಲೆಯಲ್ಲಿ ದೆವ್ವಗಳು ಹೆಣವನ್ನು ಹಂಚಿ ತಿನ್ನುತ್ತಿವೆ ಎಂದು ಅವನು ಭ್ರಮಿಸುತ್ತಾನೆ. ಹತ್ತಿರಕ್ಕೆ ಹೋಗಿ ನೋಡಿದ್ದರೆ ಅದು ಕಾಡು ಹಕ್ಕಿಯ ಕೂಗು ಎಂಬ ಸತ್ಯ ತಿಮ್ಮನ ಅನುಭವಕ್ಕೆ ಬರುತ್ತಿತ್ತು. ಆದರೆ, ಭಯಗೊಂಡ ಮನಸ್ಸಿಗೆ ಕಾಡಿನ ಹಕ್ಕಿಯ ಕೂಗು ಕೂಡ ತಿಮ್ಮನಿಗೆ ದೆವ್ವದ ಅರಚಾಟದಂತೆ ಕೇಳಿಸುತ್ತದೆ. ಭಯದಿಂದ ಓಡಲಾರಂಭಿಸಿದ ಅವನಿಗೆ ಕಾನುಬೈಲಿನಲ್ಲಿ ಚಂದ್ರಯ್ಯಗೌಡರು ಸಿಕ್ಕ ಮೇಲೆ ಧೈರ್ಯ ಬರುತ್ತದೆ.

ಚಂದ್ರಯ್ಯಗೌಡರ ಮನೆಯಲ್ಲಿ ಅಶಾಂತಿ ಎನ್ನುವುದು ತುಂಬಿ ಹೋಗಿತ್ತು.ಚಂದ್ರಯ್ಯಗೌಡರು ಕಾನುಬೈಲಿನಿಂದ ಮನೆಗೆ ಬಂದಾಗ ಅಲ್ಲಿನ ವಾತಾವರಣ ತುಂಬ ಗಂಭೀರವಾಗಿದ್ದಿತು. ನಾಗಮ್ಮನವರು ಅಳುತ್ತಾ, ತುಳಸಿ ಕಟ್ಟೆಗೆ ತಲೆ ಚಚ್ಚಿಕೊಳ್ಳುತ್ತಾ ಶಪಿಸುತ್ತಿದ್ದರು. ಅದನ್ನು ಗಮನಿಸಿದ ಚಂದ್ರಯ್ಯಗೌಡರಿಗೆ ಮನೆಯಲ್ಲಿ ಅದೇನೋ ಅಹಿತಕರ ಘಟನೆಗಳು ನಡೆದಿವೆ ಎಂಬ ಸುಳಿವು ಸಿಕ್ಕುತ್ತದೆ. 

14. ಹಳತು ಹೊಸತು ಸೇರಿದರೆ

ಮುತ್ತಳ್ಳಿಯಿಂದ ಮಧ್ಯಾಹ್ನ ಕಾನೂರಿಗೆ ಹೊರಡಬೇಕಿದ್ದ ಗಾಡಿಯ ಪ್ರಯಾಣ ಹೂವಯ್ಯನ ಬೆನ್ನುನೋವಿನ ಕಾರಣದಿಂದ ತಡವಾಗುತ್ತದೆ. ಅಂದು ಹೂವಯ್ಯ ಮತ್ತು ರಾಮಯ್ಯರು ತಮ್ಮ ಆಪ್ತಸ್ನೇಹಿತ ಮುತ್ತಳ್ಳಿಯ ಚಿನ್ನಯ್ಯನ ಮನೆಯಲ್ಲೇ ಉಳಿದರು. ಇದೇ ಸಮಯಕ್ಕೆ ಸರಿಯಾಗಿ ಶಾಮಯ್ಯಗೌಡರಿಂದ ಸ್ವಲ್ಪ ದುಡ್ಡು ಬರಮಾಡಿಕೊಳ್ಳಬೇಕೆಂದು ಮುತ್ತಳಿಗೆ ಹೋಗಿದ್ದ ಅಗ್ರಹಾರದ ಜೋಯಿಸ ವೆಂಕಪ್ಪಯ್ಯನವರು ಅಲ್ಲಿಗೆ ಆಗಮಿಸಿದರು. 

ವೆಂಕಪ್ಪಯ್ಯಜೋಯಿಸರು ಹಳೆಯ ಸಂಪ್ರದಾಯ, ಮೂಢನಂಬಿಕೆ ಮತ್ತು ಮಂತ್ರ- ತಂತ್ರಗಳ ಪ್ರತೀಕವಾಗಿದ್ದವರು. ಆದರೆ, ಹೂವಯ್ಯ ಮಾತ್ರ ಇದಕ್ಕೆ ತದ್ವಿರುದ್ಧವಾಗಿ ಆಧುನಿಕ ಶಿಕ್ಷಣ, ವೈಜ್ಞಾನಿಕ ವಿಚಾರ ಮತ್ತು ಸುಧಾರಣೆಯ ಸಂಕೇತವಾಗಿದ್ದವನು. ಹೀಗಾಗಿ, ಹೂವಯ್ಯನ ವಿಚಾರಗಳು ಜೋಯಿಸರಿಗೆ ಅಸಹನೀಯವಾಗುತ್ತವೆ. ಹಳ್ಳಿಗರ ಅಜ್ಞಾನವೇ ಈ ಜೋಯಿಸರ ಜೀವನೋಪಾಯಕ್ಕೆ ಆಧಾರವಾಗಿತ್ತು. ಹೂವಯ್ಯನಿಗೆ ಉಪನಿಷತ್ತು ಮತ್ತು ಗೀತೆಗಳ ಜ್ಞಾನ ತಮಗಿಂತ ಹೆಚ್ಚಿದೆ ಎಂಬ ಭಯವೂ ಅವರಲ್ಲಿತ್ತು. ಆದರೂ ವೆಂಕಪ್ಪಯ್ಯಜೋಯಿಸರು ಹೂವಯ್ಯನ ಬೆನ್ನುನೋವಿಗೆ ಮಂತ್ರ-ತಾಯಿತದ ಪರಿಹಾರ ಸೂಚಿಸಿದರು. 
ಆದರೆ, ಹೂವಯ್ಯನು ಜೋಯಿಸರ ಮೌಢ್ಯದ ಬೋಧನೆಯನ್ನು ತೀವ್ರವಾಗಿ ವಿರೋಧಿಸಿದನು. "ಔಷಧಿ ಮಾಡುವ ಬದಲು ಬೂದಿ ಹಚ್ಚಿ ಎನ್ನುತ್ತೀರಲ್ಲ, ಇದು ಯಾವ ಶಾಸ್ತ್ರ?" ಎಂದು ಪ್ರಶ್ನಿಸಿದ ಹೂವಯ್ಯ, ತಪ್ಪು ನಂಬಿಕೆಗಳಿಂದ ಜನರು ಪ್ರಾಣ ಕಳೆದುಕೊಳ್ಳುತ್ತಿರುವುದನ್ನು ನೆನಪಿಸಿದನು. 
ಚರ್ಚೆಯ ನಡುವೆ ತನ್ನ ತಂದೆಯ ಸಾವು ನೆನಪಾಗಿ ಮೃದುವಾದ ಹೂವಯ್ಯ, ತನ್ನ ತಂದೆ ತೀವ್ರ ಜ್ವರದಲ್ಲಿದ್ದಾಗ ಜೋಯಿಸರ ಮಂತ್ರ-ತಂತ್ರದ ಸಲಹೆಯಂತೆ ಅಂಗಳಕ್ಕೆ ಇಳಿದು ಬಂದು, ಚಳಿ ತಗುಲಿ ಪ್ರಾಣಬಿಟ್ಟ ಘಟನೆಯನ್ನು ನೆನಪಿಸಿಕೊಂಡನು. ಜೋಯಿಸರ ಉದ್ದೇಶ ಕೆಟ್ಟದ್ದಲ್ಲದಿದ್ದರೂ, ಅವರ ಅಜ್ಞಾನವು ಅಪಾಯಕಾರಿ ಎಂದು ಸೌಮ್ಯವಾಗಿ, ಆದರೆ ದೃಢವಾಗಿ ಹೇಳಿದನು. 
ಇತ್ತ, ಜೋಯಿಸರು ಕಾನೂರಿಗೆ ಹಿಂತಿರುಗುವ ದಾರಿಯಲ್ಲಿ ಹಳ್ಳಿಯ ಕಟು ವಾಸ್ತವಗಳು ಅನಾವರಣಗೊಳ್ಳುತ್ತವೆ. ಕುಂಬಾರ ನಂಜ ಕುಡಿದು ಅಮಲೇರಿ ತನ್ನ ಹೆಂಡತಿಯ ಕಿವಿ ಹರಿದು ಬುಗುಡಿಯನ್ನು ಕಿತ್ತುಕೊಳ್ಳುವ ಘಟನೆಯು ಅಂದಿನ ಸಮಾಜದಲ್ಲಿದ್ದ ಕುಡಿತದ ವ್ಯಸನ ಮತ್ತು ಸ್ತ್ರೀ ಶೋಷಣೆಗೆ ಸಾಕ್ಷಿಯಾಗುತ್ತದೆ. ನಂಜ ಮುಂದೆ ಹೋಗುವಾಗ ದಾರಿಯ ಮೈಲಿಗಲ್ಲನ್ನೇ ತನ್ನ ಶತ್ರುವೆಂದು ಭಾವಿಸಿ ಅದಕ್ಕೆ ಒದೆದುದನ್ನು ಕಂಡು ಧರ್ಮದ ದಾರಿಯಲ್ಲಿ ನಡೆಯುತ್ತೇವೆ ಎನ್ನುವ ಜೋಯಿಸರು ಭಯಪಟ್ಟು ಓಡಿಹೋದರು

ಇತ್ತ, ದಾರಿಯಲ್ಲಿ ಅಣ್ಣಯ್ಯಗೌಡರ ಮಗ ಓಬಯ್ಯ ಕುಡಿದು ಪ್ರಜ್ಞೆತಪ್ಪಿ ಬಿದ್ದಿದ್ದನು.

ಗಾಡಿ ಕಾನೂರು ತಲುಪಿದಾಗ ಹೂವಯ್ಯನಿಗೆ ಅಪಘಾತವಾಗಿದೆ ಎಂಬ ಸುದ್ದಿಯನ್ನು ಪುಟ್ಟಣ್ಣಹೇಳಿದಾಗ, ಅದನ್ನು ಕೇಳಿ ಗಾಬರಿಗೊಂಡ ಹೂವಯ್ಯನ ತಾಯಿ ನಾಗಮ್ಮನವರು ರೋದಿಸುತ್ತಾ ಚಂದ್ರಯ್ಯಗೌಡರನ್ನು ಶಪಿಸತೊಡಗಿದರು. 

ಅತ್ತ ಚಂದ್ರಯ್ಯಗೌಡರು ಕುಡಿದು ಅಮಲೇರಿ ಮನೆಯನ್ನು ಪ್ರವೇಶಿಸಿದರು. 





ಮಾಯಾ ಲೋಕ – ಪೂರ್ಣಚಂದ್ರ ತೇಜಸ್ವಿ | 1, 5, 8 ಅಂಕದ ಪ್ರಶ್ನೋತ್ತರಗಳು | BA ಕನ್ನಡ ಪರೀಕ್ಷಾ ನೋಟ್ಸ್

ಮಾಯಾ ಲೋಕ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಎಂಟು ಅಂಕದ ಪ್ರಶ್ನೋತ್ತರಗಳು ಪ್ರಶ್ನೆ ೧. ಹಕ್ಕಿಪಿಕ್ಕಿಗಳು ಹುಂಡುಕೋಳಿಗಳನ್ನು ಹಿಡಿದ ಸಂದರ್ಭವನ್ನು ವಿವರಿಸಿ. ಉತ್ತರ: ಕೆ...