ಕರ್ತೃ - ಕೃತಿ ಪರಿಚಯ:
'ಕುವೆಂಪು' ಕಾವ್ಯನಾಮದಿಂದ ಸುಪ್ರಸಿದ್ಧರಾದ ಕುಪ್ಪಳ್ಳಿ ವೆಂಕಟಪ್ಪನವರ ಮಗ ಪುಟ್ಟಪ್ಪನವರು ಹೊಸಗನ್ನಡದ ಮಹಾಕವಿಗಳು, ಶ್ರೇಷ್ಠ ಭಾವಗೀತಕಾರರು, ಮಹಾನ್ ಕಾದಂಬರಿಕಾರರು; ವೈಚಾರಿಕ ಪ್ರಜ್ಞೆಯ ರಮ್ಯವಿಮರ್ಶಕರು. 1904 ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಕುವೆಂಪು ಅವರು ಜನಿಸಿದರು. ಕನ್ನಡ ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. ಸುಮಾರು 70 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ ಕುವೆಂಪು ಅವರು ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅನನ್ಯವಾದುದು. 1930 ರಲ್ಲಿ 'ಕೊಳಲು' ಕವನ ಸಂಕಲನದಿಂದ ಪ್ರಾರಂಭವಾದ ಕುವೆಂಪು ಅವರ ಕಾವ್ಯರಚನೆ 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯದಲ್ಲಿ ಸಿದ್ಧಿಯನ್ನು ಪಡೆಯಿತು.
ಕೃತಿಗಳು :
'ಕೊಳಲು', 'ಅಗ್ನಿ ಹಂಸ', 'ಕದರಡಿಕೆ', 'ಪಕ್ಷಿಕಾಶಿ', 'ಪಾಂಚಜನ್ಯ', 'ಕೋಗಿಲೆ' ಮತ್ತು 'ಸೋವಿಯತ್ ರಷ್ಯಾ', 'ಅನಿಕೇತನ', 'ನವಿಲು', 'ಕನ್ನಡ ಡಿಂಡಿಮ', 'ಚಂದ್ರ ಮಂಚಕೆ ಬಾ ಚಕೋರಿ', 'ಅನುತ್ತರಾ', 'ಷೋಡಶಿ', 'ಜೇನಾಗುವಾ' ಇವು ಕುವೆಂಪು ಅವರ ಕೆಲ ಪ್ರಮುಖ ಕವನ ಸಂಕಲನಗಳು. 'ಚಿತ್ರಾಂಗದ' ಇವರ ಪ್ರಸಿದ್ಧ ಖಂಡಕಾವ್ಯ. 'ಸ್ಮಶಾನ ಕುರುಕ್ಷೇತ್ರಂ', 'ಜಲಗಾರ', 'ಶೂದ್ರತಪಸ್ವಿ', 'ರಕ್ತಾಕ್ಷಿ', 'ಬಿರುಗಾಳಿ', 'ಮಹಾರಾತ್ರಿ', - ಇವು ಕುವೆಂಪು ಅವರ ಕೆಲ ಪ್ರಮುಖ ನಾಟಕಗಳು. 'ಕಾನೂರ ಸುಬ್ಬಮ್ಮ ಹೆಗ್ಗಡತಿ', 'ಮಲೆಗಳಲ್ಲಿ ಮದುಮಗಳು' ಇವು ಇವರ ಮಹಾನ್ ಕಾದಂಬರಿಗಳು. 'ರಾಮಕೃಷ್ಣ ಪರಮಹಂಸ', 'ಸ್ವಾಮಿ ವಿವೇಕಾನಂದ' ಇವು ಇವರ ಪ್ರಸಿದ್ಧ ಜೀವನ ಚರಿತ್ರೆಗಳು. 'ತಪೋನಂದನ', 'ದೌಪದಿಯ ಶ್ರೀಮುಡಿ', 'ಸರೋವರದ ಸಿರಿಗನ್ನಡಿ' -ಇವು ಕುವೆಂಪು ಅವರ ರಮ್ಯವಿಮರ್ಶಾಕೃತಿಗಳು. 'ವಿಭೂತಿ ಪೂಜೆ', ನಿರಂಕುಶ ಮತಿಗಳಾಗಿ' ಇವು ಇವರ ಕೆಲ ಅಪ್ಪಟ ವೈಚಾರಿಕ ಕೃತಿಗಳು. 'ರಸೋವೈಸಃ' - ಇದು ಕುವೆಂಪು ಅವರ ಪ್ರಸಿದ್ಧ ಕಾವ್ಯಮೀಮಾಂಸಾ ಕೃತಿ, 'ನೆನಪಿನ ದೋಣಿಯಲ್ಲಿ' - ಇದು ಕುವೆಂಪು ಅವರ ಆತ್ಮಕಥೆ.
ಕುವೆಂಪು ಅವರ ದೈತ್ಯಪ್ರತಿಭೆಗೆ ಕನ್ನಡದ ಪ್ರಥಮ ಪ್ರಶಸ್ತಿಗಳ ಸರಮಾಲೆಯೇ ಸಂದಿದೆ. ಇವರ 'ಶ್ರೀ ರಾಮಾಯಣ ದರ್ಶನಂ' ಜಗದ್ಭವ್ಯ ಮೇರು ಕಾವ್ಯಕ್ಕೆ 1955 ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ರಾಜ್ಯಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಇವೆಲ್ಲ ಕುವೆಂಪು ಅವರಿಗೆ ಸಂದ ಪ್ರಥಮ ಪ್ರಶಸ್ತಿಗಳು. 'ರಾಷ್ಟ್ರಕವಿ ಪ್ರಶಸ್ತಿ' ಪಡೆದವರಲ್ಲಿ ಗೋವಿಂದ ಪೈಯವರ ನಂತರದ ಎರಡನೆಯ ಕವಿ ಕುವೆಂಪು ಅವರು.
ಕುವೆಂಪು ಅವರು 1957 ರಲ್ಲಿ ಧಾರವಾಡದಲ್ಲಿ ನಡೆದ 39 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೈಸೂರು, ಬೆಂಗಳೂರು, ಕರ್ನಾಟಕ ಹಾಗೂ ಗುಲಬರ್ಗಾ ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿವೆ. 'ಸಹ್ಯಾದ್ರಿ' 'ಗಂಗೋತ್ರಿ' ಇವು ಕುವೆಂಪು ಅವರಿಗೆ ಸಂದ ಅಭಿನಂದನ ಗ್ರಂಥಗಳು.
ತಿರುಳು :
'ಕರಿಸಿದ್ದ' ಕುವೆಂಪು ಅವರ ಬಹುಪ್ರಸಿದ್ಧ ಕಥನಕವನಗಳಲ್ಲಿ ಒಂದು. ದಲಿತ ಜನಾಂಗದ ನೋವಿನ ಕಥೆ ಇಲ್ಲಿ ಕಂಬನಿ ಮಿಡಿಯುವಂತೆ ಮೂಡಿಬಂದಿದೆ. ಈ ಕವನ ಹೊಸಗನ್ನಡದ ಕರುಣಾಜನಕ ಕಥನಕವನಗಳಲ್ಲಿ ಒಂದು.
ಈ ಕಥನಕವನದ ನಾಯಕ - ನಾಯಕಿ ಕರಿಸಿದ್ದ-ಗಿಡ್ಡಿಯರು. ಈ ದಂಪತಿಗಳಿಗೆ ಬಹುಕಾಲವಾದರೂ ಮಕ್ಕಳಾಗಿರಲಿಲ್ಲ. ಪುತ್ರಕಾಮೇಷ್ಟಿಗಲ್ಲ, ತುತ್ತು ಗಂಜಿಗೂ ಗತಿಯಿಲ್ಲದ ಈ ದಂಪತಿಗಳು ಪ್ರಕೃತಿ ಧರ್ಮವನ್ನು ನಂಬಿ, ಕರ್ಮವನ್ನು ಮಾಡಿ ಭೈರನೆಂಬೊಬ್ಬ ಮಗನನ್ನು ಪಡೆಯುತ್ತಾರೆ. ಭೈರ ಹುಟ್ಟುತ್ತಲೇ ಬುದ್ದನಾಗಿ ಹುಟ್ಟಿದವನೇನಲ್ಲ! ಹಕ್ಕಿ ಮೊಟ್ಟೆಗಳನ್ನು ಕದಿಯುತ್ತ, ಇರುವೆಗಳನ್ನು ಹೊಸಕಿ ಹಾಕುತ್ತ, ಚಿಟ್ಟೆಗಳ ಬಾಲಕ್ಕೆ ಬಾಳೆನಾರು ಕಟ್ಟಿ ಹಾರಲು ಬಿಟ್ಟು ಬೆರಗಾಗಿ ನೋಡುತ್ತ, ಬಣ್ಣ ಬಣ್ಣದ ಚಿಟ್ಟೆಗಳನ್ನು ಅಟ್ಟಿ ಹಿಡಿದು ಪೀಡಿಸುತ್ತ, ಗೂಡಿನ ಹಕ್ಕಿಮರಿಗಳಿಗೆ ಹಣ್ಣು ಹಾಕುತ್ತ ಬೆಳೆದ ಬಡ ಹುಡುಗ ಈ ಕರಿಸಿದ್ದ. ಮಗನ ಬೆಳವಣಿಗೆಯನ್ನು ಕಂಡು ತಂದೆತಾಯಿಗಳು ಹಿಗ್ಗುತ್ತಿರುವಾಗಲೇ, ನಡೆಯಬಾರದ ದರಂತ ನಡೆದು ಹೋಗುತ್ತದೆ. ಒಂದು ದಿನ ತಂದೆ ಕರಿಸಿದ್ದನ ಜತೆ ಕೆರೆಗೆ ಮೀನು ಹಿಡಿಯಲು ಹೋಗಿದ್ದ ಭೈರ ಕೆರೆಗಿಳಿದು ಬಿಳಿಯ ಅವಲಹೂವನ್ನು ಕೀಳಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಕರಿಸಿದ್ದ -ಗಿಡ್ಡಿಯರಿಗೆ ಹೇಳಲಾಗದ ಮನೋವೇದನೆ; ದುಃಖ! ಆದರೆ ಇದು ಚಿತ್ರಗುಪ್ತನ ವರದಿಯಲ್ಲಿ ಇತರ ಸಾಮಾನ್ಯ ಸುದ್ದಿಗಳಂತೆ ಒಂದು ಸುದ್ದಿಯಾಗಿ ಬಿಡುತ್ತದೆ.
ಬಡವರ ಬವಣೆಯನ್ನು ಕೇಳುವವರು ದಿಕ್ಕಿಲ್ಲ - ಎಂಬ ವೇದನೆಯನ್ನು, ವಾಸ್ತವ ಸತ್ಯವನ್ನು ಈ ಕಥನಕವನ ಧ್ವನಿಪೂರ್ಣವಾಗಿ ಕಟ್ಟಿಕೊಡುತ್ತದೆ.
ಸರಳಾನುವಾದ:
ತೀರ್ಥಹಳ್ಳಿಯನ್ನು ಕಳೆದು, ತಾಯಿ ತುಂಗೆಯನ್ನು ದಾಟಿ, ಒಂಬತ್ತು ಮೈಲುಗಳ ದೂರದಲ್ಲಿದೆ ಕುಪ್ಪಳ್ಳಿ. ಅದು ಪಡುವಣ (ಪಶ್ಚಿಮ) ಬೆಟ್ಟಗಳ ನಾಡು; ದಟ್ಟವಾದ ಅಡವಿಗಳು ಕಿಕ್ಕಿರಿದ ಮಲೆನಾಡು.
ಇಂಥ ಮಲೆನಾಡಿನಲ್ಲಿ ದೊಡ್ಡ ಅಣಬೆಯಂತೆ ನೆಲದಿಂದ ಮೇಲೆದ್ದ ಗುಡಿಸಲೊಂದರಲ್ಲಿ ಸಂಸಾರಿಯಾಗಿದ್ದ ಕರಿಸಿದ್ದ ಜಾತಿಯಿಂದ ಕೀಳು ಜಾತಿಯವನು. ಎಂದರೆ ಅಸ್ಪೃಶ್ಯ ಜಾತಿಯವನು. ಗಿಡ್ಡಿ ಆತನ ಹೆಂಡತಿ. ಕರಿಸಿದ್ದ ದನಗಳನ್ನು ಕಾಯುತ್ತಿದ್ದ. ಗಿಡ್ಡಿ ಮನೆ ಮನೆಗೆ ತಿರುಗಿ ತಿರುಗಿ ದಿನಗೂಲಿ ಮಾಡುತ್ತಿದ್ದಳು. ಬಹುಕಾಲವಾದರೂ ಮಕ್ಕಳಾಗಲೇ ಇಲ್ಲ. ಮಕ್ಕಳಿಲ್ಲದವರಿಗೆ ಮಹಾನರಕವಾಗುವುದೆಂಬುದನ್ನು ಅರಿಯದ ಕರಿಸಿದ್ದ ಹಾಗೂ ಗಿಡ್ಡಿಯರು ಧರ್ಮಶಾಸ್ತ್ರವನ್ನು ಸಹ ಕೇಳಿದವರಲ್ಲ. ಪುತ್ರಕಾಮೇಷ್ಟಿಯನ್ನು ಮಾಡಲು ಅವರಿಗೆ ದುಡ್ಡೇ ಇರಲಿಲ್ಲ. ಗಂಜಿಗೇ ಗತಿಯಿಲ್ಲ! ಇನ್ನು ನೈವೇದ್ಯಕ್ಕೆ ಎಲ್ಲಿಂದ ತರಬೇಕು? ಪ್ರಕೃತಿ ಧರ್ಮವನ್ನು ನಂಬಿ ಕರ್ಮವನ್ನು ಮಾಡಿದರು. ಕಡೆಗೊಂದು ದಿನ ಗಿಡ್ಡಿ ನಡುರಾತ್ರಿ ಒಂದು ಕೂಸನ್ನು ಹೆತ್ತು ಹಿಗ್ಗಿದಳು. ಕರಿಸಿದ್ದ ಸಂತಸದಿಂದ ಹೆಂಡತಿ ಶುಶ್ರೂಷೆ ಮಾಡಿದ. ದಾದಿಯರನ್ನು ಎಲ್ಲಿಂದ ತಂದಾನು ಆ ಬಡವ! ಹರಳೆಣ್ಣೆ ಹಣತೆಯನ್ನು ಹೊತ್ತಿಸಿದ. ಆ ಹಣತೆಯ ಮಬ್ಬಿನಲ್ಲಿ ಮಗುವನ್ನು ಪದ್ಧತಿ ಮೀರದೆಯೇ ದೂರದಲ್ಲಿ ಮಲಗಿಸಿದ. ದೆವ್ವಗಳು ಬರದಂತೆ ಹರಕು ಮೆಟ್ಟಿನ ಚೂರು ಬಾಗಿಲಿಗೆ ಕಟ್ಟಿದ. ಬಾಗಿಲಿನ ಮೂಲೆಯೊಂದರಲ್ಲಿ ಪೊರಕೆಯನ್ನು ಇಟ್ಟ! ಬಡತನದ ತೊಟ್ಟಿಲಿಗೆ ಪ್ರದಕ್ಷಿಣೆ ಹಾಕಿ, ಭಕ್ತಿಯಿಂದ ಮೂರು ಕಾಸನ್ನು ಸುಳಿದು (ತೆಗೆದು) ಮುಡುಪಾಗಿ ಕಟ್ಟಿದ! ತಿರುಪತಿಯ ವೆಂಕಟೇಶನಿಗಲ್ಲ: ಕಾಶಿಯಲ್ಲಿ ಮಲಗಿರುವ ವಿಶ್ವನಾಥನಿಗಲ್ಲ: ಉಡುಪಿಯಲ್ಲಿ ವಾಸಿಸುವ ವಾಸುದೇವನಿಗಲ್ಲ: ತನ್ನೂರ ತೋಟದಾಚೆಯ ಭೂತನಿಗೆ ಮುಡುಪು ಕಟ್ಟಿದ! ಆದರೂ ತಿರುಪತಿಯ ವೆಂಕಟನ ಭಕ್ತರಿಗೆ ಮಹಾಸಂತಸವಾಯಿತು. ವಿಶ್ವನಾಥನ ಭಕ್ತರ ಆನಂದವೇ ಅವನಿಗೂ ಬಂತು. ವೈಷ್ಣವರಿಗೂ ಸುಖವಾಯಿತು. ಮಾನವರ ಭಕ್ತಿಯೇ ದೇವರಿಗೆ ಶಕ್ತಿ! ನರಭಕ್ತಿ ಅಳಿದರೆ ಎಲ್ಲಿ ಹರಶಕ್ತಿ?
ದಂಪತಿಗಳು ಉಲ್ಲಾಸದಿಂದ ಹಿಗ್ಗಿದರು. ಹಾಲಿಲ್ಲ ಗೀಲಿಲ್ಲ; ಎಣ್ಣೆ ಬೆಣ್ಣೆಗಳಿಲ್ಲ. ಮೊಲೆ ಹಾಲು, ಗಂಜಿಗಳ ಬಲದಿಂದ ಬೆಳೆಯುತ್ತಿದ್ದ ಕರಿಸಿದ್ಧ - ಗಿಡ್ಡಿಯರ ಮಗ ಬೈರ. ಕರಿಸಿದ್ದ ಹೆಸರಿಡಲು ಭಟ್ಟರಿಗೆ ಬಿಡಿಕಾಸು ಕೊಡಲಿಲ್ಲ! ಹುಟ್ಟಿಸಿದ ದೇವರೇ ಜಾತಕವನ್ನು ಬರೆದಿಟ್ಟ! ಆ ಭೈರ ಹುಣ್ಣಿಮೆಯ ಚಂದ್ರನಂತಿರಲಿಲ್ಲ. ಆತ ಗಿಡ್ಡಿ-ಕರಿಸಿದ್ಧರಿಗೆ ಮುದ್ದಾದ ಮಗನಂತೆ ಇದ್ದ! ಚೆಲುವ ಇಳೆಗೆ ಬಂದಂತೆ ಇರಲಿಲ್ಲ, ಚೆಂದುಟಿಯೂ ಇರಲಿಲ್ಲ. ಆದರೂ ಕರಿಸಿದ್ದ ಕಣ್ಣಿಗೆ ಸುಂದರನಾಗಿದ್ದ. ಧೂಳಲ್ಲಿ, ಮಣ್ಣಲ್ಲಿ, ಹಸಿರಲ್ಲಿ, ಕೆಸರಲ್ಲಿ ಬಿದ್ದೆದ್ದು ಬೈರ ಒರಟಾಗಿ, ಕರ್ರಗೆ ಗಟ್ಟಿಮುಟ್ಟಾಗಿ ಮಲೆನಾಡಿನಲ್ಲಿ ಬೆಳೆದ.
ಹಂಡನಾಯಿ ಬೈರನ ಸಂಗಾತಿ. ತನ್ನ ಬಡತಿಂಡಿಗಳಲ್ಲಿ ಒಂದಿಷ್ಟನ್ನು ಹಂಡನಾಯಿಗೂ ಹಾಕಿ ತಿನ್ನುತ್ತಿದ್ದ. ಕರಿಸಿದ್ದ-ಗಿಡ್ಡಿಯರು ಬೇಡವೆಂದರೂ ಬಿಡದೆ, ತನ್ನ ಚಾಪೆಯ ಮೇಲೆ ಜಾಗ ಕೊಟ್ಟು ಮಲಗಿಸಿಕೊಂಡು, ಆ ನಾಯಿಯೊಡನೆ ಕೋಗಿಲೆಯನ್ನು ಅಣಕಿಸುವ ಆಟ ಆಡುತ್ತಿದ್ದ. ಹಂಡನಾಯಿಯ ಮೇಲೆ ಚಿಟ್ಟೆಗಳನ್ನು ಅಟ್ಟುತ್ತಿದ್ದ. ಆ ನಾಯಿಯ ಮೇಲೆ ಕುಳಿತು ಕುದುರೆ ಮಾಡಿ ಹೋಯೆಂದು ಕೂಗುತ್ತಿದ್ದ. ತಾಯೆದೆಯ ಮೇಲೆ ನಲಿಯುವ ಶಿಶುವಂತೆ ನಲಿನಲಿದು, ಹತ್ತಿರದ ಬನಗಳಲ್ಲಿ ಹಂಡನಾಯಿಯೊಡನೆ ಮಲಗುತ್ತಿದ್ದ. ನಂತರ ಬೈರ ಪಿಕಳಾರ ಹಕ್ಕಿಗಳ ಗೂಡುಗಳನ್ನು ಅರಸುತ್ತಿದ್ದ.
ಕರಿಸಿದ್ದ-ಗಿಡ್ಡಿಯರ ಮಗ ಬೈರ ಹುಟ್ಟುತ್ತಲೇ ಬುದ್ಧನಾಗಿರಲಿಲ್ಲ. ಆತ ಹಕ್ಕಿ ಮೊಟ್ಟೆಗಳನ್ನು ಕದಿಯುತ್ತಿದ್ದ. ಇರುವೆಗಳನ್ನು ಅರೆಯುತ್ತಿದ್ದ. ಚಿಟ್ಟೆಗಳ ಬಾಲಕ್ಕೆ ಬಾಳೆನಾರನ್ನು ಕಟ್ಟಿ, ಹಾರಿಸುತ್ತಾ ಬೆರಗಾಗಿ ನೋಡುತ್ತಿದ್ದ. ಬಣ್ಣಬಣ್ಣದ ಚಿಟ್ಟೆಗಳನ್ನು ಅಟ್ಟಿ ಹಿಡಿಹಿಡಿದು ಪೀಡಿಸುತ್ತಿದ್ದ. ಗೂಡುಗಳಲ್ಲಿ ಹಕ್ಕಿಮರಿಗಳನ್ನು ಕಂಡು, ಅವು ಬಾಯಿ ತೆರೆಯಲು ಸಂತಸದಿಂದ ಆ ಮರಿಗಳಿಗೆ ತಾನೇ ತಾಯಾಗಿ ಹಣ್ಣುಗಳನ್ನು ಹಾಕುತ್ತಿದ್ದ.
ಕರಿಸಿದ್ದ-ಗಿಡ್ಡಿಯರು ಮಗನ ಬೆಳವಣಿಗೆಯನ್ನು ಕಂಡು ಹಿಗ್ಗುತ್ತಿದ್ದರು. ಆದರೆ, ಚಂದ್ರನ ಉದಯವನ್ನು ಕಂಡು ಸಂತಸದಿಂದ ಹಿಗ್ಗುವ ಕಡಲಿನಂತಲ್ಲ! ಜಡತನದ ಹೋಲಿಕೆಯಿಂದ ಹಿಗ್ಗುತ್ತಿದ್ದರು; ಮಕ್ಕಳನ್ನು ಹೆತ್ತವರು ಹಿಗ್ಗಿ ನಲಿಯುವಂತೆ ಹಿಗ್ಗುತ್ತಿದ್ದರು! ದಿನದಿನವೂ ಬೈಗಿನ ಅಡುಗೆಯನ್ನು ಮುಗಿಸಿ ಗಿಡ್ಡಿ ಮಗನಿಗೆ ಕತೆ ಹೇಳುತ್ತಿದ್ದಳು. ಭೈರ ಹಂಡನಾಯಿಯ ತಲೆಯನ್ನು ತಟ್ಟುತ್ತ ಕಣ್ಣಿಟ್ಟು, ಬಾಯಿ ತೆರೆದು ಬೆರಗಿನಿಂದ ಕತೆ ಕೇಳುತ್ತಿದ್ದ. ಗಿಡ್ಡಿ ಪಂಡಿತೆಯಲ್ಲ, ಆಕೆ ಮಗನಿಗೆ ಹೇಳುತ್ತಿದ್ದ ಕತೆಗಳು ಸಣ್ಣಕತೆಗಳ ಪಂದ್ಯದಲ್ಲಿ ಗೆದ್ದು ಬಹುಮಾನ ಪಡೆದ ಕಥೆಗಳಲ್ಲ, ಅವು ಹಳ್ಳಿಯರ ಕಲ್ಪನೆಯ ಕಥೆಗಳು; ಹಳ್ಳಿಗರಿಗಾಗಿ ಕಟ್ಟಿದ ಕತೆಗಳು.
ಕರಿಸಿದ್ದ, ಗಿಡ್ಡಿ, ಬೈರರು ಯಾರೂ ಅರಿಯದ ಮಲೆನಾಡಿನ ಮೂಲೆಯಲ್ಲಿ ನಾಗರಿಕತೆಯ ಸುಳಿಗೆ ಬೀಳದೆ, ಜಗದ ದೊಂಬಿಯ ಗಲಭೆಯನ್ನು ಕೇಳಿ ಬೇಸರಿಸದೆ, ಸಂಸ್ಕೃತಿಯ ಸುಖದುಃಖಗಳಿಗೆಲ್ಲ ದೂರಾಗಿ, ಸಿರಿಗೆ ಬೆದರದೆ ಬಡತನಕ್ಕೆ ಹೇಸಿ ಗೋಳಿಡದೆ, ಅತಿಕಾಂಕ್ಷೆ ಅತಿಭೋಗ ಅತ್ಯಾಸೆ ಅತಿಗಳು ಒಂದಿಲ್ಲದೆ ಮಿತಿಯಿಂದ ಬಾಳಿದರು. ಹೀಗೆ, ಬಡ ಕರಿಸಿದ್ದ-ಗಿಡ್ಡಿಯರು ಮಗನೊಡಗೂಡಿ ಬದುಕಿದರು.
ಹೀಗೆ, ಬಾಳಿನ ಹೊನಲು ಹರಿಯುತ್ತಿರಲು ಒಂದು ದಿನ ಕರಿಸಿದ್ಧ ಮೀನು ಹಿಡಿಯಲು ಕೆರೆಗೆ ಭೈರನನ್ನು ಕರೆದೊಯ್ದ. ಹಂಡನಾಯಿಯೂ ಅವನ ಜತೆ ಹೋಯಿತು. ಕರಿಸಿದ್ಧ ಮೀನು ಹಿಡಿಯುತ್ತಿರುವಾಗ ಬೈರ ಬಿಳಿಯ ಅವಲಹೂವನ್ನು ಕೈಯಿಂದ ಕೀಳಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಮುಳುಗಿದ. ಮುದಿಯಾದ ಕರಿಸಿದ್ದ ಬಾಯಿ ಬಡಿದುಕೊಂಡು ಕೆರೆಯಲ್ಲಿ ಮುಳುಮುಳುಗಿ ಮಗನನ್ನು ಮೇಲಕ್ಕೆ ತಂದ. ಹಂಡನಾಯಿ ಕೂಡ ಕೆರೆಗೆ ಇಳಿದು, ದಡಕ್ಕೆ ಅಡರಿ, ಬೈರನನ್ನು ಮೂಸುತ್ತಾ ಬಾಲ ಅಲ್ಲಾಡಿಸಿತು. ಬೈರನಿಗೆ ಉಸಿರಾಡುತ್ತಿರಲಿಲ್ಲ; ನೀರು ಕುಡಿದು ಹೊಟ್ಟೆ ಉಬ್ಬರಿಸಿತ್ತು, ಕಂಗೆಟ್ಟ ಕರಿಸಿದ್ದ ತೋಟದಾಚೆಯ ಭೂತರಾಯನಿಗೆ ಅಡ್ಡಬಿದ್ದು ಮಗನನ್ನು ಕಾಪಾಡಬೇಕೆಂದು ಬೇಡಿಕೊಂಡ.
ಕರಿಸಿದ್ದನ ರೋದನವನ್ನು ಕೇಳುತ್ತಲೇ ಗಿಡ್ಡಿ ಗುಡಿಸಲಿನಿಂದ ಓಡೋಡಿ ಬಿದ್ದೆದ್ದು ಬಂದಳು. ಬೆದರಿ ನೋಡಿದಳು! ಚೀತ್ಕಾರ ದನಿ ಮಾಡಿ, ಮುಡಿಗೆದರಿ ಗೋಳಾಡಿ, ಮಣ್ಣೆರಚಿ, ಭೂತನನ್ನು ಬೈಯುತ್ತ ಬೇಡುತ್ತ ಕಲ್ಲಿನಲ್ಲಿ ತಲೆಕುಟ್ಟಿ, ಭೈರನ ಮೇಲೆ ಬಿದ್ದು ದಣಿದು ತಟ್ಟಾಗಿ ಒರಗಿದಳು.
ಮಧ್ಯಾಹ್ನದ ಬಿರುಬಿಸಿಲು ಬನ-ಬೆಟ್ಟಗಳ ಮೇಲೆ ಮಲಗಿತ್ತು. ತಿಳಿನೀಲಿಯಾಗಸದಲ್ಲಿ ಬಿಳಿ ಮೋಡದ ಗುಂಪು ಚಲಿಸದೆಯೇ ನಿಂತಿತ್ತು. ಏನೂ ತಿಳಿಯದ ಹಸುಳೆ ಕಣ್ಣು ಬಿಡುವಂತೆ ಕೆರೆ ಮುಗ್ಧತೆಯನ್ನು ತೋರಿತ್ತು. ಬೆಟ್ಟ, ಕಾನು, ಮುಗಿಲು, ಬಾನು, ಬಯಲು, ಕೆರೆ, ಮರ, ಬಳ್ಳಿ ಎಲ್ಲಿ ನೋಡಿದರಲ್ಲಿ ಶ್ರೀ ಶಾಂತಿ ನೆಲೆಸಿತ್ತು. ಆದರೆ ಹಂಡನಾಯಿಯೆದೆ, ಗಿಡ್ಡಿಯೆದೆ, ಕರಿಸಿದ್ದನೆದೆಗಳು ಮಾತ್ರ ಬೇರೊಂದು ಲೋಕದಲ್ಲಿದ್ದಂತೆ ತೋರಿದವು.
ಯಮನ ಕರಣಿಕ ಚಿತ್ರಗುಪ್ತ ಕಾಲದ ಓಲೆಯ ಮೇಲೆ ಹೀಗೆಂದು ಬರೆದು ಚಿತ್ರಿಸಿದ : “ಪಾರ್ಲಿಮೆಂಟಿನಲ್ಲೊಬ್ಬ ಭಾಷಣ ಮಾಡಿದ. ವಂಗದೇಶದ ಕವಿ ನಾಟಕವನ್ನು ರಚಿಸಿದ. ಹಿಮಗಿರಿಯ ಮೇಲೊಬ್ಬ ಸಾಧು ಸಿದ್ದನಾದ. ಜರ್ಮನಿಯ ದೇಶದಲ್ಲಿ ಮಹಾಯುದ್ಧ ನಡೆದಿದೆ. ಕುಪ್ಪಳ್ಳಿಯ ಕೆರೆಯಲ್ಲಿ ಬೈರ ಹುಡುಗ ಬಿದ್ದ. ಗಿಡ್ಡಿ - ಕರಿಸಿದ್ದರು ಮಡಿದವನಿಗೆ ಮರುಗುವರು. ಹಂಡನಾಯಿ ಮರುಗಿ ಕಣ್ಣೀರು ಕರೆದಿತ್ತು! ಆಫ್ರಿಕಾದಲ್ಲಿ ಕಂಬಿ ತಪ್ಪಿದ ರೈಲು ಬಿದ್ದಿತ್ತು.ಕಾಶಿಯಲ್ಲಿ ಹಾರುವರು (ಬ್ರಾಹ್ಮಣರು) ವೇದ ಹೇಳುತ್ತಿರುವರು. ಚಿತ್ರಗುಪ್ತನಿಗೆ ಮೇಲು-ಕೀಳಿನ ಭೇದ ಇದೆಯೇ?”.
ಎರಡು ಅಂಕದ ಪ್ರಶೋತ್ತರಗಳು.
ಪ್ರಶ್ನೆ .1:- 'ಕರಿಸಿದ್ದ' ಕಥನಕವನದ ಕರ್ತೃ ಯಾರು?
ಉತ್ತರ : 'ಕರಿಸಿದ್ದ' ಕಥನಕವನದ ಕರ್ತೃ ಕುವೆಂಪು ಅವರು. ಅವರ ಸಮಗ್ರಕಾವ್ಯಸಂಪುಟ-2 ಕೃತಿಯಿಂದ ಈ ಕಥನಕವನವನ್ನು ಆದುಕೊಳ್ಳಲಾಗಿದೆ.
ಪ್ರಶ್ನೆ . 2:- 'ಕರಿಸಿದ್ದ ಕಥನ ಕವನದ ತಿರುಳೇನು?
ಉತ್ತರ:- ಕರಿಸಿದ್ಧ-ಗಿಡ್ಡಿಯರು ಮಗನನ್ನು ಕಳೆದುಕೊಂಡ ದುರಂತ ಹಾಗೂ ಆ ಬಡವರ ಬವಣೆ 'ಕರಿಸಿದ್ದ ಕಥನ ಕವನದ ತಿರುಳು.
ಪ್ರಶ್ನೆ . 3:- ಕರಿಸಿದ್ದ-ಗಿಡ್ಡಿಯರು ಯಾರು?
ಉತ್ತರ:- ಕರಿಸಿದ್ದ-ಗಿಡ್ಡಿಯರು ದೊಡ್ಡ ಅಣಬೆಯಂಥ ಹುಲ್ಲು ಗುಡಿಸಲೊಂದರ ಬಡ ಸಂಸಾರಗಳು; ಜಾತಿಯಿಂದ ಕೀಳು ಜನಾಂಗದವರು.
ಪ್ರಶ್ನೆ .4:- ಕರಿಸಿದ್ಧ - ಗಿಡ್ಡಿಯರ ವೃತ್ತಿಯೇನು?
ಉತ್ತರ : ಕರಿಸಿದ್ಧ ದನಗಳನ್ನು ಕಾಯುತ್ತಿದ್ದ. ಗಿಡ್ಡಿ ಮನೆಮನೆಗೆ ತಿರುತಿರುಗಿ ದಿನಗೂಲಿ ಮಾಡುತ್ತಿದ್ದಳು.
ಪ್ರಶ್ನೆ .5:- ಕರಿಸಿದ್ಧ - ಗಿಡ್ಡಿಯರ ಊರು ಯಾವುದು?
ಉತ್ತರ:- ಕರಿಸಿದ್ಧ - ಗಿಡ್ಡಿಯರ ಊರು ಕುಪ್ಪಳ್ಳಿ. ತೀರ್ಥಹಳ್ಳಿಯನ್ನು ಕಳೆದು, ತಾಯಿ ತುಂಗೆಯನ್ನು ದಾಟಿ, ಒಂಬತ್ತು ಮೈಲುಗಳ ದೂರದಲ್ಲಿರುವುದೇ ಕುಪ್ಪಳ್ಳಿ.
ಪ್ರಶ್ನೆ 6:- ಕರಿಸಿದ್ಧ - ಗಿಡ್ಡಿಯರ ಕೊರಗು ಏನು?
ಉತ್ತರ:- ಬಹುಕಾಲವಾದರೂ ಮಕ್ಕಳಾಗಲೇ ಇಲ್ಲ ಎನ್ನುವುದು ಕರಿಸಿದ್ಧ - ಗಿಡ್ಡಿಯರ ಕೊರಗು. ಮಕ್ಕಳಿಲ್ಲದವರಿಗೆ ಮಹಾನರಕವಾಗುವುದೆಂಬುದನ್ನು ಅರಿಯದ ಮುಗ್ಧ ದಂಪತಿಗಳವರು.
ಪ್ರಶ್ನೆ 7:- ಕರಿಸಿದ್ಧ-ಗಿಡ್ಡಿಯರು ಮಗನನ್ನು ಪಡೆದದ್ದು ಹೇಗೆ?
ಉತ್ತರ:- ಪ್ರಕೃತಿ ಧರ್ಮವನ್ನು ನಂಬಿ, ಕರ್ಮವನ್ನು ಮಾಡಿ ಕರಿಸಿದ್ದ-ಗಿಡ್ಡಿಯರು ಮಗನನ್ನು ಪಡೆದರು. ಮಗನಿಗೆ ಬೈರನೆಂದು
ಹೆಸರಿಟ್ಟರು.
ಪ್ರಶ್ನೆ 8:- ಬೈರನ ಸಂಗಾತಿ ಯಾರು?
ಉತ್ತರ :- ಬೈರನ ಸಂಗಾತಿ ಹಂಡನಾಯಿ. ಬೈರ ತನ್ನ ಬಡ ತಿಂಡಿಗಳಲ್ಲಿ ಒಂದಿಷ್ಟನ್ನು ಹಂಡನಾಯಿಗೂ ಹಾಕಿ ತಿನ್ನುತ್ತಿದ್ದ.
ಪ್ರಶ್ನೆ 9:- ಕರಿಸಿದ್ದ-ಗಿಡ್ಡಿಯರು ಮಗನ ಬೆಳವಣಿಗೆಯನ್ನು ಕಂಡು ಹೇಗೆ ಹಿಗ್ಗುತ್ತಿದ್ದರು?
ಉತ್ತರ :- ಕರಿಸಿದ್ದ-ಗಿಡ್ಡಿಯರು ಮಗನ ಬೆಳವಣಿಗೆಯನ್ನು ಕಂಡು ಚಂದ್ರನ ಉದಯವನ್ನು ಕಂಡು ಸಂತಸದಿಂದ ಹಿಗ್ಗುವ ಕಡಲಿನಂತೆ ಹಿಗ್ಗುತ್ತಿರಲಿಲ್ಲ. ಮಕ್ಕಳನ್ನುಕಂಡು ಹೆತ್ತವರು ಹಿಗ್ಗಿ ನಲಿಯುವಂತೆ ಹಿಗ್ಗುತ್ತಿದ್ದರು!
ಪ್ರಶ್ನೆ 10:- ಭೈರನ ದುರಂತ ಮರಣ ಹೇಗಾಗಿತು?
ಉತ್ತರ :- ಒಂದು ದಿನ ಕರಿಸಿದ್ಧ ಮೀನು ಹಿಡಿಯಲು ಕೆರೆಗೆ ಭೈರನನ್ನು ಕರೆದೊಯ್ದ. ಕರಿಸಿದ್ಧ ಮೀನು ಹಿಡಿಯುತ್ತಿರುವಾಗ ಬೈರ ಬಿಳಿಯ ಅವಲಹೂವನ್ನು ಕೈಯಿಂದ ಕೀಳಲು ಹೋಗಿ ಕಾಲು ಜಾರಿ ಕೆರೆಯಲ್ಲಿ ಬಿದ್ದು ಮುಳುಗಿ ದುರಂತ ಮರಣವಾಯಿತು
ಐದು ಅಂಕದ ಪ್ರಶೋತ್ತರಗಳು:
ಪ್ರ. 1. ಕರಿಸಿದ್ಧನ ಕಥಾನಕವನ್ನು ವಿವರಿಸಿರಿ.
ಉತ್ತರ :
ಕರಿಸಿದ್ಧನದು ತುಂಬಾ ಕರುಣಾಜನಕವಾದ ದುರಂತಕತೆ. ಬಹುಕಾಲದಿಂದಲೂ ಮಕ್ಕಳಾಗದ ಕೊರಗಿನಲ್ಲಿದ್ದ ಕರಿಸಿದ್ದ-ಗಿಡ್ಡಿಯರು ಪ್ರಕೃತಿ ಧರ್ಮವನ್ನು ನಂಬಿ, ಕರ್ಮವನ್ನು ಮಾಡಿ ಬೈರನೆಂಬ ಮಗನೊಬ್ಬನನ್ನು ಪಡೆಯುತ್ತಾರೆ. ಬೈರನೇನೋ ಗುಡಿಸಲ ಬಡಮಗ ಹೇಗೆ ಬೆಳೆಯಬೇಕೋ ಹಾಗೆ ಬೆಳೆಯುತ್ತಾನೆ. ಮಗನ ಬೆಳವಣಿಗೆಯನ್ನು ಕಂಡು ಕರಿಸಿದ್ದ-ಗಿಡ್ಡಿಯರು ಹಿಗ್ಗುತ್ತಿರುವಾಗಲೇ, ನಡೆಯಬಾರದ ದುರಂತ ನಡೆದು ಹೋಗುತ್ತದೆ. ಒಂದು ದಿನ ಕರಿಸಿದ್ದ ತನ್ನೊಡನೆ ಕೆರೆಗೆ ಮೀನು ಹಿಡಿಯಲು ಮಗ ಬೈರನನ್ನು ಕರೆದೊಯ್ಯುತ್ತಾನೆ. ಕರಿಸಿದ್ದ ಕೆರೆಯಲ್ಲಿ ಮೀನು ಹಿಡಿಯುತ್ತಿರುವಾಗ, ಬೈರ ಬಿಳಿ ಆವಲಹೂವನ್ನು ಕೀಳಲು ಹೋಗಿ ಕಾಲುಜಾರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಕರಿಸಿದ್ದ-ಗಿಡ್ಡಿಯರು ಇದ್ದೊಬ್ಬ ಮಗನನ್ನು ಕಳೆದುಕೊಂಡು ದುಃಖತಪ್ತರಾಗುತ್ತಾರೆ. ಯಮನ ಕರಣಿಕ ಚಿತ್ರಗುಪ್ತನ ವರದಿ ಬೈರನ ದುರಂತ ಸಾವನ್ನು ಸಾಮಾನ್ಯ ಸಾವೆಂಬಂತೆ ಪರಿಗಣಿಸುತ್ತದೆ. ಬಡವರ ಗೋಳನ್ನು ದೇವರೂ ಸಹಿತ ಕೇಳುವುದಿಲ್ಲ - ಎಂಬ ವಾಸ್ತವಸತ್ಯವನ್ನು, ದಿಕ್ಕಿಲ್ಲದ ಬಡವರ ಗೋಳನ್ನು ಕರಿಸಿದ್ಧನ ಈ ಕಥೆ ಜ್ವಲಂತವಾಗಿ ಸೆರೆ ಹಿಡಿದಿದೆ.
ಪ್ರ. 2. ಕರಿಸಿದ್ದ ಅನಾಹುತಕ್ಕೊಳಗಾದ ಬಗೆಯನ್ನು ಚರ್ಚಿಸಿರಿ.
ಉತ್ತರ :-
ಕರಿಸಿದ್ದ ಅನಾಹುತಕ್ಕೊಳಗಾದ ಬಗೆ ತೀರಾ ಆಕಸ್ಮಿಕವಾದುದು. ಒಂದು ದಿನ ಕರಿಸಿದ್ದ ಮೀನು ಹಿಡಿಯಲು ಕೆರೆಗೆ ಮಗ ಬೈರನನ್ನು ಕರೆದುಕೊಂಡು ಹೋಗುತ್ತಾನೆ. ಹಂಡನಾಯಿಯೂ ಅವನ ಜತೆ ಹೋಗುತ್ತದೆ. ಕರಿಸಿದ್ದ ಮೀನು ಹಿಡಿಯುತ್ತಿರುವಾಗ, ಬೈರ ಬಿಳಿ ಆವಲಹೂವನ್ನು ಕೊಯ್ಯಲು ಹೋಗಿ ಕಾಲುಜಾರಿ ಕೆರೆಯಲ್ಲಿ ಬಿದ್ದು ಮುಳುಗಿ ಸಾವನ್ನಪ್ಪುತ್ತಾನೆ. ಮುದಿಯಾದ ಕರಿಸಿದ್ದ ಬಾಯಿ ಬಾಯಿ ಬಡಿದುಕೊಂಡು ಕೆರೆಯಲ್ಲಿ ಮುಳುಮುಳುಗಿ ಮಗನನ್ನು ಮೇಲಕ್ಕೆ ತರುತ್ತಾನೆ. ಹಂಡನಾಯಿ ಕೂಡ ಕೆರೆಗಿಳಿದು, ದಡಕ್ಕಡರಿ, ಬೈರನನ್ನು ಮೂಸುತ್ತ ಬಾಲ ಅಲ್ಲಾಡಿಸುತ್ತದೆ. ಹೀಗೆ, ಕರಿಸಿದ್ದ ಅನಾಹುತಕ್ಕೊಳಗಾಗುತ್ತಾನೆ.
ಪ್ರ. 3. ಬೈರನ ಮರಣದಿಂದ ಹೆತ್ತವರಿಗಾದ ಆಘಾತವನ್ನು ಬಣ್ಣಿಸಿರಿ.
ಉತ್ತರ :-
ಬೈರನ ಮರಣದಿಂದ ಹೆತ್ತವರಿಗಾದ ಆಘಾತ ಅಪಾರವಾದುದು. ಪ್ರಕೃತಿ ಧರ್ಮ-ಕರ್ಮಗಳಿಂದ ಬಹುದಿನಕ್ಕೆ ಪಡೆದ ಇದ್ದೊಬ್ಬ ಮಗನನ್ನು ಕೆರೆಗೆ ಆಹುತಿಕೊಟ್ಟು ಕರಿಸಿದ್ಧ-ಗಿಡ್ಡಿಯರು ಇನ್ನಿಲ್ಲದ ದುಃಖಕ್ಕೆ ಗುರಿಯಾಗುತ್ತಾರೆ. ಮಗನನ್ನು ಕಳೆದುಕೊಂಡು ಕಂಗೆಟ್ಟ ಕರಿಸಿದ್ಧ ತೋಟದಾಚೆಯ ಭೂತರಾಯನಿಗೆ ಅಡ್ಡ ಬಿದ್ದು ಮಗನನ್ನು ಕಾಪಾಡಬೇಕೆಂದು ಬೇಡಿಕೊಳ್ಳುತ್ತಾನೆ. ಆತನ ರೋದನವನ್ನು ಕೇಳಿ ಗಿಡ್ಡಿ ಗುಡಿಸಲಿನಿಂದ ಓಡೋಡಿ ಬಿದ್ದೆದ್ದು ಬರುತ್ತಾಳೆ; ಬೆದರಿ ನೋಡುತ್ತಾಳೆ. ಚೀತ್ಕಾರ ದನಿ ಮಾಡಿ, ಮುಡಿಗೆದರಿ, ಗೋಳಾಡಿ, ಮಣ್ಣೆರಚಿ, ಭೂತವನ್ನು ಬೈಯುತ್ತ, ಬೇಡುತ್ತ ಕಲ್ಲಿನಲ್ಲಿ ತಲೆಕುಟ್ಟಿ ಬೈರನ ಮೇಲೆ ಬಿದ್ದು ದಣಿದು ತಟ್ಟಾಗಿ ಒರಗುತ್ತಾಳೆ. ಹೀಗೆ, ಬೈರನ ಮರಣದಿಂದ ಹೆತ್ತವರಿಗೆ ಸಹಿಸಲಾಗದ ಆಘಾತವಾಗುತ್ತದೆ.
ಪ್ರ. 4. ಬಡವನ ಸಾವು ಸುದ್ದಿಯಾಗದು ಎಂಬುದನ್ನು ಕರಿಸಿದ್ಧ ಕವನದ ಮೂಲಕ ಚರ್ಚಿಸಿರಿ.
ಉತ್ತರ :-
ಬಡವರ ಸಾವು ಸುದ್ದಿಯಾಗದು ಎಂಬುದನ್ನು 'ಕರಿಸಿದ್ಧ' ಕಥನ ಕವನ ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುತ್ತದೆ. ದೊಡ್ಡ ವ್ಯಕ್ತಿ ಅನ್ನಿಸಿಕೊಂಡವನು ಸಹಜವಾಗಿ ಸತ್ತರೂ ಇಡೀ ದೇಶದ ತುಂಬೆಲ್ಲ ಬಹುದೊಡ್ಡ ಸುದ್ದಿಯಾಗಿ ಬಿಡುತ್ತದೆ. ಅದೇ ಬಡವ ಸತ್ತರೆ ಆ ಸುದ್ದಿ ದಿಕ್ಕಿಲ್ಲದ ಸಾಮಾನ್ಯ ಸುದ್ದಿಯಾಗಿ ಬಿಡುತ್ತದೆ. ಇದನ್ನು ಕವಿ ಚಿತ್ರಗುಪ್ತನ ವರದಿಯ ಮೂಲಕ ಅತ್ಯಂತ ಧ್ವನಿಪೂರ್ಣವಾಗಿ ಹೇಳುತ್ತಾನೆ. ಕುಪ್ಪಳಿಯ ಕೆರೆಯಲ್ಲಿ ಭೈರ ಹುಡುಗನು ಬಿದ್ದ..... ಮಡಿದವನಿಗೆ ಮರುಗುವರು ಗಿಡ್ಡಿ ಕರಿಸಿದ್ದರು....ಹಂಡನಾಯಿಯು ಮರುಗಿ ಕಣ್ಣೀರು ಕರೆದಿತ್ತು ಎಂದು ಭೈರನ ಸಾವಿನ ಸುದ್ದಿ ಇತರ ಸಾವಿನ ಸುದ್ದಿಯ ಜತೆ ಒಂದು ಸಾಮಾನ್ಯ ಸುದ್ದಿಯಾಗಿ ಬಿಡುತ್ತದೆ. ಬಡವರ ದುರಂತಕ್ಕೆ ದೇವರೂ ಸಹಿತ ಓಗೊಡಲಾರ ಎಂಬ ವಿಶಿಷ್ಟ ಧ್ವನಿ ಇಲ್ಲಿದೆ.
ಪ್ರಶ್ನೆ 5:- 'ಕರಿಸಿದ್ದ' ಕಥನಕವನದ ಆಶಯನ್ನು ಕುರಿತು ವಿವರಿಸಿ.
ಉತ್ತರ :-
'ಕರಿಸಿದ್ದ' ಕುವೆಂಪು ಅವರ ಪ್ರಸಿದ್ಧ ಕಥನ ಕವನಗಳಲ್ಲಿ ಒಂದು; ಕನ್ನಡ ಸಾಹಿತ್ಯದ ಪ್ರಮುಖ ಕರಣರಸಪ್ರಧಾನ ಕಥನ ಕವನಗಳಲ್ಲಿ ಒಂದು. ಕರಿಸಿದ್ದ-ಗಿಡ್ಡಿಯರ ಒಬ್ಬನೇ ಮಗ ಭೈರ ಕುಪ್ಪಳ್ಳಿಯ ಕೆರೆಯಲ್ಲಿ ಬಿದ್ದು ಮುಳುಗಿ ಸತ್ತ ದುರಂತ ಕಥೆ ಇಲ್ಲಿ ಹೃದಯವಿದ್ರಾವಕವಾಗಿ ಮೂಡಿಬಂದಿದೆ. ಮಾನವತೆಯ ಸೊಂಕೇ ಇಲ್ಲದ ಯಜಮಾನ ಸಂಸ್ಕೃತಿಯಲ್ಲಿ ಕಡುಬಡವರ ದುರಂತಕ್ಕೆ ಯಾವೊಂದೂ ಬೆಲೆಯೇ ಇಲ್ಲ – ಎಂಬುದಕ್ಕೆ ಈ ಕಥನಕವನ ಒಂದು ಜ್ವಲಂತ ನಿದರ್ಶನವಾಗಿದೆ. ಕವಿಯ ಮಾನವತೆ ಇಲ್ಲಿ ತುಂಬಾ ಹೃದಯಸ್ಪರ್ಶಿ ಯಾಗಿ ಅಭಿವ್ಯಕ್ತಿಗೊಂಡಿದೆ. ಸುದೀರ್ಘವಾದ ಈ ಕಥನಕವನದಲ್ಲಿ ಕವಿ ಕರಿಸಿದ್ದ - ಗಿಡ್ಡಿಯರ ಬದುಕಿಗೆ ಮಾನವತೆ ಹಾಗೂ ಮಾನವ ಪ್ರೀತಿಗಳ ನೆಲೆಯಲ್ಲೇ ಸ್ಪಂದಿಸುವುದು ತುಂಬಾ ಔಚಿತ್ಯ ಪೂರ್ಣವಾಗಿದೆ. ಭೂಮಿಯ ಮೇಲಿನ ಬದುಕು ತುಂಬಾ ವಿಚಿತ್ರವಾದುದು. ಯಾವ ಗಳಿಗೆಯಲ್ಲಿ ಯಾವ ದುರಂತ ಕಾದಿದೆಯೋ ಬಲ್ಲವರಾರು? ಅದರಲ್ಲೂ ಸಂತೃಪ್ತಿಯಿಂದ ತಮ್ಮಷ್ಟಕ್ಕೆ ತಾವು ಕಷ್ಟಪಟ್ಟು ದುಡಿದು, ಬದುಕುತ್ತಿರುವ ಬಡವರಿಗಂತೂ ಈ ಬದುಕಿನಲ್ಲಿ ಕಷ್ಟ-ಸಂಕಷ್ಟಗಳ ಪರಂಪರೆಯೇ ಹೆಚ್ಚು. ಅವು ಬಡವರ ಬದುಕನ್ನು ಹಿಡಿದು ಅಲ್ಲಾಡಿಸಿ ಬಿಡುವಂತೆಯೇ ಎದುರುಗೊಳ್ಳುತ್ತವೆ. ಬದುಕುವವರೆಗೂ ಅವನ್ನು ಅವರು ಅನುಭವಿಸಬೇಕಾಗುತ್ತದೆ; ಎದುರಿಸಬೇಕಾಗುತ್ತದೆ. ಅಂಥ ಒಂದು ಕರುಣಾಜನಕ ದುರಂತ ಕಥೆ ಕರಿಸಿದ್ದ-ಗಿಡ್ಡಿಯರದು. ಇದನ್ನು 'ಕರಿಸಿದ್ದ' ಕಥನಕವನ ಕಂಬನಿ ಹನಿಯುವಂತೆ ಸೆರೆಹಿಡಿದು ತೋರಿದೆ. ಬಡವರ ಕಣ್ಣೀರಿಗೆ ಯಾವ ಬೆಲೆಯಿಲ್ಲ ಎಂಬುದಕ್ಕೆ ಚಿತ್ರಗುಪ್ತನ ಕಾಲದೋಲೆಯೇ ಒಂದು ಜೀವಂತ ನಿದರ್ಶನ. ಬಡವರ ಬಗೆಗೆ ಕೊಂಚವೂ ಕರುಣೆಯನ್ನು ತೋರದ ಯಜಮಾನ ಸಂಸ್ಕೃತಿಯ ಕ್ರೌರ್ಯ, ಅಮಾನವೀಯತೆಗಳನ್ನು ಈ ಕವನ ತೀಕ್ಷ್ಮವಾಗಿ ವಿಡಂಬಿಸುತ್ತದೆ. ಮಾನವತೆ, ಮಾನವ ಪ್ರೀತಿಗಳಿಗೆ ಹೆಚ್ಚು ಒತ್ತುಕೊಡುವ ಒಂದು ಶ್ರೇಷ್ಠ ವೈಚಾರಿಕ ಕಥನಕವನವಿದು.
ಹತ್ತು ಅಂಕದ ಪ್ರಶೋತ್ತರಗಳು:
ಪ್ರ . 1. 'ಕರಿಸಿದ್ಧ ಕಥಕವನದ ಸ್ವಾರಸ್ಯವನ್ನು ನಿರೂಪಿಸಿರಿ.
ಅಥವಾ
ಪ್ರ. 2. ಕರಿಸಿದ್ಧ-ಗಿಡ್ಡಿಯರ ದುರಂತ ಕಥೆಯನ್ನು 'ಕರಿಸಿದ್ದ' ಕಥನ ಕವನದ ಹಿನ್ನೆಲೆಯಲ್ಲಿ ವಿವೇಚಿಸಿರಿ.
ಅಥವಾ
ಪ್ರ. 3. ಬೈರನ ಜನನ, ಬಾಲ್ಯ ಬೆಳವಣಿಗೆ ಹಾಗೂ ದುರಂತವನ್ನು ಕುರಿತು ವಿವರಿಸಿ.
ಅಥವಾ
ಪ್ರ. 4. ಕರಿಸಿದ್ದ-ಗಿಡ್ಡಿಯರ ಮಗನ ಪ್ರೀತಿ ಹಾಗೂ ಮಗನ ದುರಂತವನ್ನು 'ಕರಿಸಿದ್ಧ' ಕಥನಕವನ ಹೇಗೆ ನಿರೂಪಿಸಿದೆ? ವಿಶ್ಲೇಷಿಸಿರಿ.
ಅಥವಾ
ಪ್ರ. 5. 'ಕರಿಸಿದ್ದ' ಒಂದು ಕರುಣಾಜನಕ ದುರಂತಕತೆ - ಈ ಮಾತನ್ನು ಸಮರ್ಥಿಸಿರಿ.
ಉತ್ತರ :
ಕುವೆಂಪು ಅವರ 'ಕರಿಸಿದ್ದ' ಕನ್ನಡ ಸಾಹಿತ್ಯದ ಪ್ರಮುಖ ದುರಂತ ಕಥನಕವನಗಳಲ್ಲಿ ಒಂದು. ಬಡವರ ಬದುಕಿಗಾಗಲಿ, ಸಾವಿಗಾಗಲಿ ಏನೊಂದು ಬೆಲೆಯಿಲ್ಲ ಎಂಬುದನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸುವ ಒಂದು ಕಥಾನಕವಿದು. ಮಾನವತೆ ಎಲ್ಲೋ ಕಳೆದು ಹೋಗಿರುವ ದುರಂತವನ್ನು ಈ ಕಥನ ಕವನ ಅಷ್ಟೇ ಪರಿಣಾಮಕಾರಿಯಾಗಿ ಧ್ವನಿಸುತ್ತದೆ. ಕರಿಸಿದ್ದ-ಗಿಡ್ಡಿಯರದು ತುತ್ತು ಗಂಜಿಗೂ ಗತಿಯಿಲ್ಲದ ಬಡಬಾಳು, ಅವರು ಮಗನನ್ನು ಪಡೆಯಬೇಕೆಂಬ ಹಂಬಲ, ಮಗನನ್ನು ಪಡೆದ ಬಗೆ, ಮಗನ ಬೆಳವಣಿಗೆ ಕಂಡ ಅವರ ಸಂತಸ ಹಾಗೂ ಮಗನನ್ನು ಕಳೆದುಕೊಂಡ ಅವರ ದುರಂತ -ಇವೆಲ್ಲ ಇಲ್ಲಿ ವಾಸ್ತವ ನೆಲೆಯ ಮೇಲೆ ತುಂಬಾ ಕರುಣಾಜನಕವಾಗಿ ಚಿತ್ರಿತವಾಗಿವೆ.
ತೀರ್ಥಹಳ್ಳಿ, ತುಂಗೆಯನ್ನು ದಾಟಿ ಒಂಬತ್ತು ಮೈಲು ದೂರದಲ್ಲಿರುವ ಕುಪ್ಪಳ್ಳಿಯಲ್ಲಿ ದೊಡ್ಡ ಅಣಬೆಯಂತೆ ನೆಲದಿಂದ ಮೇಲೆದ್ದ ಹುಲ್ಲು ಗುಡಿಸಲೊಂದರಲ್ಲಿ ಸಂಸಾರಿಯಾಗಿದ್ದ ಕರಿಸಿದ್ದ ಜಾತಿಯಲ್ಲಿ ಕೀಳು ಕುಲದವನು! ಆತನ ಹೆಂಡತಿ ಗಿಡ್ಡಿ. ಕರಿಸಿದ್ದ ದನಗಳನ್ನು ಕಾಯುತ್ತಿದ್ದರೆ, ಗಿಡ್ಡಿ ಮನೆ ಮನೆಗೆ ತಿರುತಿರುಗಿ ದಿನಗೂಲಿ ಮಾಡುತ್ತಿದ್ದಳು. ಬಹುಕಾಲವಾದರೂ ಈ ದಂಪತಿಗಳಿಗೆ ಮಕ್ಕಳಾಗಲೇ ಇಲ್ಲ. ಇವರು ಮಕ್ಕಳಾಗದವರಿಗೆ ಮಹಾನರಕ ಎಂಬುದನ್ನೂ ಅರಿಯದ ಮುಗ್ಧರು. ಧರ್ಮಶಾಸ್ತ್ರವನ್ನಂತೂ ಕೇಳಿಯೇ ಇರಲಿಲ್ಲ. ಪುತ್ರಕಾಮೇಷ್ಠಿಯನ್ನು ಮಾಡಲು ಅವರಿಗೆ ದುಡ್ಡೇ ಇರಲಿಲ್ಲ. ಗಂಜಿಗೇ ಗತಿಯಿಲ್ಲ! ಇನ್ನು ನೈವೇದ್ಯಕ್ಕೆ ಎಲ್ಲಿಂದ ತರಬೇಕು?
ಹೀಗಿರಲು ಕರಿಸಿದ್ದ-ಗಿಡ್ಡಿಯರಿಬ್ಬರೂ ಪ್ರಕೃತಿಧರ್ಮವನ್ನು ನಂಬಿ, ಕರ್ಮವನ್ನು ಮಾಡುತ್ತಾರೆ. ಕಡೆಗೊಂದು ದಿನ ಗಿಡ್ಡಿ ನಡುರಾತ್ರಿ ಕೂಸೊಂದನ್ನು ಹೆತ್ತು ಹಿಗ್ಗುತ್ತಾಳೆ. ಕರಿಸಿದ್ಧ ಸಂತಸದಿಂದ ಹೆಂಡತಿಯ ಶುಶ್ರೂಷೆ ಮಾಡುತ್ತಾನೆ. ಆ ಬಡವ ದಾದಿಯರನ್ನು ಎಲ್ಲಿಂದ ತಂದಾನು! ಹರಳೆಣ್ಣೆ ಹಣತೆಯನ್ನು ಹೊತ್ತಿಸಿ, ಅದರ ಮಬ್ಬಿನಲ್ಲಿ ಮಗುವನ್ನು ಪದ್ಧತಿಯಂತೆ ಮೊರದಲ್ಲಿ ಮಲಗಿಸುತ್ತಾನೆ. ದೆವ್ವಗಳು ಬರದಂತೆ ಹರಕು ಮೆಟ್ಟಿನ ಚೂರನ್ನು ಬಾಗಿಲಿಗೆ ಕಟ್ಟುತ್ತಾನೆ. ಬಾಗಿಲಿನ ಮೂಲೆಯಲ್ಲೆ ಪೊರಕೆಯೊಂದನ್ನು ಇಡುತ್ತಾನೆ! ಬಡತನದ ತೊಟ್ಟಿಲನ್ನು ಸುತ್ತು ಹಾಕಿ, ಭಕ್ತಿಯಿಂದ ಮೂರು ಕಾಸು ತೆಗೆದು ತನ್ನೂರ ತೋಟದಾಚೆಯ ಭೂತನಿಗೆ ಮುಡುಪಾಗಿ ಕಟ್ಟುತ್ತಾನೆ.
ದಂಪತಿಗಳು ಉಲ್ಲಾಸದಿಂದ ಹಿಗ್ಗುತ್ತಾರೆ. ಬೈರನಿಗೆ ಹಾಲಿಲ್ಲ, ಗೀಲಿಲ್ಲ, ಎಣ್ಣೆ ಬೆಣ್ಣೆಗಳಿಲ್ಲ. ಮೊಲೆ ಹಾಲು, ಗಂಜಿಗಳ ಬಲದಿಂದ ಬೈರ ಬೆಳೆಯುತ್ತಾನೆ. ಕರಿಸಿದ್ದ ಮಗನ ಹೆಸರಿಡಲು ಭಟ್ಟರಿಗೆ ಬಿಡಗಾಸು ಕೊಡಲಿಲ್ಲ, ಹುಟ್ಟಿಸಿದ ದೇವರೇ ಜಾತಕವನ್ನು ಬರೆದಿಡುತ್ತಾನೆ! ಅದು ದುರಂತದ ಜಾತಕವೆಂದು ಕರಿಸಿದ್ದ-ಗಿಡ್ಡಿಯರಿಗೇನು ಗೊತ್ತು!
ಬೈರ ಹುಣ್ಣಿಮೆಯ ಚಂದ್ರನಂತಿರಲಿಲ್ಲ. ಕರಿಸಿದ್ದ-ಗಿಡ್ಡಿಯರಿಗೆ ಮುದ್ದಾದ ಮಗನಂತೆ ಇದ್ದ. ಆತ ಚೆಲುವೇ ಇಳೆಗೆ ಬಂದಂತೆ ಇರಲಿಲ್ಲ. ಚೆಂದುಟಿ ಇರಲಿಲ್ಲ. ಆದರೂ ಬೈರ ಕರಿಸಿದ್ದ-ಗಿಡ್ಡಿಯರ ಕಣ್ಣಿಗೆ ಸುಂದರವಾಗಿದ್ದ. ಧೂಳು, ಮಣ್ಣು, ಹಸಿರು, ಕೆಸರುಗಳಲ್ಲಿ ಬಿದ್ದೆದ್ದು ಒರಟಾಗಿ ಕರ್ರಗೆ ಗಟ್ಟಿಮುಟ್ಟಾಗಿ ಮಲೆನಾಡಿನಲ್ಲಿ ಬೆಳೆದ ಬೈರ, ತನ್ನ ಸಂಗಾತಿ ಹಂಡನಾಯಿಯೊಂದಿಗೆ ಚಲ್ಲಾಟವಾಡುತ್ತಾ ಕಾಲಕಳೆಯುತ್ತಿದ್ದ. ತನ್ನ ಬಡತಿಂಡಿಗಳಲ್ಲಿ ಒಂದಿಷ್ಟನ್ನು ಹಂಡ ನಾಯಿಗೆ ಹಾಕಿ ತಿನ್ನುತ್ತಿದ್ದ. ಕರಿಸಿದ್ದ-ಗಿಡ್ಡಿಯರು ಬೇಡವೆಂದರೂ ಬಿಡದೆ, ತನ್ನ ಚಾಪೆಯ ಮೇಲೆ ಅದಕ್ಕೆ ಮಲಗಲು ಜಾಗೆ ಕೊಡುತ್ತಿದ್ದ. ನಾಯಿಯೊಡನೆ ಕೋಗಿಲೆಯನ್ನು ಅಣಕಿಸುವ ಆಟವನ್ನಾಡುತ್ತಿದ್ದ. ಚಿಟ್ಟೆಗಳನ್ನು ಅಟ್ಟುತ್ತಿದ್ದ ಹಂಡನಾಯಿಯ ಮೇಲೆ ಕುಳಿತು ಕುದುರೆ ಮಾಡಿ ಹೋಯೆಂದು ಕೂಗುತ್ತಿದ್ದ. ತಾಯೆದೆಯ ಮೇಲೆ ನಲಿವ ಶಿಶುವಿನಂತೆ, ಹಂಡನಾಯಿಯೊಡನೆ ಹತ್ತಿರದ ಬನಗಳಲ್ಲಿ ಮಲಗುತ್ತಿದ್ದ. ಪಿಕಳಾರ ಹಕ್ಕಿಗಳ ಗೂಡನ್ನು ಅರಸುತ್ತಿದ್ದ.
ಕರಿಸಿದ್ದ-ಗಿಡ್ಡಿಯರ ಮಗ ಬೈರ ಹುಟ್ಟುತ್ತಲೇ ಬುದ್ಧನಾಗಿರಲಿಲ್ಲ. ಆತ ಹಕ್ಕಿಮೊಟ್ಟೆಗಳನ್ನು ಕದಿಯುತ್ತಿದ್ದ. ಇರುವೆಗಳನ್ನು ಅರೆಯುತ್ತಿದ್ದ. ಚಿಟ್ಟೆಗಳ ಬಾಲಕ್ಕೆ ಬಾಳೆನಾರು ಕಟ್ಟಿ, ಹಾರಿಸುತ್ತ ಬೆರಗಾಗಿ ನೋಡುತ್ತಿದ್ದ. ಬಣ್ಣ ಬಣ್ಣದ ಚಿಟ್ಟೆಗಳನ್ನು ಹಿಡಿಹಿಡಿದು ಪೀಡಿಸುತ್ತಿದ್ದ. ಗೂಡಿನಲ್ಲಿ ಹಕ್ಕಿಮರಿಗಳನ್ನು ಕಂಡು, ಅವು ಬಾಯಿ ತೆರೆಯಲು ಸಂತಸದಿಂದ ಆ ಮರಿಗಳಿಗೆ ತಾನೇ ತಾಯಾಗಿ ಹಣ್ಣುಗಳನ್ನು ಹಾಕುತ್ತಿದ್ದ.
ಕರಿಸಿದ್ದ-ಗಿಡ್ಡಿಯರು ಮಗನ ಬೆಳವಣೆಗೆಯನ್ನು ಕಂಡು, ಮಕ್ಕಳನ್ನು ಹೆತ್ತವರು ಹಿಗ್ಗಿ ನಲಿಯುವಂತೆ ನಲಿಯುತ್ತಾರೆ!
ಗಿಡ್ಡಿ ದಿನದಿನವೂ ಬೈಗಿನ ಅಡುಗೆಯನ್ನು ಮುಗಿಸಿ ಬೈರ ಮಗನಿಗೆ ಕತೆ ಹೇಳುತ್ತಿದ್ದಳು. ಬೈರ ಹಂಡನಾಯಿಯ ತಲೆಯನ್ನು ತಟ್ಟುತ್ತ ಕಣ್ಣಿಟ್ಟು, ಬಾಯಿತೆರೆದು ಬೆರಗಾಗಿ ಕೇಳುತ್ತಿದ್ದ. ಗಿಡ್ಡಿ ಪಂಡಿತೆಯಲ್ಲ. ಆಕೆಯ ಕತೆಗಳು ಸಣ್ಣಕತೆಗಳ ಪಂದ್ಯದಲ್ಲಿ ಗೆದ್ದು ಬಹುಮಾನ ಪಡೆದವಲ್ಲ. ಅವು ಹಳ್ಳಿಯರ ಕಲ್ಪನೆಯ ಕತೆಗಳು; ಹಳ್ಳಿಗರಿಗಾಗಿ ಕಟ್ಟಿದ ಕಟ್ಟು ಕತೆಗಳು.
ಬಡ ಕರಿಸಿದ್ಧ - ಗಿಡ್ಡಿಯರು ಬೈರನೊಡಗೂಡಿ ಯಾರೂ ಅರಿಯದ ಮಲೆನಾಡಿನ ಮೂಲೆಯಲ್ಲಿ ನಾಗರಿಕತೆಯ ಸುಳಿಗೆ ಬೀಳದೆ, ಜಗದ ದೊಂಬಿಯ ಗಲಭೆಯನ್ನು ಕೇಳಿ ಬೇಸರಿಸದೆ, ಸಂಸ್ಕೃತಿಯ ಸುಖ-ದುಃಖಗಳಿಗೆಲ್ಲ ದೂರಾಗಿ, ಸಿರಿಗೆ ಕುರುಬದೆ, ಬಡತನಕ್ಕೆ ಹೇಸಿ ಗೋಳಿಡದೆ, ಅತಿಕಾಂಕ್ಷೆ ಅತಿಭೋಗ ಅತ್ಯಾಸೆ ಅತಿಗಳೊಂದಿಲ್ಲದೆ ಮಿತಿಯಿಂದ ಬಡಬಾಳನ್ನು ಬದುಕುತ್ತಾರೆ.
ಹೀಗೆ ಬಾಳಿನ ಹೊನಲು ಹರಿಯುತ್ತಿರಲು, ಒಂದು ದಿನ ಕರಿಸಿದ್ದ ಮೀನು ಹಿಡಿಯಲು ಕೆರೆಗೆ ಬೈರನನ್ನು ಕರೆದೊಯುತ್ತಾನೆ, ಹಂಡನಾಯಿ ಅವನ ಜತೆ ಹೋಗುತ್ತದೆ. ಕರಿಸಿದ್ದ ಮೀನು ಹಿಡಿಯುತ್ತಿರುವಾಗ, ಇತ್ತ ಬೈರ ಬಿಳಿ ಆವಲಹೂವನ್ನು ಕೊಯ್ಯಲೆಂದು ಬಯಸಿ ಕಾಲು ಜಾರಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪುತ್ತಾನೆ. ಮುದಿಯಾದ ಕರಿಸಿದ್ದ ಬಾಯಿಬಾಯಿ ಬಡಿದುಕೊಂಡು ಕೆರೆಯಲ್ಲಿ ಮುಳುಮುಳುಗಿ ಮಗನನ್ನು ಮೇಲಕ್ಕೆ ತರುತ್ತಾನೆ. ಹಂಡನಾಯಿ ಕೂಡ ಕೆರೆಗಿಳಿದು, ದಡಕ್ಕಡರಿ, ಬೈರನನ್ನು ಮೂಸುತ್ತ ಬಾಲ ಅಲ್ಲಾಡಿಸುತ್ತದೆ. ಬೈರನಿಗೆ ಉಸಿರಾಡುತ್ತಿರಲಿಲ್ಲ. ನೀರು ಕುಡಿದು ಹೊಟ್ಟೆ ಉಬ್ಬರಿಸಿತ್ತು. ಕಂಗೆಟ್ಟ ಕರಿಸಿದ್ದ ತೋಟದಾಚೆಯ ಭೂತರಾಯನಿಗೆ ಅಡ್ಡ ಬಿದ್ದು, ಮಗನನ್ನು ಕಾಪಾಡಬೇಕೆಂದು ಬೇಡಿಕೊಳ್ಳುತ್ತಾನೆ. ಗಿಡ್ಡಿ ರೋದನವನ್ನು ಕೇಳಿದೊಡನೆ ಗುಡಿಸಲಿಂದ ಓಡೋಡಿ ಬಿದ್ದೆದ್ದು ಬರುತ್ತಾಳೆ. ಬೆದರಿ ನೋಡುತ್ತಾಳೆ. ಚೀತ್ಕಾರ ದನಿ ಮಾಡಿ, ಮುಡಿಗೆದರಿ ಗೋಳಾಡಿ, ಮಣ್ಣೆರಚಿ, ಭೂತನನ್ನು ಬೈಯುತ್ತ ಬೇಡುತ್ತ ಕಲ್ಲಿನಲ್ಲಿ ತಲೆಕುಟ್ಟಿ, ಬೈರನ ಮೇಲೆ ಬಿದ್ದು ದಣಿದು ತಟ್ಟಾಗಿ ಒರಗುತ್ತಾಳೆ.
ಪ್ರಕೃತಿಯೆಲ್ಲ ದಿನದಂತೆಯೇ ಇತ್ತು. ಆದರೆ ಹಂಡನೆದೆ, ಗಿಡ್ಡಿಯೆದೆ, ಕರಿಸಿದ್ಧನೆದೆಗಳು ಮಾತ್ರ ಬೇರೊಂದು ಲೋಕದಲ್ಲಿದ್ದಂತೆ ತೋರುತ್ತಿದ್ದವು.
ಕರಿಸಿದ್ದ - ಗಿಡ್ಡಿಯರ ಮಗ ಬೈರನ ದುರಂತ ಸಾವು ಯಾರಿಗೂ ಕರುಳು ಕಿತ್ತು ಬರುವ ಸಂಗತಿಯಾಗಿ ತೋರುವುದಿಲ್ಲ; ಬದಲಿಗೆ ಅದೊಂದು ಪತ್ರಿಕೆಗಳಲ್ಲಿನ ವರದಿಯಂತೆ ಸಾಮಾನ್ಯ ಸಂಗತಿಯಾಗಿ ಬಿಡುತ್ತದೆ.
ಪ್ರಸ್ತುತ ಕಥನಕವನ 'ಕರಿಸಿದ್ದ' ಬಡಜನಾಂಗದ ಅಸಹಾಯಕ ಸ್ಥಿತಿ, ಬಡತನದ ಬವಣೆ ಹಾಗೂ ಅವರ ಬದುಕಿನಲ್ಲಿ ಅನಿರೀಕ್ಷಿತ ದುರಂತ ನಡೆದು ಸಂತಸದ ಹೊನಲಿನ ಬಾಳು ದುರಂತದ ಕೊಳವಾಗುವ ಬಗೆ-ಇವನ್ನೆಲ್ಲ '' ಗಿಡ್ಡಿ - ಬೈರರ ದುರಂತದ ಹಿನ್ನೆಲೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ.
======================================
ರ


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ