ತರಗತಿಗಳು

ಬುಧವಾರ, ಮೇ 13, 2026

ಕುವೆಂಪು ಅವರ ಸಾಲದ ಮಗು ಕಥೆಯ ಸಂಕ್ಷಿಪ್ತ ರೂಪ

 ಕುವೆಂಪು ಅವರ ಸಾಲದ ಮಗು ಕಥೆಯ ಸಂಕ್ಷಿಪ್ತ ರೂಪ 


  ಮಳೆಗಾಲ, ಕಾರಿರುಳು. ಕತ್ತಲು ಹೆಪ್ಪುಗಟ್ಟಿಕೊಂಡಿತ್ತು. ಜಗತ್ತೆಲ್ಲ ಮಸಿಯಲ್ಲಿ ಅಳಿಸಿ ಹೋದಂತಿತ್ತು. ತಡೆಯಿಲ್ಲದೆ ಜಡಿಮಳೆ ಜೋ ಬೀಳುತ್ತಿತ್ತು. ಬಿರುಸಾದ ಗಾಳಿ ಭರದಿಂದ ಬೀಸುತ್ತಿತ್ತು. ಮಲೆನಾಡಿನ ಕಾಡುತುಂಬಿದ ಮಲೆಗಳು ಆ ಕಾರ್ಗತ್ತಲೆಯಲ್ಲಿ ಮಾಯವಾಗಿದ್ದುವು. ಬಿರುಸಾಗಿ ಗಾಳಿ ಬೀಸಿದಾಗ ಅರಣ್ಯವೆಲ್ಲ ಹೋ ಎಂದು ಗರ್ಜಿಸುತ್ತಿತ್ತು.. ಗಾಳಿ ಮೃದುವಾದಾಗ ಕಾಡಿನ ಮರಗಳ ಮೇಲೆಯೂ ಮನೆಯ ಮುಂದಿನ ಅಡಕೆ ಬಾಳೆಯ ತೋಟದ ಮೇಲೆಯೂ ಮನೆಗೆ ಹೊಂದಿಸಿದ ಹೆಂಚುಗಳ ಮೇಲೆಯೂ ತೋರಹನಿಗಳು ಬಿದ್ದು ಬಿದ್ದು ಚಟ್ಟಿ, ಟಣ್ ಟಣ್, ಪಟ್.... ಎಂದು ನಾದ ಮಾಡುತ್ತಿದ್ದವು. ಆ ಮಳೆಗಾಳಿಗಳ ಜಗತ್ತು ನಾದಮಯ, ತಿಮಿರಮಯ, ವರ್ಷಮಯವಾಗಿತ್ತು. ಆ ಮಳೆ, ಆ ಗಾಳಿ, ಆ ನಿರಂತರ ನಾದ, ಆ ಕಾಲದ ಚಳಿ ಇವುಗಳಲ್ಲಿ ಮನೆಯಲ್ಲಿ ಬೆಚ್ಚಗೆ ಮಲಗಿಕೊಳ್ಳುವ ಯಾರಿಗೂ ಸಾಧ್ಯವಿಲ್ಲ. ಮನೆಯಲ್ಲಿ ಎಲ್ಲರೂ ಗಾಢನಿದ್ರೆಯಲ್ಲಿದ್ದರು. ಹೀಗಿರಲು ಒಂದು ಸಾರಿ ಗಾಳಿ ಭಯಂಕರವಾಗಿ ಬಿಸಿತು; ಮಳೆ ಭಯಂಕರವಾಗಿ ಬಿತ್ತು; ಮಿಂಚು ಭಯಂಕರವಾಗಿ ಮಿಂಚಿತು; ಕೂಡಲೆ ಭಯಂಕರ ಭಯಾನಕವಾಗಿ ಸಿಡಿಲೆರಗಿತ್ತು. ಬ್ರಹ್ಮಾಂಡವೇ ಕೆಳಗೆ ಬಿದ್ದು ಗಾಜಿನ ಬುರುಡೆಯಂತೆ ಪಟಪಟನೆ ಪುಡಿಯಾಯಿತೋ ಎಂಬಂತೆ ಸಿಡಿಲೆರಗಿತು. ಗೌಡರಿಗೆ ಧಿಗಿಲ್ಲೆಂದು ಎಚ್ಚರವಾಯಿತು. “ಸುಬ್ಬಾ! ಸುಬ್ಬಾ! ಏ ಸುಬ್ಬಾ!” ಎಂದು ಕೂಗಿ ಕರೆದರು.
  ಸುಬ್ಬನಿಗೆ ಎಚ್ಚರವಾಗಲಿಲ್ಲ. ಅವನು ಕೆಳಜಗುಲಿಯ ಒಂದು ಮೂಲೆಯಲ್ಲಿ ಯಾರೋ ದಾನ ಮಾಡಿದ್ದ ಎರಡು ಮೂರು ಚಿಂದಿ ಕಂಬಳಿಗಳನ್ನು ಬಲವಾಗಿ ಸುತ್ತಿಕೊಂಡು ಹೆದೆಯೇರಿಸಿದ ಬಿಲ್ಲಿನಂತೆ ಬಾಗಿ ಬಿದ್ದಿದ್ದನು. ಬಹಳ ಚಿಕ್ಕವನಾದ ಅವನು ಆ ದಿನವೆಲ್ಲಾ ಗದ್ದೆಯಲ್ಲಿ ದೊಡ್ಡವರೊಡನೆ ಕೆಲಸಮಾಡಿ ದಣಿದಿದ್ದನು. ಅನಾಥರಿಗೆ ಪರಮಜನನಿಯಾದ ನಿದ್ರಾದೇವಿಯ ಮಡಿಲಲ್ಲಿ ಆ ಪರದೇಶಿ ಬಾಲಕನು ಮರವಟ್ಟು ಬಿದ್ದಿದ್ದನು.
  ಗೌಡರಿಗೆ ರೇಗಿತು. ಎರಡು ಮೂರು ಸಲ ಕೂಗಿದರು. ಆ ಮಳೆಯ ಗಲಭೆಯಲ್ಲಿ ಅವರ ಧ್ವನಿ ಅವರಿಗೆ ಕೇಳಿಸುವಂತಿರಲಿಲ್ಲ. ಆದರೂ ರೇಗಿದರು. ಹಾಸಿಗೆಯಿಂದೆದ್ದು ಒಂದು ಬೆತ್ತ ತೆಗೆದುಕೊಂಡು ಮೇಲುಜಗಲಿಯಿಂದ ಕೆಳಗಿಳಿದರು.
  ಗೌಡರು ಮನೆಯ ಯಜಮಾನರು, ಶ್ರೀಮಂತರು. ಆ ಗ್ರಾಮಕ್ಕೆಲ್ಲಾ ಒಡೆಯರು. ಕಠೋರಸ್ವಭಾವದವರು. ಅವರಿಗೆ ವಯಸ್ಸು ಅರವತ್ತರ ಮೇಲಾಗಿತ್ತು. ಮೂರು ಮದುವೆಗಳಾಗಿದ್ದುವು. ನಾಲೈದು ಮನೆತನಗಳಿಗೆ ಹೆಚ್ಚು ಬಡ್ಡಿಯಮೇಲೆ ಸಾಲ ಕೊಟ್ಟು ಅವುಗಳನ್ನು ಹಾಳು ಮಾಡಿದ್ದರು. ಅವರನ್ನು ಕಂಡರೆ ಎಲ್ಲರಿಗೂ ಹುಲಿಯನ್ನು ಕಂಡಂತೆ ಭೀತಿ. ಗೌಡರು ಆ ಭೀತಿಯನ್ನು ತಮಗೆ ತೋರಿಸುವ ಗೌರವವೆಂದು ತಿಳಿದುಕೊಂಡಿದ್ದರು. ದಿನವೂ ಬ್ರಾಂದಿ ಕುಡಿಯದೆ ಅವರಿಗೆ ನಿದ್ದೆ ಬರುತ್ತಿರಲಿಲ್ಲ. ಆದರೆ ನಿಯಮ ನಿಷ್ಠೆಗಳಿಗೇನೂ ಕಡಿಮೆಯಿರಲಿಲ್ಲ. ಮೈ ತುಂಬ ಬೇಕಾದಷ್ಟು ನಾಮದ ಪಟ್ಟೆ ಹಾಕಿಕೊಳ್ಳುವರು. ನಿತ್ಯವೂ ಶಿವಪೂಜೆ ಮಾಡುವರು. ಅವರು ತಮ್ಮ ಕೋಣೆಯಲ್ಲಿ ಕುಳಿತು ಬ್ರಾಂದಿ ಕುಡಿಯುವಾಗ, ಅದನ್ನು ಶೀಸೆಯಿಂದ ಗ್ಲಾಸಿಗೆ ಹಾಕುತ್ತಾ, ಹೊರಗಿನವರು ತಾನು ದೇವರ ಧ್ಯಾನದಲ್ಲಿರುವೆನೆಂದು ತಿಳಿದುಕೊಳ್ಳಲಿ ಎಂದೂ, ಅವರಿಗೆ ಬಾಟಲಿಯ ಮುಚ್ಚಳ ತೆಗೆಯುವ ಸದ್ದೂ ಬ್ರಾಂದಿ ಹೊಯ್ಯುವ ಸದ್ದೂ ಕೇಳಿಸಬಾರದೆಂದೂ, 'ಹರಿ ನಾರಾಯಣ ಹರಿ ನಾರಾಯಣ ಹರಿ ನಾರಾಯಣ ಎನು ಮನವೆ” ಎಂದು ಗಟ್ಟಿಯಾಗಿ ರಾಗದಿಂದ ಹೇಳುವರು. ಮಳೆಗಾಲದಲ್ಲಂತೂ ಬಹಳ ಹೆಚ್ಚಾಗಿ “ಹರಿನಾರಾಯಣ” ಮಾಡುತ್ತಿದ್ದರು
  ಸುಬ್ಬ ಎಂಟು ಹತ್ತು ವರ್ಷದ ಹುಡುಗ. ಅವನ ತಂದೆ ರಂಗ ಗೌಡರ ಒಕ್ಕಲಾಗಿದ್ದನು. ಸುಬ್ಬನ ತಾಯಿ ಮಗನನ್ನು ಹೆತ್ತ ಎರಡು ವರ್ಷಗಳಲ್ಲಿಯೆ ತೀರಿಹೋಗಿದ್ದಳು. ರಂಗನು ಮತ್ತೊಂದು ಮದುವೆ ಮಾಡಿಕೊಳ್ಳಬೇಕೆಂದು ಬಹಳ ಪ್ರಯತ್ನಪಟ್ಟನು. ಹೆಣ್ಣೂ ಕೂಡ ಗೊತ್ತಾಯಿತು. ಆದರೆ ಅದಕ್ಕೆ ಮುನ್ನೂರು ರೂಪಾಯಿ ತೆರ ಕೊಡಬೇಕೆಂದು ಹೆಣ್ಣಿನವರು ಕೇಳಿದರು. ಬಡ ರಂಗ ಒಡೆಯರಾದ ಗೌಡರ ಹತ್ತಿರ ಸಾಲ ಕೇಳಿದನು. ಗೌಡರು ಅದಾಗಲೆ ರಂಗನ ಮೇಲೆ ಇದ್ದ ಮುನ್ನೂರು ರೂಪಾಯಿಗಳ ಸಾಲವನ್ನು ತೋರಿಸಿ ಇನ್ನು ಒಂದು ಕಾಸನ್ನೂ ಕೂಡುವುದಕ್ಕಾಗುವುದಿಲ್ಲ ಎಂದರು. ಹೀಗಾಗಿ ರಂಗನ ಮದುವೆ ನಿಂತಿತು. ಕೆಲ ದಿನಗಳಲ್ಲಿಯೆ ರಂಗನಿಗೆ ರೇಷ್ಮೆ ಖಾಯಿಲೆ ಬಂದು ತೀರಿಹೋದನು. ಗೌಡರು ತಮ್ಮ ಸಾಲಕ್ಕಾಗಿ ಅವನ ಮಗ ಸುಬ್ಬನನ್ನು ಮನೆಯಲ್ಲಿ ಜೀತದಾಳನ್ನಾಗಿ ಮಾಡಿ ಇಟ್ಟುಕೊಂಡು ಅಗಸರು ಕತ್ತೆಗಳ ಮೇಲೆ ಹೊರೆ ಹೊರಿಸುವಂತೆ ಆ ಬಾಲಕನ ಮೇಲೆ ಕೆಲಸಗಳನ್ನು ಹೇರತೊಡಗಿದರು. ಸುಬ್ಬನ ಕೈಲಿ ಆಗಲಿ, ಆಗದೆ ಹೋಗಲಿ ಕೆಲಸ ಮಾಡಲೇಬೇಕಿತ್ತು. ಗೌಡರೂ ಹುಡುಗನಿಗೆ ಬುದ್ಧಿ ಬರಲಿ ಎಂದು ಆಗಾಗ ಹೊಡೆಯುತ್ತಿದ್ದರು. ಸುಬ್ಬನು ದಿನದಿನವೂ ಕೃಶವಾಗುತ್ತಿದ್ದನು. ಅವನೆಲ್ಲಿಯಾದರೂ ಜ್ವರ ಬಂದು ಮಲಗಿಕೊಂಡರೆ ಗೌಡರು ಎರಡು ಗುದ್ದು ಹೇರಿ ಕೆಲಸಕ್ಕೆ ದಬ್ಬುತ್ತಿದ್ದರು. ಆ ಹುಡುಗ ಜ್ವರದ ಚಳಿಯಲ್ಲಿ ನಡುಗುತ್ತಾ ಕೆಲಸಕ್ಕೆ ಹೋಗುವನು. ಕೆಲವು ಸಾರಿ ದೊಡ್ಡವರಾದ ಇತರ ಆಳುಗಳು ಸುಬ್ಬನ ಮೇಲಿನ ಕನಿಕರದಿಂದ ಅವನನ್ನು ಮಲಗಿಕೊಳ್ಳುವಂತೆ ಹೇಳಿ ತಾವೇ ಅವನ ಕೆಲಸವನ್ನೂ ಮಾಡುತ್ತಿದ್ದರು. ಆದರೆ ಗೌಡರು ಬರುವ ಸೂಚನೆ ತಿಳಿದ ಕೂಡಲೆ ಸುಬ್ಬನನ್ನು ಎಚ್ಚರಿಸುವರು. ಅವನು ಜ್ವರದ ಭರದಲ್ಲಿ ತತ್ತರಿಸುತ್ತ ಎದ್ದು ಕೆಲಸಕ್ಕೆ ಕೈ ಹಾಕುತ್ತಿದ್ದನು. ಹೀಗೆ ಅನಾಥನು ದಿನದಿನವೂ ಸುಡುಗಾಡಿಗೆ ಸಮೀಪವಾಗುತ್ತಿದ್ದನು.
  ಗೌಡರು ಕರೆದಾಗ ಸುಬ್ಬ ನಿದ್ದೆ ಮಾಡುತ್ತಿದ್ದುದೇನೋ ಹೌದು. ಆದರೆ ಅನಾರೋಗ್ಯವಿರುವವರಿಗೆ ಕನಸಿಲ್ಲದ ನಿದ್ದೆ ಬರುವುದೆ ದುರ್ಲಭ. ಸುಬ್ಬ ಏನೇನೋ ಕನಸು ಕಾಣುತ್ತಿದ್ದನು. ಜಾಗೃದವಸ್ಥೆಯಲ್ಲಿ ತನಗಿಲ್ಲದ ಸುಖಗಳನ್ನು ಕಂಡುಂಡು ಸವಿಯುತ್ತಿದ್ದನು. ನನಸಿನಲ್ಲಿ ಲಭಿಸದ ಬಯಕೆಗಳು ಕನಸಿನಲ್ಲಿ ಕೈಗೂಡುವುದು ಸ್ವಭಾವ. ಸುಬ್ಬ ಕನಸಿನಲ್ಲಿ ತಂದೆತಾಯಿಯರೊಡನೆ ಒಂದು ಸುಂದರವಾದ ಸೌಧದಲ್ಲಿ ನಲಿಯುತ್ತಿದ್ದನು.ಅಲ್ಲಿ ಬೇಕಾದಷ್ಟು ಉಡುಗೆ ತೊಡುಗೆಗಳನ್ನು ಧರಿಸಿದ್ದನು. ಅಲ್ಲಿ ಅವನು ಕೆಲಸ ಮಾಡಬೇಕಾಗಿಯೆ ಇರಲಿಲ್ಲ. ಕೈಗೆ ಕಾಲಿಗೆ ಆಳುಗಳಿದ್ದರು. ಜೊತೆಗೆ ಆಡಲು ಹುಡುಗರಿದ್ದರು. ವಿಧವಿಧವಾದ ಭಕ್ಷ್ಯಭೋಜ್ಯಗಳು ಅವನು ತಿಂದು ತಿಂದು ಮಿಗುವಷ್ಟಿದ್ದುವು. ಗೌಡರು ಬೆತ್ತದಿಂದ ರಪ್ಪ ರಪ್ಪನೆ ಹೊಡೆದಾಗ ಅವನು ಚೀರಿ ಹಾರಿಬಿದ್ದನು. ಕಣ್ಣೆರೆದು ನೋಡಿದರೆ ಲಾಟಿನ ಬೆಳಕಿನಲ್ಲಿ ಗೌಡರ ರುದ್ರಮೂರ್ತಿ! ಸುಬ್ಬ “ಅಯ್ಯೋ! ದಮ್ಮಯ್ಯ!” ಎಂದು ಸುತ್ತಿದ್ದ ಕಂಬಳಿಯನ್ನು ಬೇಗಬೇಗನೆ ಬಿಚ್ಚಿಕೊಂಡು ಎದ್ದನು. ಗೌಡರು “ಏನೋ ಕಳ್ಳಮಗ, ಕರೆದರೆ ಸುಳ್ಳುನಿದ್ದೆ ಮಾಡಿಕೊಂಡು ಮಲಗಿದ್ದೀಯ?” ಎಂದು ಮತ್ತೊಂದು ಏಟು ಹೊಡೆದರು.ಸುಬ್ಬ ಒರಲುತ್ತಾ ಕಣ್ಣೀರು ಸುರಿಸುತ್ತಾ ನಿಂತನು. ಅವನಿಗೆ ನೋವಲ್ಲದೆ ಬೇರೆ ಯಾವುದೂ ಸರಿಯಾಗಿ ಅರ್ಥವಾಗಲೇ ಇಲ್ಲ.
  ಗೌಡರು ಕಠೋರ ಧ್ವನಿಯಿಂದ “ಹೋಗೋ! ನಡಿಯೋ! ಗದ್ದೇಲಿ ಹಾಕಿದ್ದ ಕೂಣಿ ನೋಡಿಕೊಂಡು ಬಾರೊ” ಎಂದು ಮತ್ತೆ ಬೆತ್ತ ಎತ್ತಿದರು. 
  ಸುಬ್ಬ “ಹೋಗೀನಯ್ಯಾ” ಎಂದು ದೀರ್ಘವಾಗಿ ಕೂಗಿದನು.  
  ಮಳೆಗಾಲದಲ್ಲಿ ಹತ್ತು ಮೀನಿನ (ಮೀನು ಹತ್ತುವ) ಸಮಯದಲ್ಲಿ ರೈತರು ಕೂಣಿ ಹಾಕಿ ಮೀನು ಹಿಡಿಯುತ್ತಾರೆ. ದಿನಕ್ಕೆ ಏಳೆಂಟು ಬುಟ್ಟಿಗಿಂತಲೂ ಹೆಚ್ಚಾಗಿ ಮೀನು ಸಿಕ್ಕುತ್ತವೆ. ಆ ದಿನ ಹಗಲಿನಲ್ಲಿಯೇ ಗೌಡರು ನಾಲ್ಕೈದು ಬುಟ್ಟಿ ಮೀನು ಸಿಕ್ಕಿದ್ದನ್ನು ನೋಡಿದ್ದರು. ರಾತ್ರಿ ಕೂಣಿ ತುಂಬಿ ಮೀನ ಉಕ್ಕಿ ಹೋಗುತ್ತವೆ ಅಥವಾ ನೀರಿನ ಪ್ರವಾಹದಲ್ಲಿ ಕೂಣಿ ಕೊಚ್ಚಿಕೊಂಡು ಎಂದು ಅವರಿಗೆ ಭಯ. ಅದಕ್ಕಾಗಿಯೆ ನಡುರಾತ್ರಿಯಲ್ಲಿ ಹೊಡೆದು ಎಬ್ಬಿಸಿದ್ದು.
  ಸುಬ್ಬನು ದೊಡ್ಡದೊಂದು ಮೀನು ಬುಟ್ಟಿ ಹೊತ್ತುಕೊಂಡು, ಕೈಯಲ್ಲಿ ಲಾಟೀನ್ ಹಿಡಿದುಕೊಂಡು, ಕಂಬಳಿಕೊಪ್ಪ ಹಾಕಿಕೊಂಡು ಹೊರಟನು.ಗೌಡರು ಮರಳಿ ಹೋಗಿ ಬೆಚ್ಚಗೆ ಮಲಗಿ ನಿದ್ದೆ ಮಾಡಿದರು.
  ಮಳೆ ಸುರಿಯುತ್ತಲೆ ಇತ್ತು. ಗಾಳಿ ಮಿಂಚು ಗುಡುಗುಗಳೂ ನಿಂತಿರಲಿಲ್ಲ. ಕತ್ತಲೆ ಕ್ರೂರವಾಗಿತ್ತು. ಹಾದಿಯ ತುಂಬಾ ಕೆಸರು. ಸುಬ್ಬನು ಕಾಲಿಟ್ಟಂತೆಲ್ಲಾ ಪಿಚಪಿಚನೆ ಹಾರುತಿತ್ತು. ಲಾಟೀನಿಗೆ ಕೆಸರಾದರೆ ಗೌಡರು ಮತ್ತೆ ಎಲ್ಲಿ ಹೊಡೆಯುತ್ತಾರೆಯೊ ಎಂದು ಹೆದರಿ ಅದನ್ನು ಶಕ್ತಿಮೀರಿ ಎತ್ತಿ ಹಿಡಿದುಕೊಂಡು ನಡೆದನು. ಕೂಣಿ ಇದ್ದ ಸ್ಥಳ ಎಂಟು ಹತ್ತು ಫರ್ಲಾಂಗುಗಳಷ್ಟು ದೂರವಾಗಿತ್ತು. ಸುಬ್ಬ ನಡೆದನು. ರುದ್ರಪ್ರಕೃತಿಯ ಹೊರತು ಮತ್ತೊಂದು ಜೀವಜಂತು ಹೊರಗಿರಲಿಲ್ಲ. ಹೋಗುತ್ತಾ ಸುಬ್ಬ ಒಂದು ಗದ್ದೆ ಅಂಚಿನಿಂದ ಮತ್ತೊಂದು ಗದ್ದೆ ಅಂಚಿಗೆ ಹಾರುತ್ತಿದ್ದಾಗ ಕೆಸರಿನಲ್ಲಿ ಕಾಲು ಜಾರಿ ಬಿದ್ದು ಲಾಟೀನು ಒಡೆದುಹೋಯಿತು. ದೀಪ ನಂದಿತು. ಸುಬ್ಬ ಕಗ್ಗತ್ತಲಲ್ಲಿ ಮುಳುಗಿ ಕರಗಿಯೆ ಹೋದಂತಾಯಿತು. ಗದ್ದೆಯಂಚಿನ ಮೇಲೆ ಕುಳಿತು ಅತ್ತನು. ಲಾಟೀನು ಒಡೆದುದಕ್ಕಾಗಿ ಅತ್ತು ಅತ್ತು, ಮನೆಗೆ ಮೀನು ತಾರದೆ ಹಿಂದಿರುಗಿದರೆ ಏನು ಗತಿಯಾಗುವುದೊ ಎಂದು ಹೆದರಿ, ಮತ್ತೆ ಆ ಕತ್ತಲಲ್ಲಿಯೆ ಆ ಮಳೆ ಗಾಳಿಗಳ ಪ್ರಚಂಡ ಪ್ರಲಯದಲ್ಲಿ ಮುಂಬರಿದನು. ಮಿಂಚಿನ ಬೆಳಕಿನಲ್ಲಿ ಊಹೆಯ ಮೇಲೆಯೆ ನಡೆದು ಕೂಣಿಯಿದ್ದ ತಾವನ್ನು ಕಂಡುಹಿಡಿಯಲೆಂದು ಬೀಳುತ್ತ ಏಳುತ್ತ ಅಳುತ್ತ ಹೋದನು. ಆ ನಿಷ್ಕರುಣ ಪ್ರಕೃತಿಯ ಭಯಂಕರ ಸನ್ನಿವೇಶದಲ್ಲಿ ಬಾಲಕ ಕಡಲಲ್ಲಿ ತೇಲುವ ಹುಲ್ಲು ಎಸಳಿನಂತೆ ತೇಲಿಹೋದನು.
  ಚಳಿ ಹೆಚ್ಚಾಯಿತು. ಕಂಬಳಿಯನ್ನು ಮತ್ತಷ್ಟು ಬಲವಾಗಿ ಸುತ್ತಿಕೊಂಡನು. ನಡುನಡುವೆ ಏನನ್ನೋ ಕಂಡವನಂತೆ ಬೆಚ್ಚಿ ನಡುಗಿದನು. ಕಡೆಗೆ ಕೂಣಿಯ ಬಳಿ ಬಂದನು.
ಸುಬ್ಬನು ಕೂಣಿಯ ಬಳಿ ಸೇರಿ ಕೈಯಲ್ಲಿದ್ದ ಬುಟ್ಟಿಯನ್ನು ಕೆಳಗಿಟ್ಟು ಬಹು ಪ್ರಯಾಸದಿಂದ ಕೂಣಿಯನ್ನೆತ್ತಿದನು. ಕೂಣಿ ಮೀನಿನಿಂದ ತುಂಬಿ ಹೋಗಿತ್ತು. ಒಳಗೆ ಮೀನು ಚೋಳ ಚೊಳ್' ಎಂದು ಸದ್ದು ಮಾಡುತ್ತಿದ್ದುವು. ಕೆಲವು ಕೂಣಿಯ ಒಳಪಕ್ಕಕ್ಕೆ ಹಾರಿ ಬಡಿದು ಬೀಳುತ್ತಿದ್ದುವು. ಸುಬ್ಬ ಕೂಣಿಯನ್ನು ಎತ್ತಿ ಅಂಚಿನ ಮೇಲೆ ಇಟ್ಟನು. ಇಟ್ಟು ಪನ್ನೆಯನ್ನು ಈಚೆಗೆ ತೆಗೆದನು. (ಪನ್ನೆ ಎಂದರೆ ಸೀಮೆ ಎಣ್ಣೆಯನ್ನು ನೆಟ್ಟ ಬಿದಿರಿನ ಕುಳ್ಳೆ. ಪನ್ನೆಯನ್ನು ಹಣಿಯ ಮೇಲೆ ಇಟ್ಟಿರುತ್ತಾರೆ.)
  ಒಡನೆಯೆ ಮೀನು ತಿನ್ನಲೆಂದು ಬಂದು ಅದರೊಳಗಿದ್ದ ಒಂದು ಕೃಷ್ಣಸರ್ಪ ಬುಸ್ಸೆಂದು ಚಿಮ್ಮಿ ಸುಬ್ಬನನ್ನು ಕಚ್ಚಿ ಓಡಿಹೋಯಿತು. ಸುಬ್ಬ ಕಿಟ್ಟನೆ ಚೀರಿದನು. ವಿಷವೇರಿ ಕೆಳಗೆ ಬಿದ್ದನು. ಬೆಳಗಾದ ಮೇಲೆ ಗೌಡರು ಸುಬ್ಬ ಬಾರದಿದ್ದನ್ನು ನೋಡಿ ಬಹಳ ರೇಗಿದರು. ರಾತ್ರಿ ಕೂಣಿಗೆ ಹೋಗದೆ ಮನೆಯಲ್ಲಿಯೇ ಎಲ್ಲಿಯೋ ಅಡಗಿರಬೇಕೆಂದು ಕೈಯಲ್ಲಿ ದೊಡ್ಡ ದೊಣ್ಣೆ ಹಿಡಿದು ಹುಡುಕಿದರು. ಎಲ್ಲಿಯೂ ಸಿಕ್ಕಲಿಲ್ಲ. ಮತ್ತೂ ರೇಗಿದರು. ಯಾರ ಮನೆಗೋ ಹೋಗಿ ಮಲಗಿರಬೇಕು ಎಂದು ಸಿಡಿಲಿದರು. ಕಡೆಗೆ ತಾವೇ ಒಬ್ಬ ಆಳನ್ನು ಜೊತೆಗೆ ಕರೆದುಕೊಂಡು ಅವನನ್ನು ಪತ್ತೆಹಚ್ಚಲು ಹೊರಟರು. ದಾರಿಯಲ್ಲಿ ಗದ್ದೆಯಂಚಿನ ಬಳಿ ಒಡೆದ ಲಾಟೀನು ಬಿದ್ದಿತ್ತು. ಅಲ್ಲಿಯೂ ರೇಗಿದರು. "ಅವನು ಸಿಕ್ಕಲಿ, ಎಲುಬು ಮುರಿಯುತ್ತೇನೆ” ಎಂದು ಗರ್ಜಿಸಿದರು. ಮುಂದೆ ಮುಂದೆ ಹೋದರು. ಕೂಣಿ ಸಮೀಪವಾಯಿತು! ದೂರದಿಂದಲೆ ಕೂಣಿ ಮಗುಚಿಕೊಂಡು ಅಂಚಿನ ಮೇಲೆ ಬಿದ್ದಿದ್ದುದನ್ನು ಕಂಡು “ಅಯ್ಯೋ, ಹಾಳು ಬಡ್ಡಿಮಗ; ಮೀನೂ ಸಿಕ್ಕದಂತೆ ಮಾಡಿದ್ದಾನಲ್ಲಾ!” ಎಂದುಕೊಂಡರು. ಇನ್ನೂ ಹತ್ತಿರ ಹೋದರು. ಸೊಂಟದೆತ್ತರ ಬೆಳೆದ ಗದ್ದೆಯ ಕೆಯಿಯ ನಡುವೆ ಕೆಸರು ಮೆತ್ತಿಕೊಂಡು ಸುಬ್ಬ ಬಿದ್ದಿದ್ದನು. ಗೌಡರಿಗೆ ಸ್ವಲ್ಪ ಗಾಬರಿಯಾಯಿತು. ಕರೆದರು. ಓಕೊಳ್ಳಲಿಲ್ಲ. ಏಳಲಿಲ್ಲ. ಅಲುಗಾಡಲಿಲ್ಲ. ಜೊತೆ ಬಂದಿದ್ದ ಆಳಿನ ಕೈಯಲ್ಲಿ ಎತ್ತಲು ಹೇಳಿದರು. ಅವನು ಹೋಗಿ ಎತ್ತಿದನು. ಹೆಣ ನಿಮಿರಿ ನಿಂತಿತು!
  ಗೌಡರು ಬಹಳ ವ್ಯಸನಪಟ್ಟಕೊಂಡು, “ಅಂತೂ ಮುನ್ನೂರು ರೂಪಾಯಿ ಮನೆಗೆ ಬಂತು!” ಎಂದು ನಿಡುಸುಯ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಮಾಯಾ ಲೋಕ – ಪೂರ್ಣಚಂದ್ರ ತೇಜಸ್ವಿ | 1, 5, 8 ಅಂಕದ ಪ್ರಶ್ನೋತ್ತರಗಳು | BA ಕನ್ನಡ ಪರೀಕ್ಷಾ ನೋಟ್ಸ್

ಮಾಯಾ ಲೋಕ – ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಎಂಟು ಅಂಕದ ಪ್ರಶ್ನೋತ್ತರಗಳು ಪ್ರಶ್ನೆ ೧. ಹಕ್ಕಿಪಿಕ್ಕಿಗಳು ಹುಂಡುಕೋಳಿಗಳನ್ನು ಹಿಡಿದ ಸಂದರ್ಭವನ್ನು ವಿವರಿಸಿ. ಉತ್ತರ: ಕೆ...