ನಿಮ್ಮೊಡನಿದ್ದೂ ನಿಮ್ಮಂತಾಗದೆ
ಕೆ. ಎಸ್. ನಿಸಾರ್ ಅಹಮದ್
ಕರ್ತೃ -ಕೃತಿ ಪರಿಚಯ :
ಕನ್ನಡದ ಸುಪ್ರಸಿದ್ಧ ಕವಿಗಳಲ್ಲಿ, ಭಾವಗೀತಾಕಾರರಲ್ಲಿ, ವಿಮರ್ಶಕರಲ್ಲಿ ನಿಸಾರ್ ಅಹಮದ್ ಒಬ್ಬರು. 'ನಿತ್ಯೋತ್ಸವ' ಕವನಸಂಕಲನ ಹಾಗೂ ಧ್ವನಿಸುರುಳಿಗಳ ಮೂಲಕ ಕನ್ನಡಿಗರ ಮನೆಮಾತಾಗಿರುವ ಕೆ. ಎಸ್. ನಿಸಾರ್ ಅಹಮದ್, ಕನ್ನಡ ಭಾವಗೀತಾ ಧ್ವನಿಸುರುಳಿ ಲೋಕವನ್ನು ಪ್ರಪ್ರಥಮವಾಗಿ ಭಾವಗೀತಾಪ್ರಿಯರಿಗೆ ತೆರೆದು ತೋರಿದವರು. ಕನ್ನಡ ಭಾವಗೀತಾ ಧ್ವನಿಸುರುಳಿ ಲೋಕಕ್ಕೆ ಒಂದು ಭದ್ರಬುನಾದಿ ಒದಗಿಸಿದ ಕೀರ್ತಿ ನಿಸಾರ್ ಅವರಿಗೆ ಸಲ್ಲುತ್ತದೆ. ಕೆ. ಎಸ್. ನಿಸಾರ್ ಅಹಮದ್ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿ 1939ರ ಡಿಸೆಂಬರ್ 1 ರಂದು ಜನಿಸಿದರು. ಕೊಕ್ಕರೆ ಹೊಸಹಳ್ಳಿ ಷೇಕ್ ಹೈದರ್ ನಿಸಾರ್ ಅಹಮದ್ - ಇದು ನಿಸಾರ್ ಅಹಮದ್ ಅವರ ಪೂರ್ಣ ಹೆಸರು. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ಬೆಂಗಳೂರು ಹಾಗೂ ಹೊಸಕೋಟೆಗಳಲ್ಲಿ ಪೂರೈಸಿದ ನಿಸಾರ್, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಭೂಗರ್ಭಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿ ಪಡೆದರು. ನಂತರ ಸರ್ಕಾರಿ ಕಾಲೇಜಿನಲ್ಲಿ ಭೂಗರ್ಭಶಾಸ್ತ್ರ ಅಧ್ಯಾಪಕರಾಗಿ ವೃತ್ತಿಜೀವನ ಪ್ರಾರಂಭಿಸಿದ ನಿಸಾರ್ ಬೆಂಗಳೂರು, ಚಿತ್ರದುರ್ಗ, ಶಿವಮೊಗ್ಗ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸಿದರು. ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಮಂಡಳಿಯ ಸದಸ್ಯರಾಗಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ನಿಸಾರ್ ಕಾರ್ಯನಿರ್ವಹಿಸಿದ್ದಾರೆ.
ಕೃತಿಗಳು :
'ಮನಸು ಗಾಂಧಿ ಬಜಾರು', 'ನೆನೆದವರ ಮನದಲ್ಲಿ', 'ಸಂಜೆ ಐದರ ಮಳೆ', 'ಸುಮುಹೂರ್ತ', 'ನಾನೆಂಬ ಪರಕೀಯ', 'ನಿತ್ಯೋತ್ಸವ', 'ಆകാശಕ್ಕೆ ಸರಹದ್ದುಗಳಿಲ್ಲ', 'ಸ್ವಯಂ ಸೇವೆಯ ಗಿಳಿಗಳು', 'ಅನಾಮಿಕ ಆಂಗ್ಲರು', 'ನವೋಲ್ಲಾಸ' - ಮುಂತಾದವು ನಿಸಾರರ ಕೆಲ ಪ್ರಮುಖ ಕವನಸಂಕಲನಗಳು. 'ಇದು ಬರಿ ಬೆಡಗಲ್ಲೊ ಅಣ್ಣ', 'ಮನದೊಂದಿಗೆ ಮಾತು', 'ಹಿರಿಯರು ಹರಿಸಿದ ದಾರಿ', 'ಅಚ್ಚುಮೆಚ್ಚು' ಮುಂತಾದವು ನಿಸಾರರ ವಿಮರ್ಶಾಕೃತಿಗಳು. 'ಎ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್', 'ಒಥೆಲ್ಲೋ' - ಇವು ನಿಸಾರರ ಶೇಕ್ಸ್ಪಿಯರ್ ನಾಟಕಗಳ ಅನುವಾದಗಳು. 'ರಷ್ಯನ್ ಕಥೆಗಳು', 'ಪಾಬ್ಲೊ ನೆರುಡಾನ ಪದ್ಯಗಳು' - ಇವು ಇವರ ಇತರ ಅನುವಾದಿತ ಕೃತಿಗಳು. 'ಹಕ್ಕಿಗಳು', 'ಶಿಲೆಗಳು ಖನಿಜಗಳು', 'ಪುಟ್ಟ ಸಂತರು ಮತ್ತು ಕಲಿಗಳು' ಇವು ನಿಸಾರರ ಸಂಪಾದಿತ ಕೃತಿಗಳು.
ಪ್ರಶಸ್ತಿಗಳು:
ನಿಸಾರರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಅವುಗಳಲ್ಲಿ 'ರಾಜ್ಯೋತ್ಸವ ಪ್ರಶಸ್ತಿ', 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ', 'ಗೊರೂರು ಪ್ರಶಸ್ತಿ', 'ನಾಟಕ ಅಕಾಡೆಮಿ ಪ್ರಶಸ್ತಿ', 'ದೇಜಗೌ ಟ್ರಸ್ಟ್ನ ವಿಶ್ವಮಾನವ ಪ್ರಶಸ್ತಿ', 'ಹಂಪಿ ಕನ್ನಡ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪ್ರಶಸ್ತಿ' ಪ್ರಮುಖವಾದವು. ನಿಸಾರರು 2005ರಲ್ಲಿ ಶಿವಮೊಗ್ಗದಲ್ಲಿ ನಡೆದ 73 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಮೊತ್ತಮೊದಲ ಬಾರಿಗೆ 'ನಿತ್ಯೋತ್ಸವ' ಧ್ವನಿಸುರುಳಿಯನ್ನು ಹೊರತಂದು, ಕನ್ನಡದಲ್ಲಿ ಭಾವಗೀತಾ ಧ್ವನಿಸುರುಳಿಲೋಕವನ್ನು ಸ್ಥಾಪಿಸಿದ ಕೀರ್ತಿ ನಿಸಾರ್ ಅವರದು.
ತಿರುಳು :
ನಿಸಾರ್ ಅಹಮದರ ಪ್ರಮುಖ ಕವನಗಳಲ್ಲಿ 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನವೂ ಒಂದು. ಅಲ್ಪಸಂಖ್ಯಾತ ಸಮುದಾಯದಿಂದ ಬಂದ ನಿಸಾರ್, ಅಲ್ಲಿನ ತಲ್ಲಣಗಳನ್ನು ತಮ್ಮ ಕಾವ್ಯದ ನೇಯ್ಗೆಯಾಗಿಸಿಕೊಂಡವರು. ಇಂಥ ತಲ್ಲಣಗಳನ್ನು ಒಳನೇಯ್ಕೆಯಾಗಿಸಿಕೊಂಡು ಸಮರ್ಥವಾಗಿ ಅಭಿವ್ಯಕ್ತಿ ಪಡೆದ ಕವನ 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಎಂಬುದು. ವ್ಯಕ್ತಿ ತನ್ನ ನೆಲೆಯಲ್ಲೇ ತಾನು ಪರಕೀಯನಾಗಿ ಬದುಕುವಂತಾದ ಸ್ಥಿತಿಯನ್ನು ಅತ್ಯಂತ ಧ್ವನಿಪೂರ್ಣವಾಗಿ ನಿರೂಪಿಸುವ ಕವನವಿದು. ನಮ್ಮ ಸುತ್ತಮುತ್ತಲಿನವರೊಂದಿಗಿದ್ದರೂ, ಅವರಲ್ಲಿ ಒಬ್ಬನಾಗಿ, ಅವರಂತಾಗಿ ಬೆರೆಯುವ ಬಗೆ ಎಷ್ಟು ಕಷ್ಟದ್ದು ಎಂಬುದನ್ನು ಈ ಕವನ ಪರಿಣಾಮಕಾರಿಯಾಗಿ ಪ್ರತಿಪಾದಿಸಿದೆ. ಈ ನೆಲದಲ್ಲಿ ಬೇರೂರಿ ಬೆಳೆದರೂ, 'ಬೇರೆ' ಎನಿಸಿಕೊಳ್ಳುವ, 'ಪರಕೀಯ'ನೆನಿಸಿಕೊಳ್ಳುವ ಸಂಕಟ ಎಷ್ಟು ಅಸಹನೀಯವಾದುದು ಎಂಬುದನ್ನೂ ಕವಿ ಇಲ್ಲಿ ಸ್ವಾನುಭವದಿಂದ ಚಿತ್ರಿಸುತ್ತಾನೆ. ಇಂದು ಮನುಷ್ಯ ಜಾತಿಗೊಂದೊಂದು ಚಿಹ್ನೆ-ಲಾಂಛನವನ್ನು ಸೃಷ್ಟಿಸಿಕೊಂಡು ಅವುಗಳಲ್ಲಿ ಗುಲಾಮನಾಗಿ ಮನುಷ್ಯ-ಮನುಷ್ಯರ ಮಧ್ಯೆ ಭೇದದ ಗೋಡೆ ನಿರ್ಮಿಸಿದ್ದಲ್ಲದೆ, ತನ್ನನ್ನೇ ತಾನು ಗುರುತಿಸಿಕೊಳ್ಳದಷ್ಟು 'ಪರಕೀಯ'ನಾಗಿಬಿಟ್ಟಿದ್ದಾನೆ. ಮನುಷ್ಯನ ಈ ಸ್ಥಿತಿ ಮಾನವ ಬದುಕನ್ನೇ ಮಸಣವಾಗಿಸಿಬಿಟ್ಟಿದೆ. ಈ ಪ್ರಸಂಗವನ್ನು ಪ್ರಸ್ತುತ ಕವನ ಅರ್ಥವತ್ತಾಗಿ ಸೆರೆಹಿಡಿದಿದೆ.
ಸರಳಾನುವಾದ :
1. ನಿಮ್ಮೊಡನಿದ್ದೂ ನಿಮ್ಮಂತಾಗದೆ, ಜಗ್ಗಿದ ಕಡೆ ಬಾಗದೆ, ನಾನು ನಾನೇ ಆಗಿ, ಈ ನೆಲದಲ್ಲಿ ಬೀಗಿ ಬೇರೂರಿದ್ದರೂ ಪರಕೀಯವಾಗಿ ತಲೆಯೆತ್ತುವುದಿದೆ ನೋಡಿ - ಅದು ಬಲು ಕಷ್ಟದ ಕೆಲಸ.
2. ನಿಮ್ಮ ವೃತ್ತದಲ್ಲಿ ಉನ್ಮತ್ತರಾದ ನಿಮ್ಮ ಕುಡಿತ-ಕುಣಿತ-ಕೂಟಗಳು ನಮ್ಮನ್ನು ಕೆಣಕಿ ಕುಣಿಕೆ ಎಸೆದಿದ್ದರೂ, ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ, ನಿಮ್ಮೆಡೆಗೆ ಸಂಯಮವನ್ನೇ ಪೋಷಿಸಿ ಸಾಕುತ್ತ ರೇಖೆಯಲ್ಲೇ ಡೊಂಬರಾಟ ನಡೆಸುವುದಿದೆ ನೋಡಿ - ಅದು ಬಲು ಕಷ್ಟದ ಕೆಲಸ.
3. ಒಳಗೊಳಗೆ ಬೇರು ಕೊಯ್ದು ಲೋಕದೆದುರಲ್ಲಿ ನೀರು ಹೊಯ್ದು ನನ್ನನ್ನು ಸಲಹುವ ನಿಮ್ಮ ಕಪಟ ಗೊತ್ತಿದ್ದರೂ, ಗೊತ್ತಿಲ್ಲದಂತೆ ನಟಿಸಿ, ಚಕಾರವೆತ್ತದೆ ನಿಮ್ಮೊಡನೆ ಕಾಫಿ ಹೀರಿ, ಪೇಪರ್ ಓದಿ, ಹರಟೆ ಹೊಡೆದು ಬಾಳು ತಳ್ಳುವುದಿದೆ ನೋಡಿ - ಅದು ಬಲು ಕಷ್ಟದ ಕೆಲಸ.
4. ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಸಂಶಯದ ಬೆಕ್ಕು ಪಂಜನ್ನೆತ್ತಿ ನನ್ನ ನಂಬಿಕೆ-ನಿಯತ್ತು-ಹಕ್ಕು, ಕೊನೆಗೆ ಸಾಚಾತನವನ್ನೂ ಪರಚಿ, ಕಣ್ಣಿಗೆ ಒತ್ತಿ ನೋವು ತುಂಬಿದರೂ, ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳನ್ನು ನನ್ನೆದುರಿನಲ್ಲೇ ತನಿಖೆ ಮಾಡುವ ಕ್ಷಣವನ್ನು ನಸುನಗುತ್ತ ಎದುರಿಸುವುದು ಇದೆಯಲ್ಲ - ಅದು ಬಲು ಕಷ್ಟದ ಕೆಲಸ.
ಹತ್ತು ಅಂಕದ ಪ್ರಶೋತ್ತರಗಳು
ಪ್ರಶ್ನೆ 1. 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನದ ಸ್ವಾರಸ್ಯವನ್ನು ನಿರೂಪಿಸಿರಿ.
(ಅಥವಾ)
ಪ್ರಶ್ನೆ 2. ಮಾನವತೆಯೇ ಇಲ್ಲದ ಮನುಷ್ಯರ ನಡುವೆ ಮನುಷ್ಯ ಪರಕೀಯವಾಗಿ ಬದುಕುತ್ತಿರುವ ಅನಿವಾರ್ಯ ಸ್ಥಿತಿಯನ್ನು ಕವಿ ನಿರೂಪಿಸುವುದು ಹೇಗೆ? ವಿವೇಚಿಸಿರಿ.
(ಅಥವಾ)
ಪ್ರಶ್ನೆ 3. ಮಾನವತೆ ಮಾಯವಾದ ಇಂದಿನ ವಾತಾವರಣದಲ್ಲಿ ಮನುಷ್ಯ ಅನಾಥನಾಗಿ, ಪರಕೀಯನಾಗಿ ಬದುಕುತ್ತಿರುವುದನ್ನು 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನ ಹೇಗೆ ಪ್ರತಿಪಾದಿಸುತ್ತದೆ? ವಿಶ್ಲೇಷಿಸಿರಿ.
(ಅಥವಾ)
ಪ್ರಶ್ನೆ 4. ಮನುಷ್ಯ ತನ್ನ ಸುತ್ತಮುತ್ತಲಿನವರೊಂದಿಗಿದ್ದೂ, ಅವರೊಂದಿಗೆ ಹೊಂದಿಕೊಳ್ಳಲಾಗದೆ ಪರಕೀಯನಾಗಿ ಬದುಕಬೇಕಾದ ಅನಿವಾರ್ಯತೆಯನ್ನು ಕವನ ಹೇಗೆ ಪ್ರತಿಪಾದಿಸಿದೆ? ವಿವೇಚಿಸಿರಿ.
(ಅಥವಾ)
ಪ್ರಶ್ನೆ 5. ತಮ್ಮದಷ್ಟೇ ಸಾಧಿತವಾಗಬೇಕೆನ್ನುವ ಸ್ವಾರ್ಥಜನರ ಮಧ್ಯೆ ವ್ಯಕ್ತಿ ಪರಕೀಯನಾಗಿ ಬದುಕುವಂತಾದ ಮನೋವ್ಯಥೆಯನ್ನು 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನ ಹೇಗೆ ಕಟ್ಟಿಕೊಡುತ್ತದೆ? ವಿವೇಚಿಸಿರಿ.
ಉತ್ತರ : 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನ ಮನುಷ್ಯನ ಪರಕೀಯತೆಯ ಅನಿವಾರ್ಯತೆಯನ್ನು ಕುರಿತ ನಿಸಾರರ ಒಂದು ವಿಶಿಷ್ಟ ಕವನ. ನಯವಂಚನೆಯ ಇಂದಿನ ವಾತಾವರಣದಲ್ಲಿ ವ್ಯಕ್ತಿ-ವ್ಯಕ್ತಿಗಳ ನಡುವೆ ಸಂಬಂಧ ಉಳಿಯದೆ ಹೋಗಿದೆ. ಮನುಷ್ಯ ಕಲಿತಷ್ಟೂ ನಯವಂಚಕನಾಗಿ ಬೆಳೆಯುತ್ತಿದ್ದಾನೆ; ಮಾನವತೆಯಿಂದ ದೂರವಾಗುತ್ತಿದ್ದಾನೆ. ಇನ್ನೊಬ್ಬರ ಬಗೆಗೆ व्यंग्य (ವ್ಯಂಗ್ಯ), ಕಟಕಿ, ವಿಡಂಬನೆ ಮಾಡುವುದರಲ್ಲಿ ಕಾಲಕಳೆಯುವಂತಹ ಸ್ವಾರ್ಥಪರನಾಗಿದ್ದಾನೆ. ಇಂಥವರ ಮಧ್ಯೆ ವ್ಯಕ್ತಿ ಪರಕೀಯನಾಗಿ ಬಾಳಬೇಕಾದ ಅನಿವಾರ್ಯತೆ, ತಳಮಳ, ಮನೋವ್ಯಥೆ, ಸಂಕಟಗಳನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುವ ಕವನವಿದು.
ವ್ಯಕ್ತಿ ಇಂದು ತುಂಬಾ ಸ್ವಾರ್ಥಿಯಾಗಿದ್ದಾನೆ, ನಯವಂಚಕನಾಗಿದ್ದಾನೆ. ತಮ್ಮೊಂದಿಗೆ ಬದುಕುತ್ತಿರುವ ಇನ್ನೊಬ್ಬರನ್ನು ಜಗ್ಗಿ ಬಾಗಿಸಬೇಕೆನ್ನುವುದೇ ಇಂದಿನ ಮನುಷ್ಯನ ಸ್ವಭಾವವಾಗಿಬಿಟ್ಟಿದೆ. ಇಂಥ ಜನರ ಮಧ್ಯದಲ್ಲಿದ್ದು ಇಂಥವರಂತಾಗದ ಮನುಷ್ಯನ ಸ್ಥಿತಿ ಬಹು ಕಷ್ಟದ್ದು. ನಾನು ನಾನೇ ಆಗಿ ಉಳಿಯುವುದೆಂದರೆ ಇಲ್ಲಿ ಬಲು ಘೋರ. ಆದಾಗ್ಯೂ ನಾನು ನಾನೇ ಆಗಿ, ಈ ನೆಲದಲ್ಲೇ ಬೀಗಿ ಬೇರೂರಿದರೂ ಪರಕೀಯವಾಗಿ ಬಾಳಬೇಕಾದ ಅನಿವಾರ್ಯತೆ ತಪ್ಪದು! ನಾನು ನಾನೇ ಆಗಿ ಬೀಗಿ ಬೇರೂರಿ ಬೆಳೆದರೂ ಅಥವಾ ನನ್ನ ಕಾಲ ಮೇಲೆ ನಿಂತು ತನ್ನತನವನ್ನು ಉಳಿಸಿಕೊಂಡರೂ ಪರಕೀಯವಾಗಿ ತಲೆಯೆತ್ತುವ ಕಷ್ಟ ತಪ್ಪಿದ್ದಲ್ಲ. ಇಂಥ ಕರ್ಮ ಬಲು ಕಷ್ಟದ್ದು. ಸ್ವಾರ್ಥಪರವಾದ ಇಂದಿನ ವಾತಾವರಣದಲ್ಲಿ ವ್ಯಕ್ತಿ ತನ್ನನ್ನು ತಾನು ಗುರುತಿಸಿಕೊಳ್ಳುವುದು ಎಷ್ಟು ಕಷ್ಟದ್ದಾಗಿದೆ, ಪರಕೀಯನಾಗಿ ತಲೆಯೆತ್ತಲಾಗದೆ ಸ್ವತಂತ್ರವಾಗಿ ಬದುಕುವುದು ಎಷ್ಟು ದುಸ್ತರವಾಗಿದೆ ಎಂಬುದನ್ನು ಕವನ ಅತ್ಯಂತ ಧ್ವನಿಪೂರ್ಣವಾಗಿ ನಿರೂಪಿಸುತ್ತದೆ.
ಇಂದು ಕುಡಿತ, ಕುಣಿತ, ಕೂಟಗಳು ಸರ್ವಸಾಮಾನ್ಯವಾಗಿಬಿಟ್ಟಿವೆ. ಕುಡಿತದಿಂದ ಉನ್ಮತ್ತರಾದ ಒಂದು ಪಡೆಯೇ ಅಲ್ಲಲ್ಲಿ ನಿರ್ಮಾಣವಾಗಿದೆ! ಇಂಥ ಉನ್ಮತ್ತ ಜನರ ವೃತ್ತದಲ್ಲಿ ಬದುಕುವ ಅನಿವಾರ್ಯತೆ ಬಹು ಕಷ್ಟದ್ದೇ. ಈ ಉನ್ಮತ್ತರ ಕುಡಿತ, ಕುಣಿತದ ಕೂಟಗಳು ನಮ್ಮನ್ನು ಕೆಣಕಿ ಕುಣಿಕೆ ಎಸೆಯುತ್ತಿವೆ. ಆದಾಗ್ಯೂ ಇಲ್ಲಿ ಪ್ರತಿಭಟಿಸುವಂತಿಲ್ಲ. ಪ್ರತಿಭಟಿಸದೆ ಪಂಚೇಂದ್ರಿಯಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದೇ ಕ್ಷೇಮ. ಉನ್ಮತ್ತ ವೃತ್ತ ಕೆಣಕಿ ಕುಣಿಕೆ ಎಸೆದರೂ, ಪಂಚೇಂದ್ರಿಯಗಳಿಗೆ ಲಗಾಮು ಜಡಿದು ಜಾರಿಕೊಳ್ಳುವುದೇ ಸರಿ. ಆದರೆ, ಈ ಉನ್ಮತ್ತ ವೃತ್ತ ಬಿಡಬೇಕಲ್ಲ! ಹೀಗಾಗಿ, ಪಂಚೇಂದ್ರಿಯಗಳಿಗೆ ಲಗಾಮು ಜಡಿದು ಜಾರಲಾಗದೆ ಅವರ ಸಂಯಮವನ್ನೇ ಪೋಷಿಸಿ ಸಾಕುವುದು ಅನಿವಾರ್ಯವಾಗುತ್ತದೆ. ಈ ಸಂಯಮದ ರೇಖೆಯಲ್ಲೇ ದೊಂಬರಾಟ ನಡೆಸಬೇಕಾಗುತ್ತದೆ. ಈ ಸ್ಥಿತಿಯೇನಿದೆಯಲ್ಲ ಇದೂ ಬಲು ಕಷ್ಟವೇ.
ಇಂದು ವ್ಯಕ್ತಿಗೆ ಕಪಟವೇ ಬಹುದೊಡ್ಡ ಆಸ್ತಿಯಾಗಿದೆ, ಗುಣವಾಗಿದೆ. ಒಳಗೊಳಗೆ ಬೇರು ಕೊಯ್ಯುವುದು, ಜನರೆದುರು ಹೊರಗೆ ನೀರು ಹೊಯ್ಯುವುದು - ಈ ಕಪಟ ಇಂದು ಮನುಷ್ಯನ ಸಹಜ ಗುಣವಾಗಿಬಿಟ್ಟಿದೆ; ಜೀವನ ವಿಧಾನವಾಗಿಬಿಟ್ಟಿದೆ. ಈ ಕಪಟ ನಮ್ಮನ್ನು ಸಲಹುವ ಒಂದು ಚೆಲ್ಲಾಟವಾಗಿರುವುದು ಬಹುದೊಡ್ಡ ದುರಂತ. ಒಳಗೊಳಗೆ ಬೇರು ಕೊಯ್ದು, ಲೋಕದೆದುರು ನೀರು ಹೊಯ್ದು ಈ ಜನ ನಮ್ಮನ್ನು ಸಲಹುವ ಕಪಟ ನಮಗೂ ಗೊತ್ತಿದೆ! ಆದರೆ, ನಾವೇನೂ ಮಾಡಲಾರದವರಾಗಿದ್ದೇವೆ ಅಥವಾ ಅಸಹಾಯಕರಾಗಿದ್ದೇವೆ. ಈ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸುತ್ತಿದ್ದೇವೆ, ಚಕಾರವೆತ್ತದೆ ಈ ಕಪಟಿಗಳೊಡನೆ ಕಾಫಿ ಹೀರುತ್ತಿದ್ದೇವೆ, ಪೇಪರ್ ಓದುತ್ತಿದ್ದೇವೆ, ಹರಟೆ ಹೊಡೆಯುತ್ತಿದ್ದೇವೆ. ಹೀಗೆ ಇಂಥವರೊಂದಿಗೆ ಅನಿವಾರ್ಯವಾಗಿ ಬಾಳುವುದಿದೆಯಲ್ಲ - ಇದು ಬಲು ಕಷ್ಟದ ಕೆಲಸ.
ಇಂಥ ಕಪಟಿಗಳ ಮಾತುಗಳಲ್ಲಿ ನಮ್ಮನ್ನೆಲ್ಲ ಪೀಡಿಸುವ, ಕಾಡಿಸುವ, ಪರಚುವ ಸಂಶಯದ ಬೆಕ್ಕು ಹುದುಗಿದೆ. ಈ ಕಪಟ ಜನಕ್ಕೆ ಇತರರ ಬಗೆಗೆ ನಂಬಿಕೆಯೆಂಬುದಿಲ್ಲ - ಬರೀ ಸಂಶಯ ಬುದ್ಧಿ! ಹೀಗಾಗಿ, ಇವರ ಮಾತುಗಳಲ್ಲಿ ಹುದುಗಿದ ಬೆಕ್ಕು ಸಂಶಯದ ಪಂಜನ್ನೆತ್ತಿ ನಮ್ಮ ನಂಬಿಕೆ, ನಿಯತ್ತು, ಹಕ್ಕುಗಳನ್ನು ಹಾಗೂ ಕೊನೆಗೆ ನಮ್ಮ ಸಾಚಾತನವನ್ನೂ ಪರಚಿ, ಕಣ್ಣಿಗೆ ಒತ್ತಿ ನೋವು ತುಂಬುತ್ತಿದೆ; ರಕ್ತ ಬರಿಸುತ್ತಿದೆ. ಅಷ್ಟೇ ಅಲ್ಲ, ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳನ್ನು ನಮ್ಮೆದುರಿನಲ್ಲೇ ತನಿಖೆ ಮಾಡುತ್ತದೆ ಈ ಸಂಶಯದ ಬೆಕ್ಕು. ಕಪಟ ಮನುಷ್ಯನ ಸ್ವಭಾವವನ್ನು ಸಂಶಯದ ಬೆಕ್ಕಿಗೆ ಕವಿ ಪ್ರತಿಮಿಸಿದ್ದು ಇಲ್ಲಿ ತುಂಬಾ ಔಚಿತ್ಯಪೂರ್ಣವಾಗಿದೆ. ಏಕೆಂದರೆ, ಕಪಟಿಗಳು ಮಾಡುವುದು ಇಂತಹುದೇ ಕಾರ್ಯವನ್ನು! ಈ ಕಪಟಜನ ಒಳಗೊಳಗೆ ಹೀಗೆ ಹಿಂಸೆ ಕೊಟ್ಟು, ಹೊರಗೆ ರಾಷ್ಟ್ರೀಯತೆಯ ಐಕ್ಯ ಸಾಧಿಸುವ ಸೋಗು ಹಾಕುವ ಜನ. ಇದು ರಾಷ್ಟ್ರದ ದುರಂತ! ಆದಾಗ್ಯೂ, ಇಂಥ ಹಿಂಸೆಯ ಕ್ಷಣವನ್ನು ನಸುನಗುತ್ತ ಎದುರಿಸುತ್ತಿದ್ದೇವಲ್ಲ - ಇದು ಬಹು ಕಷ್ಟದ ಕೆಲಸ. ಹೀಗೆ, ವ್ಯಕ್ತಿ ತನ್ನವರ ಮಧ್ಯದಲ್ಲಿದ್ದೂ ಅವರಂತಾಗದೆ ತಾನು ತಾನೇ ಆಗಿ ಬದುಕಿದರೂ ಅನಿವಾರ್ಯವಾಗಿ ಪರಕೀಯನಾಗಿ ಬಾಳಬೇಕಾದ ನೋವಿನ ಸಂಗತಿಯನ್ನು, ದುರಂತವನ್ನು ಈ ಕವನ ಅತ್ಯಂತ ಧ್ವನಿಪೂರ್ಣವಾಗಿ ನಿರೂಪಿಸುತ್ತದೆ.
ಐದು ಅಂಕದ ಪ್ರಶೋತ್ತರಗಳು
ಪ್ರಶ್ನೆ 1. 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನದ ತಿರುಳು ಅಥವಾ ಆಶಯವನ್ನು ಕುರಿತು ವಿವರಿಸಿ.
ಉತ್ತರ : 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವಿ ನಿಸಾರ್ ಅಹಮದ್ ಅವರ ಒಂದು ವಿಶಿಷ್ಟ ಕವನ. ವ್ಯಕ್ತಿ ತನ್ನತನವನ್ನು ಉಳಿಸಿಕೊಂಡು ಬಾಳುವುದು ಅಥವಾ ತಾನು ತಾನಾಗಿಯೇ ಬಾಳುವುದು ಎಷ್ಟು ಕಷ್ಟವೆಂಬುದನ್ನೂ ಹಾಗೂ ಪರಕೀಯನಾಗಿ ಬಾಳುವುದು ತಪ್ಪದಂತಾದಾಗ ವ್ಯಕ್ತಿ ಅನುಭವಿಸುವ ಮನೋವ್ಯಥೆಯನ್ನೂ ಈ ಕವನ ಅತ್ಯಂತ ಧ್ವನಿಪೂರ್ಣವಾಗಿ ಪ್ರತಿಪಾದಿಸಿದೆ. ಸಮಕಾಲೀನ ವಾತಾವರಣ ಎಷ್ಟು ಕಪಟವಾಗಿದೆ ಎಂಬುದಕ್ಕೆ ಈ ಕವನ ಒಂದು ಜ್ವಲಂತ ನಿದರ್ಶನ.
ಇன்று ವ್ಯಕ್ತಿ ತನ್ನಷ್ಟಕ್ಕೆ ತಾನು ಬದುಕುವುದೂ ಕಷ್ಟವಾಗಿದೆ. ಏಕೆಂದರೆ, ಆತನ ಸುತ್ತಮುತ್ತ ಕಪಟ ಜನರ ವೃತ್ತವೇ ಸುತ್ತುವರಿದಿದ್ದು, ಈ ಜನ ಆತನನ್ನು ತಮ್ಮ ಕಡೆಗೆ ಜಗ್ಗುತ್ತಲೇ ಇರುತ್ತದೆ; ಬಾಗಿಸಿಕೊಳ್ಳುತ್ತಲೇ ಇರುತ್ತದೆ. ಇಂಥವರೊಡನಿದ್ದೂ ಇವರಂತಾಗದಿದ್ದರೆ ಬದುಕುವುದು ಬಲು ಕಷ್ಟ. ಆದಾಗ್ಯೂ ಇವರಂತಾಗದೆ, ಜಗ್ಗಿದ ಕಡೆ ಬಾಗದೆ ತಾನು ತಾನೇ ಆಗಿ ಈ ನೆಲದಲ್ಲಿ ಬೀಗಿ ಬೇರೂರಿದ್ದರೂ ಇವರ ಮಧ್ಯೆ ಪರಕೀಯನಾಗಿ ತಲೆಯೆತ್ತುವುದು ತಪ್ಪದು. ಇದು ಬಲು ಕಷ್ಟದ ಕೆಲಸ. ಉನ್ಮತ್ತ ಕಪಟಿಗಳ ಕುಡಿತ, ಕುಣಿತ, ಕೂಟಗಳು ನಮ್ಮನ್ನು ಕೆಣಕಿ ಕುಣಿಕೆ ಎಸೆಯುತ್ತಿದ್ದರೂ ಪಂಚೇಂದ್ರಿಯಗಳಿಗೆ ಲಗಾಮು ಜಡಿದು ಬದುಕುವುದು ಅನಿವಾರ್ಯವಾಗಿದೆ. ಆದರೂ ಈ ಕಪಟಿಗಳಿಂದ ಜಾರುವುದು ಕಷ್ಟ. ಈ ಕಪಟಿಗಳ ಸಂಯಮವನ್ನು ಪೋಷಿಸುವುದು, ಈ ಸಂಯಮವನ್ನೇ ಸಾಕುವುದು, ಸಂಯಮದ ರೇಖೆಯಲ್ಲೇ ಡೊಂಬರಾಟ ಆಡುವುದು ಅನಿವಾರ್ಯವಾಗಿದೆ. ಒಳಗೊಳಗೆ ಬೇರು ಕೊಯ್ದು ಲೋಕದೆದುರು ನೀರು ಹೊಯ್ದು ನಮ್ಮನ್ನು ಸಲಹುವ ಇವರ ಕಪಟ ಗೊತ್ತಿದ್ದರೂ ಚಕಾರವೆತ್ತದೆ ಅವರೊಡನೆ ಕಾಫಿ ಹೀರಿ, ಪೇಪರ್ ಓದಿ, ಹರಟೆ ಹೊಡೆದು ಬಾಳು ತಳ್ಳುವುದು ನಿಜಕ್ಕೂ ಬಲು ಕಷ್ಟದ ಕೆಲಸವೇ. ಮಾತುಗಳಲ್ಲಿ ಸಂಶಯದ ಬೆಕ್ಕನ್ನು ಹುದುಗಿಸಿದ ಈ ಕಪಟಜನ, ನಮ್ಮ ನಂಬಿಕೆ, ನಿಯತ್ತು, ಹಕ್ಕು, ಸಾಚಾತನಗಳನ್ನೆಲ್ಲ ಪರಚಿಬಿಡುತ್ತಾರೆ. ಕಣ್ಣಿಗೆ ನೋವಾಗುವಂತೆ ಒತ್ತಿ ರಕ್ತ ಬರಿಸುತ್ತಾರೆ. ಒಳಗೆ ಇಷ್ಟೆಲ್ಲ ಮಾಡುವ ಈ ಜನ, ಹೊರಗೆ ರಾಷ್ಟ್ರೀಯತೆಯ ಬೀಜ ಬಿತ್ತುವ ಡೊಂಬರಾಟ ನಡೆಸುತ್ತಾರೆ. ಇದನ್ನು ಹುಸಿನಗುನಗುತ್ತ ಎದುರಿಸುವುದಿದೆಯಲ್ಲ, ಇದು ಬಲು ಕಷ್ಟದ ಕೆಲಸ. ವ್ಯಕ್ತಿ ತಾನು ಹುಟ್ಟಿ ಬೆಳೆದ ನೆಲದಲ್ಲಿ ಬೀಗಿ ಬೇರೂರಿ ನಿಂತರೂ ಕಪಟಿಗಳ ಮಧ್ಯೆ ಪರಕೀಯನಾಗಿ ಬಾಳಬೇಕಾದ ದುಸ್ತರ ಸ್ಥಿತಿಯನ್ನು ಈ ಕವನ ಬಹು ಸಮರ್ಥವಾಗಿ ಕಟ್ಟಿಕೊಡುತ್ತದೆ.
ಪ್ರಶ್ನೆ 2. ಮನುಷ್ಯನ ಕಪಟತನ ಹಾಗೂ ಸಂಶಯಬುದ್ಧಿ ಕುರಿತಂತೆ ಕವಿಯ ನಿಲುವೇನು?
ಉತ್ತರ : ಮನುಷ್ಯನ ಕಪಟತನ ಹಾಗೂ ಸಂಶಯಬುದ್ಧಿ ಕುರಿತಂತೆ ಕವಿಯ ನಿಲವು ತುಂಬಾ ವಿಶಿಷ್ಟವಾದುದು. ಮನುಷ್ಯನ ಸಂಶಯಬುದ್ಧಿಯನ್ನು ಕವಿ ಬೆಕ್ಕಿಗೆ ಹೋಲಿಸಿದ್ದು ತುಂಬಾ ಔಚಿತ್ಯಪೂರ್ಣವಾಗಿದೆ. ಕಪಟತನ ಇಂದಿನ ಯುಗದ ಮುಖ್ಯ ನೀತಿಯಾಗಿದೆ. ಒಳಗೊಂದು, ಹೊರಗೊಂದು ಇದು ಈ ಕಾಲಮಾನದ ವೈಶಿಷ್ಟ್ಯ. ಇಂದು ಕಪಟಿಗಳು ಇನ್ನೊಬ್ಬರನ್ನು ಸಲಹುವ ವೃತ್ತಿಯನ್ನೂ ಇಟ್ಟುಕೊಂಡಿದ್ದಾರೆ! ಅದೆಂಥ ಸಲಹುವಿಕೆಯೆಂದರೆ ಒಳಗೊಳಗೆ ಬೇರು ಕೊಯ್ಯುವುದು; ಲೋಕದೆದುರು ನೀರು ಹೊಯ್ಯುವುದು! ಇದೇ ಇಂದಿನವರು ಇನ್ನೊಬ್ಬರನ್ನು ಸಲಹುವ ರೀತಿ. ಇದು ನಮಗೂ ಗೊತ್ತಿದೆ. ಆದರೂ ಗೊತ್ತಿಲ್ಲದಂತೆ ನಟಿಸುವುದು ಅನಿವಾರ್ಯವಾಗಿದೆ. ಚಕಾರವೆತ್ತದೆ ಅವರೊಡನೆ ಕಾಫಿ ಹೀರಿ, ಪೇಪರ್ ಓದಿ ಹರಟೆ ಬಾಳು ತಳ್ಳುವುದು ಸಹಜವಾಗಿದೆ. ಇದು ಬಹು ಕಷ್ಟದ ಕೆಲಸ ನಿಜ. ಆದರೆ, ಈ ಪರಕೀಯ ಅನುಭವ ಈ ಯುಗದ ವಿಶಿಷ್ಟ ಕೊಡುಗೆಯೆಂಬುದನ್ನು ಮರೆಯುವಂತಿಲ್ಲ!
ಕಪಟ ಈ ಯುಗದ ವಿಶಿಷ್ಟ ಲಕ್ಷಣವೆಂದು ಹೇಳಿದ್ದಾಯಿತಷ್ಟೇ. ಕಪಟಿಗಳ ಮಾತಿನಲ್ಲಿ ಸಂಶಯದ ಬೆಕ್ಕಿದೆ ಎಂಬ ಕವಿಯ ಮಾತು ಇಲ್ಲಿ ತುಂಬಾ ಅರ್ಥಪೂರ್ಣ. ಇನ್ನೊಬ್ಬರ ನಂಬಿಕೆ, ನಿಯತ್ತು, ಹಕ್ಕು, ಕೊನೆಗೆ ಸಾಚಾತನಗಳನ್ನು ತಮ್ಮ ಸಂಶಯದ ಪಂಜಿನಿಂದ ಪರಚಿ ಸ್ವಾರ್ಥವನ್ನು ಈಡೇರಿಸಿಕೊಳ್ಳುವುದೇ ಕಪಟಿಗಳಿಗೆ ಬದುಕಾಗಿದೆ ಎಂಬುದನ್ನು ಈ ಪ್ರತಿಮೆ ಧ್ವನಿಪೂರ್ಣಗೊಳಿಸಿದೆ. ಈ ಕಪಟ ಕೂಟದ ಸಂಶಯದ ಪಂಚ್ ಇಷ್ಟಕ್ಕೇ ನಿಲ್ಲುವುದಿಲ್ಲ; ಕಣ್ಣಿಗೆ ಒತ್ತಿ ನೋವನ್ನು ತುಂಬುತ್ತದೆ, ರಕ್ತವನ್ನು ಹೊರಚೆಲ್ಲುತ್ತದೆ. ಕಪಟಿಗಳ ರಕ್ತಪಿಪಾಸೆಗೆ ಕರುಣೆ ಎಲ್ಲಿ? ಇಷ್ಟೆಲ್ಲ ಒಳಗೊಳಗೇ ಮಾಡುವ ಈ ಕಪಟ ಕೂಟ ಹೊರಗೆ ರಾಷ್ಟ್ರೀಯತೆಯ ಬಗೆಗೆ ಮಾತನಾಡುತ್ತದೆ; ರಾಷ್ಟ್ರೀಯತೆಯ ಬೀಜ ಬಿತ್ತುತ್ತದೆ. ಈ ಹುಸಿ ಕ್ಷಣವನ್ನು ನಾವೆಲ್ಲ ಹುಸಿನಗುತ್ತಲೇ ಎದುರಿಸಬೇಕು. ಇದು ಬಹು ಕಷ್ಟದ ಕೆಲಸವಾದರೂ, ತಾಳಿಕೊಳ್ಳುವುದು, ಅನುಭವಿಸುವುದು ಅಷ್ಟೇ ಅನಿವಾರ್ಯವಾಗಿದೆ ಎಂಬುದನ್ನು ಈ ಕವನ ತುಂಬಾ ಧ್ವನಿಪೂರ್ಣವಾಗಿ ಪ್ರತಿಪಾದಿಸಿದೆ.
ಪ್ರಶ್ನೆ 3. ಕಪಟಿಗಳ ಕೂಟದಲ್ಲಿ ಮನುಷ್ಯ ತನ್ನತನವನ್ನೇ ಕಳೆದುಕೊಂಡು ಪರಕೀಯನಾಗಿ ಬಾಳುವ ಅನಿವಾರ್ಯತೆಯನ್ನು ಕವಿ ಹೇಗೆ ಪ್ರತಿಪಾದಿಸಿದ್ದಾನೆ? ವಿವರಿಸಿ.
ಉತ್ತರ : ಮನುಷ್ಯ ಇಂದಿನ ಯುಗಮಾನದಲ್ಲಿ ಕಪಟಿಗಳ ಮಧ್ಯೆ ತನ್ನತನವನ್ನು ಉಳಿಸಿಕೊಂಡು ಬದುಕುವುದು ತುಂಬಾ ಕಷ್ಟದ ಕೆಲಸ. ಇಂದು ನಮ್ಮ ಸುತ್ತಮುತ್ತ ಕಪಟಿಗಳ ಕೂಟವೇ ನೆರೆದಿದೆ. ಈ ಕೂಟದ ಮಧ್ಯದಲ್ಲಿದ್ದು ಬದುಕುವುದು ತುಂಬಾ ಕಷ್ಟ. ಏಕೆಂದರೆ ಇವರೊಡನಿದ್ದು ಇವರಂತಾಗಬೇಕು, ಇವರು ಜಗ್ಗಿದ ಕಡೆ ಬಾಗಬೇಕು. ಇದು ಬೇಡವೆಂದು ಇವರೊಡನೆ ಇವರಂತಾಗದೆ, ಜಗ್ಗಿದ ಕಡೆ ಬಾಗದೆ, ನಾನು ನಾನೇ ಆಗಿ, ಈ ನೆಲದಲ್ಲೇ ಬೇರೂರಿ ನಿಂತರೂ ಪರಕೀಯನಾಗಿ ತಲೆಯೆತ್ತುವ ಕಷ್ಟ ಮಾತ್ರ ತಪ್ಪದು. ತನ್ನತನವನ್ನು ಉಳಿಸಿಕೊಂಡು ಬದುಕುವುದು ದುಷ್ಟಕೂಟದ ಮಧ್ಯೆ ಬಹು ಕಷ್ಟದ ಕೆಲಸವೇ ಆಗಿದೆ.
ಉನ್ಮತ್ತ ಕೂಟದ ಕುಡುಕರ ವೃತ್ತದಲ್ಲಿದ್ದು ಅವರಂತೆ ಬದುಕುವುದು ಬಲು ಕಷ್ಟದ ಕೆಲಸವೇ. ಇಂಥ ಉನ್ಮತ್ತರ ಕುಡಿತ-ಕುಣಿತ-ಕೂಟಗಳು ನಮ್ಮನ್ನು ಕೆಣಕಿ ಕುಣಿಕೆ ಎಸೆದಿದ್ದರೂ ಪಂಚೇಂದ್ರಿಯಗಳಿಗೆ ಲಗಾಮು ಜಡಿಯದೆ ಜಾರಿಕೊಳ್ಳುವುದು ಅಸಾಧ್ಯವಾಗಿದೆ. ಬದಲಿಗೆ, ಇವರೊಂದಿಗೆ ಸಂಯಮವನ್ನೇ ಪೋಷಿಸಬೇಕಾಗಿದೆ. ಸಂಯಮವನ್ನೇ ಸಾಕುತ್ತ ರೇಖೆಯಲ್ಲೇ ದೊಂಬರಾಟ ನಡೆಸುವುದು ಕಷ್ಟದ ಕೆಲಸವಾಗಿದೆ. ಒಟ್ಟಾರೆ, ಕಪಟಿಗಳ ಕೂಟದಲ್ಲಿ ಮನುಷ್ಯ ತನ್ನತನವನ್ನೇ ಕಳೆದುಕೊಂಡು ಪರಕೀಯನಾಗಿ ಬಾಳಬೇಕಾದ ಅನಿವಾರ್ಯತೆಯನ್ನು ಕವಿ ಇಲ್ಲಿ ತುಂಬಾ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ್ದಾನೆ.
ಎರಡು ಅಂಕದ ಪ್ರಶೋತ್ತರಗಳು
ಪ್ರಶ್ನೆ 1. 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನದ ಕರ್ತೃ ಯಾರು?
ಉತ್ತರ : 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನದ ಕರ್ತೃ ಕೆ. ಎಸ್. ನಿಸಾರ್ ಅಹಮದ್. ಕನ್ನಡದ ಪ್ರಮುಖ ಕವಿಗಳಲ್ಲಿ ನಿಸಾರ್ ಅಹಮದ್ ಒಬ್ಬರು.
ಪ್ರಶ್ನೆ 2. 'ನಿಮ್ಮೊಡನಿದ್ದೂ ನಿಮ್ಮಂತಾಗದೆ' ಕವನದ ತಿರುಳೇನು?
ಉತ್ತರ : ಗೋಸುಂಬಿ ಜನರ ನಡುವೆ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡು ಪರಕೀಯನಾಗಿ ಬದುಕಬೇಕಾದ ಅನಿವಾರ್ಯತೆಯನ್ನು ಧ್ವನಿಪೂರ್ಣವಾಗಿ ಪ್ರತಿಪಾದಿಸುವುದೇ ಈ ಕವನದ ತಿರುಳಾಗಿದೆ.
ಪ್ರಶ್ನೆ 3. ಯಾವುದು ಬಲು ಕಷ್ಟದ ಕೆಲಸ? (ಅಥವಾ) ಹೇಗೆ ತಲೆಯೆತ್ತುವುದು ಬಲು ಕಷ್ಟ?
ಉತ್ತರ : ಗೋಸುಂಬಿ ಜನರ ನಡುವೆ ಇದ್ದೂ ಅವರಂತಾಗದೆ, ಜಗ್ಗಿದ ಕಡೆ ಬಾಗದೆ, ನಾನು ನಾನೇ ಆಗಿ ಈ ನೆಲದಲ್ಲಿ ಬೇರೂರಿದ್ದರೂ ಪರಕೀಯನಾಗಿ ತಲೆಯೆತ್ತುವುದು ಬಲು ಕಷ್ಟದ ಕೆಲಸ.
ಪ್ರಶ್ನೆ 4. ಮನುಷ್ಯನನ್ನು ಯಾವುದು ಕೆಣಕಿ ಕುಣಿಕೆ ಎಸೆಯುತ್ತಿದೆ?
ಉತ್ತರ : ವೃತ್ತದಲ್ಲಿ ಉನ್ಮತ್ತರಾದ ಗೋಸುಂಬಿ ಜನರ ಕುಡಿತ, ಕುಣಿತ ಹಾಗೂ ಕೂಟಗಳು ಮನುಷ್ಯನನ್ನು ಕೆಣಕಿ ಕುಣಿಕೆ ಎಸೆಯುತ್ತಿವೆ. ಇದು ಮನುಷ್ಯ ಸಂಸ್ಕೃತಿಹೀನನಾದುದರ ದುರಂತವಾಗಿದೆ.
ಪ್ರಶ್ನೆ 5. ಬಲು ಕಷ್ಟದ ಡೊಂಬರಾಟ ಯಾವುದು?
ಉತ್ತರ : ಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ, ಗೋಸುಂಬಿಗಳ ಸಂಯಮವನ್ನೇ ಪೋಷಿಸಿ ಸಾಕುತ್ತ ರೇಖೆಯಲ್ಲೇ ನಡೆಸುವ ಡೊಂಬರಾಟ ಬಲು ಕಷ್ಟದ್ದು.
ಪ್ರಶ್ನೆ 6. ಮನುಷ್ಯ ಮನುಷ್ಯನನ್ನು ಸಲಹುವ ಕಪಟ ಎಂತಹದ್ದು?
ಉತ್ತರ : ಒಳಗೊಳಗೆ ಬೇರು ಕೊಯ್ದು, ಲೋಕದ ಎದುರಲ್ಲಿ ನೀರು ಹೊಯ್ದು ಸಲಹುವ ಕಪಟವೇ ಇಂದು ಮನುಷ್ಯ ಮನುಷ್ಯನನ್ನು ಸಲಹುವ ಕಪಟವಾಗಿದೆ.
ಪ್ರಶ್ನೆ 7. ಹರಟೆ ಬಾಳು ತಳ್ಳುವುದು ಕಷ್ಟದ ಕೆಲಸ ಏಕೆ?
ಉತ್ತರ : ಮನುಷ್ಯನ ಕಪಟತನ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ, ಚಕಾರವೆತ್ತದೆ ಅವರೊಡನೆ ಕಾಫಿ ಹೀರಿ, ಪೇಪರ್ ಓದುತ್ತಾ ಕಾಲ ಕಳೆಯಬೇಕಾಗುತ್ತದೆ. ಆದ್ದರಿಂದ ಇಂತಹ ಹರಟೆ ಬಾಳು ತಳ್ಳುವುದು ಕಷ್ಟದ ಕೆಲಸ.
ಪ್ರಶ್ನೆ 8. ಮನುಷ್ಯನ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು ಯಾವುದು?
ಉತ್ತರ : ಮನುಷ್ಯನ ಮಾತುಕತೆಗಳಲ್ಲಿ ಹುದುಗಿದ ಬೆಕ್ಕು ಸಂಶಯದ ಬೆಕ್ಕು. ಕವಿ ಇಲ್ಲಿ ಗೋಸುಂಬಿ ಜನರ ಸಂಶಯ ಮನೋಭಾವವನ್ನು ಬೆಕ್ಕಿಗೆ ಹೋಲಿಸಿದ್ದಾರೆ.
ಪ್ರಶ್ನೆ 9. ಸಂಶಯದ ಬೆಕ್ಕು ಏನನ್ನು ಪರಚುತ್ತದೆ?
ಉತ್ತರ : ಮನುಷ್ಯನ ಮಾತುಕತೆಗಳಲ್ಲಿ ಹುದುಗಿದ ಸಂಶಯದ ಬೆಕ್ಕು ತನ್ನ ಪಂಜನ್ನೆತ್ತಿ ಮನುಷ್ಯನ ನಂಬಿಕೆ, ನಿಯತ್ತು, ಹಕ್ಕು ಹಾಗೂ ಕೊನೆಗೆ ಸಾಚಾತನವನ್ನೂ ಪರಚುತ್ತದೆ.
ಪ್ರಶ್ನೆ 10. ನಾವು ನಸುನಗುತ್ತ ಎದುರಿಸುವ ಬಲು ಕಷ್ಟದ ಕೆಲಸ ಯಾವುದು?
ಉತ್ತರ : ಗೋಸುಂಬಿ ಜನರ ಸಂಶಯದ ಬೆಕ್ಕು ನಮ್ಮ ನಂಬಿಕೆಗಳನ್ನು ಪರಚಿ, ಕಣ್ಣಿಗೆ ಒತ್ತಿ ನೋವು ನೀಡಿ, ಚೆಲ್ಲಿದ ರಕ್ತದಲ್ಲಿ ನಮ್ಮೆದುರಲ್ಲೇ ರಾಷ್ಟ್ರೀಯತೆಯ ಧಾತುಗಳನ್ನು ತನಿಖೆ ಮಾಡುವ ಕ್ಷಣವನ್ನು ನಸುನಗುತ್ತ ಎದುರಿಸುವುದೇ ಬಲು ಕಷ್ಟದ ಕೆಲಸ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ